
ಚಿತ್ರದುರ್ಗ: ಅಡಿಕೆ, ಮಾವು, ದಾಳಿಂಬೆ ಬೆಳೆದ ರೈತರು ನಷ್ಟ ಅನುಭವಿಸಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು 20 ತಿಂಗಳುಗಳಿಂದಲೂ ವಿಮಾ ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಶೀಘ್ರ ಪರಿಹಾರ ಬಾರದಿದ್ದರೆ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಎಚ್ಚರಿಕೆ ನೀಡಿದರು.
ತೋಟಗಾರಿಕೆ ಇಲಾಖೆ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆ ವೇಳೆ ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ವಿಮಾ ಕಂಪನಿಗಳ ಜೊತೆ ಶಾಮೀಲಾಗಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ವರ್ಷದಿಂದಲೂ ಇಲಾಖಾ ಕಚೇರಿಗೆ ಅಲೆದು ರೈತರು ಹೈರಾಣಾಗಿದ್ದಾರೆ. ಅಧಿಕಾರಿಗಳ ಮನೋಭಾವ ಬದಲಾಗದಿದ್ದರೆ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರು ವಿಮೆ ತುಂಬುವಾಗ ಕೊನೆ ದಿನಾಂಕ ನಿಗದಿ ಮಾಡಿ ಪ್ರಕಟಣೆ ಹೊರಡಿಸುತ್ತಾರೆ. ಆದರೆ, ರೈತರಿಗೆ ವಿಮಾ ಪರಿಹಾರದ ಮೊತ್ತ ಪಾವತಿ ಮಾಡಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅಧಿಕಾರಿಗಳು ವಿಮಾ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವ ಕಾರಣ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಎಷ್ಟು ವಿಳಂಬವಾಗಿದೆಯೋ ಅಷ್ಟಕ್ಕೆ ಶೇ 12 ಬಡ್ಡಿ ಸೇರಿಸಿ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಶೀಘ್ರ ವಿಮಾ ಮೊತ್ತ ಬಾರದಿದ್ದರೆ ವಿಮಾ ಕಂಪನಿಯ ಅಧಿಕಾರಿಗಳನ್ನು ಕಚೇರಿಯಲ್ಲಿ ಕೂಡಿಹಾಕಿ ಇಲ್ಲೇ ಅಡಿಗೆ ಮಾಡಿಕೊಂಡು ಅಹೋರಾತ್ರಿಯ ಧರಣಿ ಮಾಡುತ್ತೇವೆ. ಸರ್ಕಾರದ ಸೂಚನೆಗಳು, ಕಾನೂನುನನ್ನು ಅಧಿಕಾರಿಗಳು ಗಾಳಿಗೆ ತೂರುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸೌಲಭ್ಯಗಳನ್ನು ರೈತರಿಗೆ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ತೋಟಗಾರಿಕೆ ಇಲಾಖೆಯಲ್ಲಿ ಕಳಪೆ ಗೊಬ್ಬರ ವಿತರಿಸುತ್ತಾರೆ. ಡ್ರಿಪ್ ಅಳವಡಿಸಲು ಅವಕಾಶ ನೀಡದೆ ಏಜೆನ್ಸಿಗಳ ಮೂಲಕ ಡ್ರಿಪ್ ಕಾಮಗಾರಿ ಮಾಡುತ್ತಾರೆ. ಇಡೀ ಬಯಲುಸೀಮೆಯ ತೋಟಗಾರಿಕೆ ಬೆಳೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ಅನುದಾನ ಬಂದರೂ ಸೂಕ್ತ ಸಮಯದಲ್ಲಿ ರೈತರಿಗೆ ವಿತರಿಸದೆ ವಂಚಿಸಿರುತ್ತಾರೆ. ಇದು ಹೀಗೆಯೇ ಮುಂದುವರಿದರೆ ಫೆ. 20ರಂದು ಫಲ–ಪುಷ್ಪ ಪ್ರದರ್ಶನಕ್ಕೆ ಬರುವ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತೋಟಗಾರಿಕೆ ಇಲಾಖೆ ಜಂಟಿ ನರ್ದೇಶಕಿ ಸವಿತಾ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. 15 ದಿನದೊಳಗೆ ಎಲ್ಲಾ ರೈತರಿಗೂ ಬೆಳೆ ವಿಮೆ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಕೆ.ಟಿ. ತಿಪ್ಪೇಸ್ವಾಮಿ, ರೆಡ್ಡಿಹಳ್ಳಿ ವೀರಣ್ಣ, ಬಸವ ರೆಡ್ಡಿ, ರಂಗಸ್ವಾಮಿ, ವೆಂಕಟೇಶ್ , ಮಹೇಶ್, ರವಿಕುಮಾರ್, ನಾಗರಾಜ್, ಸಣ್ಣ ತಿಮ್ಮಣ್ಣ, ಗಿರೀಶ್, ವಿರೂಪಾಕ್ಷಪ್ಪ, ಮಂಜುನಾಥ್, ರಾಮಕೃಷ್ಣ, ಬಾಲಕೃಷ್ಣ, ಶಿವಕುಮಾರ್, ಶಿವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.