ಮೊಳಕಾಲ್ಮುರು ತಾಲ್ಲೂಕಿನ ಊಡೇವು ಅಂಗನವಾಡಿ ಕೇಂದ್ರದಲ್ಲಿ ರೈತರ ಬದುಕನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಿರುವುದು
ಮೊಳಕಾಲ್ಮುರು: ತಾಲ್ಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಪ್ರಾತ್ಯಕ್ಷಿಕೆಯ ಮಾದರಿ ಅಳವಡಿಸಿ ಮಕ್ಕಳಿಗೆ ಬೋಧನೆ ಮಾಡುತ್ತಿರುವ ಪರಿಣಾಮ, ಹಾಜರಾತಿ ಮತ್ತು ಕಲಿಕಾ ಗುಣಮಟ್ಟ ಸುಧಾರಣೆಯಾಗಿದೆ.
ನಿತ್ಯದ ಜನಜೀವನದ ಭಾಗವಾಗಿರುವ ಕೃಷಿ, ಆಸ್ಪತ್ರೆ, ವಾರದ ಸಂತೆ, ಹೂವಿನ ತೋಟ, ಪೊಲೀಸ್ ಠಾಣೆ, ಕಿರಾಣಿ ಅಂಗಡಿ ಸೇರಿದಂತೆ ಹಲವು ವಿಚಾರಗಳನ್ನು ಎಳೆಯ ಮಕ್ಕಳಿಗೆ ಪರಿಚಯಿಸುವ ಯತ್ನವು ಆಂಧ್ರ ಗಡಿ ಭಾಗದ ಹಳ್ಳಿಗಳಲ್ಲಿ ನಡೆಯುತ್ತಿದೆ.
ಅಂಗನವಾಡಿ ಮಕ್ಕಳಿಗೆ ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ವಿವಿಧ ವೇಷಭೂಷಣಗಳನ್ನು ತೊಡಿಸಿ, ಇತರೆ ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ. ಮಕ್ಕಳು ಆಸಕ್ತಿಯಿಂದ ಅಂಗನವಾಡಿ ಕೇಂದ್ರಗಳತ್ತ ಮುಖ ಮಾಡಲು ಈ ಪ್ರಯೋಗ ಅನುವು ಮಾಡಿಕೊಟ್ಟಿದೆ ಎನ್ನುತ್ತಾರೆ ಅಧಿಕಾರಿಗಳು.
‘ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದುಬಾರಿ ಡೊನೇಷನ್ ಕೊಟ್ಟು ಎಲ್‌ಕೆಜಿ, ಯುಕೆಜಿ ಶಿಕ್ಷಣ ಕೊಡಿಸಲು ಆಗದ ಪಾಲಕರು ಅಂಗನವಾಡಿಗಳನ್ನು ಅವಲಂಬಿಸಿದ್ದಾರೆ. ಕೆಲ ಶಿಕ್ಷಕಿಯರ ಈ ಪ್ರಯತ್ನವು ಖಾಸಗಿ ಖಾಲೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿದ್ದು, ಪಾಲಕರ ಸಂಸತಕ್ಕೆ ಕಾರಣವಾಗಿದೆ’ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಹೇಳಿದರು.
‘ಬೊಮ್ಮದೇವರಹಳ್ಳಿ ಕೇಂದ್ರ- ಎ, ಅದೇ ಗ್ರಾಮದ ಕೇಂದ್ರ-ಸಿ, ಆಂಧ್ರ ಗಡಿಯ ಉಡೇವು, ಕೋನಸಾಗರ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು ಪ್ರಾತ್ಯಕ್ಷಿಕೆ ಮಾದರಿಯ ಬೋಧನೆ ಅಳವಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ತರಬೇತಿ ನೀಡಿ, ಉಳಿಕೆ ಕೇಂದ್ರಗಳಲ್ಲಿಯೂ ಅನುಷ್ಠಾನಕ್ಕೆ ಬರುವಂತೆ ಮಾಡಲಾಗುವುದು. ಕೇಂದ್ರಗಳಿಗೆ ಸರ್ಕಾರ ನೀಡಿರುವ ಆ್ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಪ್ರಾತ್ಯಕ್ಷಿಕೆಯನ್ನು ಚಿತ್ರೀಕರಿಸಿ ವಾಟ್ಸ್‌ಆ್ಯಪ್ ಸ್ಟೇಟಸ್‌ಗಳಲ್ಲಿ ಹಾಕುತ್ತಿದ್ದೇವೆ. ಪೋಷಕರು, ಸಾರ್ವಜನಿಕರು ಅದನ್ನು ನೋಡಬಹುದಾಗಿದೆ’ ಎಂದರು.
‘ಪ್ರಾತ್ಯಕ್ಷಿಕೆ ಮೂಲಕ ಬೋಧನೆ ಮಾಡುತ್ತಿರುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ಗ್ರಹಿಕೆ ಶಕ್ತಿ, ಕಲಿಕಾ ಸಾಮರ್ಥ್ಯ ವೃದ್ಧಿಯಾಗಿದೆ. ಆಸಕ್ತಿಯಿಂದ ಕೇಂದ್ರಕ್ಕೆ ಬರುತ್ತಿದ್ದಾರೆ. ಕೇಂದ್ರದಲ್ಲಿ ಎಲ್‌ಇಡಿ ಟಿವಿ ವ್ಯವಸ್ಥೆಯೂ ಇದ್ದು, ಅದನ್ನು ಬಳಸಿಕೊಂಡು ಬೋಧನೆ ಮಾಡಲಾಗುತ್ತಿದೆ. ಪೋಷಕರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ’ ಎಂದು ಬೊಮ್ಮದೇವರಹಳ್ಳಿ- ಎ ಕೇಂದ್ರದ ಶಿಕ್ಷಕಿ ಶ್ರೀದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೈತರ ಬದುಕು ಬಿಂಬಿಸುವ ಪ್ರಾತ್ಯಕ್ಷಿಕೆಯು ಮಕ್ಕಳಲ್ಲಿ ಗ್ರಾಮೀಣ ಬದುಕಿನ ಅರಿವು ಮೂಡಿಸಿದೆ. ವೈದ್ಯ, ಪೊಲೀಸ್, ರೈತ, ಅಧಿಕಾರಿಗಳ ದಿರಿಸುಗಳನ್ನು ಮಕ್ಕಳಿಗೆ ಹಾಕಿದಾಗ, ತಾವೂ ಅದೇ ರೀತಿ ಆಗಬೇಕು ಎಂಬ ಆಸಕ್ತಿ ಅವರಲ್ಲಿ ಬೆಳೆಯುತ್ತದೆ’ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆಕಾಶ್ ಅವರು ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 224ರ ಪೈಕಿ 40 ಕೇಂದ್ರಗಳಿಗೆ ಎಲ್‌ಇಡಿ ಟಿವಿ ನೀಡಿದ್ದು ಆಧುನಿಕ ಪರಿಕರ ಬಳಸಿ ಬೋಧನೆ ಮಾಡಲಾಗುತ್ತಿದೆ ನವೀನ್ ಕುಮಾರ್ ಸಿಡಿಪಿಒ ಮೊಳಕಾಲ್ಮುರು
ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆಕಾಶ್ ಅವರು ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 224ರ ಪೈಕಿ 40 ಕೇಂದ್ರಗಳಿಗೆ ಎಲ್‌ಇಡಿ ಟಿವಿ ನೀಡಿದ್ದು ಆಧುನಿಕ ಪರಿಕರ ಬಳಸಿ ಬೋಧನೆ ಮಾಡಲಾಗುತ್ತಿದೆ.ನವೀನ್ ಕುಮಾರ್ ಸಿಡಿಪಿಒ ಮೊಳಕಾಲ್ಮುರು
ಸ್ಥಳೀಯ ಜನಪ್ರನಿಧಿಗಳು ತಮ್ಮ ಅನುದಾನದಲ್ಲಿ ಎಲ್ಲಾ ಅಂಗನವಾಡಿಗಳಿಗೆ ಎಲ್‌ಇಡಿ ಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೇಂದ್ರಗಳ ಅಭಿವೃದ್ಧಿಗೆ ಕೈಜೋಡಿಸಬೇಕು.ಜಾಫರ್ ಷರೀಫ್ ಸಿಪಿಐ ರಾಜ್ಯ ಮುಖಂಡ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.