ADVERTISEMENT

ಚಿತ್ರದುರ್ಗ | ಪೋಷಕರು ಜೈಲಿಗೆ: ಬಾಲಮಂದಿರಕ್ಕೆ ಮಕ್ಕಳು

ಕೊಲೆ ಆರೋಪದಲ್ಲಿ ತಂದೆ, ತಾಯಿ ಬಂಧನ, ಅತಂತ್ರರಾಗಿದ್ದ ಮೂವರು ಮಕ್ಕಳು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 12:17 IST
Last Updated 4 ಫೆಬ್ರುವರಿ 2023, 12:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಕೊಲೆ ಆರೋಪದಲ್ಲಿ ಪೋಷಕರು ಜೈಲುಪಾಲಾಗಿದ್ದರಿಂದ ಅತಂತ್ರರಾಗಿದ್ದ ಮೂವರು ಮಕ್ಕಳು ಬಾಲಮಂದಿರ ಸೇರಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಮಧ್ಯಪ್ರವೇಶದಿಂದಾಗಿ ಮಕ್ಕಳು ಮತ್ತೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ದಂಪತಿ ಇದೇ ಗ್ರಾಮದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ದಂಪತಿ ಜೈಲು ಸೇರಿದ್ದರಿಂದ ಅವರ ಇಬ್ಬರು ಪುತ್ರರು ಹಾಗೂ ಪುತ್ರಿ ಅತಂತ್ರರಾಗಿದ್ದರು. ಸಂಬಂಧಿಕರು ನೆರವಿಗೆ ಬಾರದ ಕಾರಣ ಸಮಸ್ಯೆಗೆ ಸಿಲುಕಿದ್ದರು. ಈ ಮಾಹಿತಿಯನ್ನು ಚಿತ್ರಹಳ್ಳಿ ಠಾಣೆಯ ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಹೊಳಲ್ಕೆರೆ ಸಿಡಿಪಿಒ ಮಲ್ಲೇಶ್‌ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. 8ನೇ ತರಗತಿಯ 16 ವರ್ಷದ ಬಾಲಕ, 7ನೇ ತರಗತಿಯ 15 ವರ್ಷದ ಮತ್ತೊಬ್ಬ ಬಾಲಕ ಹಾಗೂ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 11 ವರ್ಷದ ಬಾಲಕಿ ಸಮಸ್ಯೆಗೆ ಸಿಲುಕಿದ್ದು ಗಮನಕ್ಕೆ ಬಂದಿದೆ. ಈ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿದ್ದರು.

ADVERTISEMENT

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್‌.ಪ್ರಭಾಕರ್ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ್ದರು. ಮಕ್ಕಳ ತಂದೆ ಚಿತ್ರದುರ್ಗ ಕಾರಾಗೃಹದಲ್ಲಿ ಹಾಗೂ ತಾಯಿ ಶಿವಮೊಗ್ಗದ ಮಹಿಳಾ ಕಾರಾಗೃಹದಲ್ಲಿ ಇರುವುದು ಖಚಿತವಾಗಿದೆ. ಮಕ್ಕಳ ಶಿಕ್ಷಣ, ಪೋಷಣೆಯ ದೃಷ್ಟಿಯಿಂದ ಮೂವರು ಮಕ್ಕಳಿಗೆ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.