ADVERTISEMENT

ಚಿತ್ರದುರ್ಗ | ಎನ್‌ಒಸಿ ವಿಳಂಬ: ರೈಲ್ವೆ ಕಾಮಗಾರಿಗೆ ಗ್ರಹಣ

ಅನುಮತಿ ನೀಡಲು ಸತಾಯಿಸುತ್ತಿರುವ ಎ.ಸಿ., ತಹಶೀಲ್ದಾರ್‌, ಪಿಡಿಒ: ಡಿ.ಸಿ ಸೂಚನೆಗೂ ಕಿಮ್ಮತ್ತಿಲ್ಲ

ಎಂ.ಎನ್.ಯೋಗೇಶ್‌
Published 15 ಅಕ್ಟೋಬರ್ 2025, 6:19 IST
Last Updated 15 ಅಕ್ಟೋಬರ್ 2025, 6:19 IST
ಚಿತ್ರದುರ್ಗದಿಂದ ಹಂಪನೂರುವರೆಗೆ ರೈಲ್ವೆ ಕಾಮಗಾರಿ ನಡೆಯುತ್ತಿರುವುದು
ಚಿತ್ರದುರ್ಗದಿಂದ ಹಂಪನೂರುವರೆಗೆ ರೈಲ್ವೆ ಕಾಮಗಾರಿ ನಡೆಯುತ್ತಿರುವುದು   

ಚಿತ್ರದುರ್ಗ: ತುಮಕೂರು– ಚಿತ್ರದುರ್ಗ– ದಾವಣಗೆರೆ ರೈಲು ಮಾರ್ಗದ ಅಂಗವಾಗಿ ಹಳಿಗಳ ಅಳವಡಿಕೆಗೆ ಕಲ್ಲುಗಳು ಅಡ್ಡಿಯಾಗಿದ್ದು, ಅವುಗಳ ಸ್ಫೋಟಕ್ಕೆ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಅನಿವಾರ್ಯವಾಗಿದೆ. ಆದರೆ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಪಿಡಿಒಗಳು ಎನ್‌ಒಸಿ ನೀಡಲು 3 ತಿಂಗಳಿಂದ ಸತಾಯಿಸುತ್ತಿರುವುದು ಇಡೀ ಕಾಮಗಾರಿಗೆ ಗ್ರಹಣ ಹಿಡಿದಂತಾಗಿದೆ.

ತುಮಕೂರಿನಿಂದ ನೇರವಾಗಿ ಚಿತ್ರದುರ್ಗದ ಮೂಲಕ ದಾವಣಗೆರೆ ತಲುಪುವ ಈ ರೈಲು ಮಾರ್ಗಕ್ಕಾಗಿ ಹಲವು ದಶಕಗಳಿಂದ ಹೋರಾಟ ನಡೆದಿತ್ತು. 191 ಕಿ.ಮೀ ಉದ್ದದ ಈ ಯೋಜನೆಗೆ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿವಿಧ ಹಂತದಲ್ಲಿ ಕಾಮಗಾರಿ ಆರಂಭಗೊಂಡಿದೆ. ಈ ಮಾರ್ಗ ಸ್ಥಳೀಯರ ಭಾವನಾತ್ಮಕ ವಿಚಾರವಾಗಿದ್ದು, ರೈಲು ಓಡಾಟಕ್ಕಾಗಿ ಕಾಯುತ್ತಿದ್ದಾರೆ.

ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ ಹಾಗೂ ಹಂಪನೂರು ನಡುವಿನ 29 ಕಿ.ಮೀ. ಕಾಮಗಾರಿಯನ್ನು ಎಂಕೆಸಿ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್ ನಡೆಸುತ್ತಿದೆ. ಈ ವ್ಯಾಪ್ತಿಯ ಮಾರ್ಗದಲ್ಲಿ ಸಣ್ಣಪುಟ್ಟ ಕಲ್ಲು, ಬಂಡೆಗಳು ಸಿಕ್ಕಿದ್ದು ನಿಯಂತ್ರಿತ ಸ್ಫೋಟದ (ಕಂಟ್ರೋಲ್ಡ್‌ ಬ್ಲಾಸ್ಟ್‌) ಮೂಲಕ ಕಲ್ಲು ತೆಗೆಯಲು ಗುತ್ತಿಗೆದಾರರು ಜುಲೈ ತಿಂಗಳಲ್ಲೇ ಎನ್‌ಒಸಿ ಕೋರಿದ್ದಾರೆ.

ADVERTISEMENT

ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ಎನ್‌ಒಸಿ ನೀಡುವಂತೆ ಜಿಲ್ಲಾಧಿಕಾರಿಯು ಆ. 5ರಂದು ಪೊಲೀಸ್‌ ಇಲಾಖೆ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅಗ್ನಿಶಾಮಕ ದಳ, ಸ್ಥಳೀಯ ಗ್ರಾ.ಪಂ ಪಿಡಿಒಗಳಿಗೆ ಸೂಚಿಸಿದ್ದಾರೆ.

‘ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ವಿವಿಧ ಇಲಾಖೆಗಳು ಈಗಾಗಲೇ ಎನ್‌ಒಸಿ ನೀಡಿವೆ. ಆದರೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ಸ್ಥಳೀಯ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಎನ್‌ಒಸಿ ನೀಡದಿರುವುದು ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

‘ನಮಗೆ ಆರಂಭದಲ್ಲಿ ಮಣ್ಣಿಗೆ ಕೊರತೆಯಾಗಿತ್ತು. ಜಿ.ಪಂ. ಸಿಇಒ ಡಾ.ಎಸ್‌.ಆಕಾಶ್‌ ಅವರು ಅಮೃತ ಸರೋವರ ಯೋಜನೆಯಡಿ ತೆಗೆದ ಮಣ್ಣನ್ನು ಒದಗಿಸಿದ್ದಾರೆ. ಜಿಲ್ಲಾಧಿಕಾರಿ ಸಹ ಸಹಾಯ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಹಳಿ ಅಳವಡಿಕೆ ಕಾಮಗಾರಿ ಅರ್ಧದಷ್ಟು ಮಗಿಯಬೇಕಾಗಿತ್ತು. ಆದರೆ ಎ.ಸಿ., ತಹಶೀಲ್ದಾರ್‌, ಪಿಡಿಒಗಳು ಎನ್‌ಒಸಿ ನೀಡದೆ ಕಚೇರಿಯಿಂದ ಕಚೇರಿಗೆ ಅಲೆಸುತ್ತಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ’ ಎಂದು ಏಜೆನ್ಸಿಯ ಎಂಜಿನಿಯರ್‌ ಬೇಸರ ವ್ಯಕ್ತಪಡಿಸಿದರು.

‘ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಪಿಡಬ್ಲ್ಯೂಡಿ, ಗಣಿ ಇಲಾಖೆ ಅಧಿಕಾರಿಗಳು ಈಗಾಗಲೇ ಎನ್‌ಒಸಿ ನೀಡಿರುವ ಕಾರಣ ಸ್ಫೋಟ ನಡೆಸಲು ಅಡ್ಡಿ ಇಲ್ಲ. ಆದರೆ ಎ.ಸಿ., ತಹಶೀಲ್ದಾರ್‌, ಪಿಡಿಒಗಳು ಸಹಕಾರ ನೀಡದಿರುವುದು ನೀಡದಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಆರೋಪಿಸಲಾಗಿದೆ.

ಈ ವ್ಯಾಪ್ತಿಯಲ್ಲಿ ಬರುವ ಕೋಳಾಳ್‌, ಚಿಕ್ಕಬೆನ್ನೂರು, ಲಕ್ಷ್ಮಿಸಾಗರ, ಐಯ್ಯನಹಳ್ಳಿ, ಚೋಳಗುಡ್ಡ, ಜಾನುಕೊಂಡ ಪಿಡಿಒಗಳು ಎನ್‌ಒಸಿ ನೀಡಬೇಕಾಗಿದೆ.

‘ರೈಲ್ವೆ ಕಾಮಗಾರಿಗಳಿಗೆ ಸ್ಫೋಟಕ ವಸ್ತುಗಳ ಕಾಯ್ದೆ ಅನುಸಾರ ರಾಸಾಯನಿಕ ಬಳಸಿ ನಿಯಂತ್ರಿತ ಕಲ್ಲು ಸ್ಫೋಟಿಸಲಾಗುತ್ತದೆ. ಇದಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ಸ್ಥಳೀಯ ಆಡಳಿತಗಳ ಎನ್‌ಒಸಿ ಪಡೆಯುವುದು ಅನಿವಾರ್ಯ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ರೈಲ್ವೆ ಖಾತೆ  ರಾಜ್ಯ ಸಚಿವ ವಿ.ಸೋಮಣ್ಣ ಈ ಯೋಜನೆ ಜಾರಿಗೆ ಬಹಳ ಮುತುವರ್ಜಿ ವಹಿಸಿದ್ದಾರೆ. 2027ಕ್ಕೆ ಪೂರ್ಣಗೊಳಿಸುವ ಗುರಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಸಣ್ಣಪುಟ್ಟ ವಿಚಾರಗಳಿಗೆ ಗೊಂದಲ ಮಾಡಬಾರದು’  ಎಂದು ರೈಲ್ವೆ ಯೋಜನೆಗೆ ಹೋರಾಟ ನಡೆಸುತ್ತಿರುವ ಮುಖಂಡರಾದ ಎಸ್‌.ಶಿವಕುಮಾರ್‌ ಹೇಳಿದರು.

ಕೂಡಲೇ ಡಿ.ಸಿ ಜೊತೆ ಮಾತನಾಡಿ ಎನ್‌ಒಸಿ ನೀಡುವಂತೆ ಸೂಚಿಸಲಾಗುವುದು. ರೈಲ್ವೆ ಕಾಮಗಾರಿಗೆ ಅನಾವಶ್ಯಕವಾಗಿ ತೊಂದರೆ ಮಾಡಿದರೆ ಸುಮ್ಮನಿರುವುದಿಲ್ಲ ವಿಳಂಬ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು
ಗೋವಿಂದ ಕಾರಜೋಳ, ಸಂಸದ
ರೈಲ್ವೆ ಕಾಮಗಾರಿಗೆ ಅಡ್ಡಿಯಾಗದಂತೆ ಆದಷ್ಟು ಬೇಗ ಎನ್‌ಒಸಿ ನೀಡುವಂತೆ ಸೂಚಿಸಲಾಗಿತ್ತು. ಏಕೆ ತಡವಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಟಿ.ವೆಂಕಟೇಶ್‌, ಜಿಲ್ಲಾಧಿಕಾರಿ
ಹಳಿ ಅಳವಡಿಕೆಗೆ ಉಂಟಾಗಿರುವ ಅಡೆತಡೆ ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಮನವಿ ಮಾಡಲಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯಿಂದ ಕೆಲಸ ನಡೆಯಬೇಕು
ಪಿ.ರಜತ್‌, ಉಪ ಮುಖ್ಯ ಎಂಜಿನಿಯರ್‌ ರೈಲ್ವೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.