ADVERTISEMENT

ಚಿತ್ರದುರ್ಗ: ಕೋಟೆ ವೀಕ್ಷಣೆಗೆ ಕುಸಿದ ಪ್ರವಾಸಿಗರ ಸಂಖ್ಯೆ

ಹೊಸ ವರ್ಷಾಚರಣೆ; ಚಂದ್ರವಳ್ಳಿ, ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲೂ ಕೊರತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 5:59 IST
Last Updated 2 ಜನವರಿ 2025, 5:59 IST
ಹೊಸ ವರ್ಷದ ಅಂಗವಾಗಿ ಕಲ್ಲಿಕೋಟೆಗೆ ವೀಕ್ಷಣೆಗೆ ಬಂದ ಯುವಜನ
ಹೊಸ ವರ್ಷದ ಅಂಗವಾಗಿ ಕಲ್ಲಿಕೋಟೆಗೆ ವೀಕ್ಷಣೆಗೆ ಬಂದ ಯುವಜನ   

ಚಿತ್ರದುರ್ಗ: ಹೊಸ ವರ್ಷದ ಅಂಗವಾಗಿ ಬುಧವಾರ ನಗರದ ಕಲ್ಲಿನ ಕೋಟೆ ವೀಕ್ಷಣೆಗೆ ಬಂದ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಉಂಟಾಗಿತ್ತು. 30,000ಕ್ಕೂ ಹೆಚ್ಚು ಪ್ರವಾಸಿಗರು ಕೋಟೆ ವೀಕ್ಷಣೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು.

ಕಳೆದೊಂದು ದಶಕದಿಂದಲೂ ಹೊಸ ವರ್ಷದ ದಿನ ಕೋಟೆ ವೀಕ್ಷಣೆಗೆ ನೂಕು ನುಗ್ಗಲು ಉಂಟಾಗುತ್ತಿತ್ತು. ಜನರನ್ನು ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿ, ಎಎಸ್‌ಐ ಅಧಿಕಾರಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಹೀಗಾಗಿ ಕೋಟೆ ಮುಂಭಾಗದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಭದ್ರತೆಗೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು.

ಪ್ರವಾಸಿಗರು ಸಾಲಿನಲ್ಲಿ ಬಂದು ಟಿಕೆಟ್‌ ಪಡೆಯಲು ಅನುಕೂಲವಾಗುವಂತೆ ಕಂಬಗಳನ್ನು ನೆಟ್ಟು ವ್ಯವಸ್ಥೆ ಮಾಡಲಾಗಿತ್ತು. ಆನ್‌ಲೈನ್‌ ಜೊತೆಗೆ, ಆಫ್‌ಲೈನ್‌ ಟಿಕೆಟ್‌ ನೀಡುವ ಸೌಲಭ್ಯವನ್ನೂ ಮಾಡಲಾಗಿತ್ತು. 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಆದರೆ, ಪ್ರವಾಸಿಗರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು ಸಿಬ್ಬಂದಿ ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

ADVERTISEMENT

ಪ್ರತಿ ವರ್ಷ ಹೊಸ ವರ್ಷದ ದಿನ 6 ಗಂಟೆಯಿಂದಲೇ ಅಪಾರ ಸಂಖ್ಯೆಯ ಪ್ರವಾಸಿಗರು ದೂರದ ಊರುಗಳಿಂದ ಬರುತ್ತಿದ್ದರು. ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಬುಧವಾರ ಬೆಳಿಗ್ಗೆ 11.15ರವರೆಗೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಇರಲಿಲ್ಲ. 11.30ರ ನಂತರ ಸಂಖ್ಯೆಯಲ್ಲಿ ಏರಿಕೆಯಾಯಿತು. ನಂತರ ಮತ್ತೆ ಮಧ್ಯಾಹ್ನ 3 ಗಂಟೆಯ ನಂತರ ಯಥಾಸ್ಥಿತಿಯಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಉಂಟಾಯಿತು.

‘ಪ್ರತಿ ವರ್ಷ 30,000ಕ್ಕೂ ಹೆಚ್ಚು ಜನರು ಕೋಟೆ ವೀಕ್ಷಣೆಗೆ ಬರುತ್ತಿದ್ದರು. ಆದರೆ ಈ ಬಾರಿ 6,500 ಮಂದಿ ಮಾತ್ರ ಭೇಟಿ ಕೊಟ್ಟಿದ್ದಾರೆ. ನಮ್ಮ ನಿರೀಕ್ಷೆಗಿಂತ ತೀವ್ರವಾಗಿ ಕುಸಿತ ಕಂಡಿದೆ. ಪ್ರತಿದಿನಕ್ಕಿಂತ ಬುಧವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ ನಿರೀಕ್ಷೆಯಂತೆ ಜನಜಂಗುಳಿ ಉಂಟಾಗಲಿಲ್ಲ. ವಾರದ ದಿನದಲ್ಲಿ ಹೊಸ ವರ್ಷ ಬಂದಿರುವ ಕಾರಣ ಪ್ರವಾಸಿಗರು ಬಂದಿಲ್ಲ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ತಪ್ಪು ತಿಳಿದ ಪ್ರವಾಸಿಗರು:

ರಾಜ್ಯದ ವಿವಿಧೆಡೆ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ನದಿ, ಸಮುದ್ರ ತೀರದ ತಾಣಗಳಿಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚಿತ್ರದುರ್ಗದ ಕೋಟೆಗೂ ಪ್ರವೇಶ ನಿರ್ಬಂಧ ಇರಬಹುದು ಎಂದು ತಪ್ಪು ತಿಳಿದಿರುವ ಕಾರಣ ಪ್ರವಾಸಿಗರು ಕೋಟೆ ಭೇಟಿಯಿಂದ ದೂರ ಉಳಿದಿದ್ದಾರೆ. ಕೋಟೆ ಭೇಟಿಗೆ ನಿರ್ಬಂಧ ಇಲ್ಲ ಎಂದು ಪೊಲೀಸರು, ಎಎಸ್‌ಐ ಸಿಬ್ಬಂದಿ ವ್ಯಾಪಕ ಪ್ರಚಾರ ಮಾಡಬೇಕಾಗಿತ್ತು ಎಂದು ಕೆಲ ಪ್ರವಾಸಿಗರು ತಿಳಿಸಿದರು.

ಚಂದ್ರವಳ್ಳಿ ತೋಟ, ಆಡುಮಲ್ಲೇಶ್ವರ ಕಿರು ಮೃಗಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ನಿಯಂತ್ರಣಕ್ಕಾಗಿ ವಿಶೇಷ ಸಿದ್ಧತಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ, ಅಲ್ಲೂ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಕಡಿಮೆ ಇತ್ತು. ಹೆಚ್ಚಿನ ಜನ ಸೇರುತ್ತಾರೆ ಎಂಬ ಕಾರಣದಿಂದ ಹಣ್ಣು ಹಂಪಲು ಮಾರುವವರು, ಚುರುಮುರಿ, ಐಸ್‌ಕ್ರೀಸ್‌ ಮುಂತಾದ ತಿನಿಸು ಮಾರುವ ವ್ಯಾಪಾರಿಗಳ ಹೆಚ್ಚು ಸೇರಿದ್ದರು. ಆದರೆ ಪ್ರವಾಸಿಗರ ಸಂಖ್ಯೆಯಲ್ಲೇ ಕಡಿಮೆಯಾದ ಕಾರಣ ವ್ಯಾಪಾರಿಗಳು ನಿರಾಸೆ ಅನುಭವಿಸಿದರು.

‘ಚಂದ್ರವಳ್ಳಿಯಲ್ಲಿ ಹುಡುಗ– ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಕೆರೆ ಬಳಿ, ಗುಡ್ಡದ ಮೇಲೆ ಕೇಕ್‌ ಕತ್ತರಿಸಿ ಹೊಸ ವರ್ಷ ಆಚರಿಸುತ್ತಿದ್ದರು. ಆದರೆ, ಇತ್ತೀಚೆಗೆ ಭದ್ರತಾ ಸಿಬ್ಬಂದಿ ಹುಡುಗ– ಹುಡುಗಿಯರ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಅನೈತಿಕ ಚಟುವಟಿಕೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅನುಮಾನ ಬಂದವರಿಂದ ಆಧಾರ್‌ ಕಾರ್ಡ್‌ ಪಡೆದು ಒಳಗೆ ಬಿಡಲಾಗುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದೆ’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸೇರುವ ನಿರೀಕ್ಷೆ ಹುಸಿ ಹೆಚ್ಚಿನ ಜನರು ಬಾರದ ಕಾರಣ ವ್ಯಾಪರಿಗಳಿಗೆ ನಿರೀಕ್ಷೆ ಕಿರು ಮೃಗಾಲಯ, ಚಂದ್ರವಳ್ಳಿಯಲ್ಲೂ ಜನರ ಕೊರತೆ

ದೇವಾಲಯಗಳಲ್ಲಿ ವಿಶೇಷ ಪೂಜೆ

ಹೊಸವರ್ಷದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೋಟೆ ಮೇಲಿನ ಏಕನಾಥೇಶ್ವರಿ ಕೋಟೆ ತಟದ ಉತ್ಸವಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಆನೆಬಾಗಿಲು ರಾಘವೇಂದ್ರ ಮಠದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಬರಗೇರಮ್ಮ ದೇವಾಲಯ ತಿಪ್ಪಿನಘಟ್ಟಮ್ಮ ದೇವಾಲಯ ಕಣಿವೆ ಮಾರಮ್ಮ ದೇವಾಲಯಗಳಲ್ಲೂ ವಿಶೇಷ ಧಾರ್ಮಿಕ ಆಚರಣೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.