ADVERTISEMENT

ಚಿತ್ರದುರ್ಗ | ಹಾಳಾದ ಆರ್‌ಒ ಘಟಕಗಳು; ಸಿಗದ ಶುದ್ಧ ನೀರು

ಬೇಸಿಗೆ ಹೊಸ್ತಿಲಲ್ಲೇ ಜಿಲ್ಲೆಯಲ್ಲಿ ಜೀವ ಜಲಕ್ಕೆ ತತ್ವಾರ; ಜೆಜೆಎಂ ನಲ್ಲಿಗಳಲ್ಲೂ ನೀರಿಲ್ಲ

ಕೆ.ಪಿ.ಓಂಕಾರಮೂರ್ತಿ
Published 2 ಮಾರ್ಚ್ 2026, 6:33 IST
Last Updated 2 ಮಾರ್ಚ್ 2026, 6:33 IST
<div class="paragraphs"><p>ಚಿತ್ರದುರ್ಗ ತಾಲ್ಲೂಕಿನ ಕಸವನಹಳ್ಳಿಯಲ್ಲಿ ಸ್ಥಗಿತಗೊಂಡಿರುವ ಆರ್‌ಒ ಘಟಕ ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ</p></div>

ಚಿತ್ರದುರ್ಗ ತಾಲ್ಲೂಕಿನ ಕಸವನಹಳ್ಳಿಯಲ್ಲಿ ಸ್ಥಗಿತಗೊಂಡಿರುವ ಆರ್‌ಒ ಘಟಕ ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ

   

ಚಿತ್ರದುರ್ಗ: ಬೇಸಿಗೆ ಹೊಸ್ತಿಲಲ್ಲೇ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿಗೆ ತತ್ವಾರ ಶುರುವಾಗಿದ್ದು, ಹನಿ ನೀರಿಗೂ ಲೆಕ್ಕ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಸರದಿಯಂತೆ ಸ್ಥಗಿತಗೊಳ್ಳುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. 

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಶುದ್ಧ ಜೀವ ಜಲಕ್ಕಾಗಿ ಖಾಸಗಿ ಘಟಕಗಳ ಮೊರೆ ಹೋಗುವಂತಾಗಿದೆ. ನಗರ ಪ್ರದೇಶ ಸೇರಿ ಗ್ರಾಮಗಳಲ್ಲಿನ ಆರ್‌ಒ ಪ್ಲಾಂಟ್‌ಗಳು ಬಹುತೇಕ ಕಾರ್ಯ ನಿಲ್ಲಿಸಿವೆ.

ADVERTISEMENT

ಫೆಬ್ರುವರಿ ಪ್ರಾರಂಭದಲ್ಲೇ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಈಗ ಉಲ್ಬಣಿಸಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಆಸರೆಯಾಗಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಇಳಿಯುತ್ತಿದೆ. ಮುಂಜಾನೆ, ರಾತ್ರಿ ತಲಾ 6 ಬಿಂದಿಗೆ ಮೇಲೆ ಅರ್ಧ ಬಿಂದಿಗೆಯಷ್ಟು ನೀರು ಸಿಕ್ಕರೆ ಪುಣ್ಯ ಎನ್ನುವಂತಾಗಿದೆ.

ತಾಲ್ಲೂಕಿನ ಸಮೀಪದ ಕಸವನಹಳ್ಳಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಇದ್ದ ಒಂದು ಆರ್‌ಒ ಘಟಕ ಹಾಳಾಗಿ ವರ್ಷಗಳೇ ಉರುಳಿವೆ. ಹೀಗಾಗಿ ಜನ ಶುದ್ಧ ಕುಡಿಯುವ ನೀರಿಗೆ ದೊಡ್ಡಸಿದ್ದವ್ವನಹಳ್ಳಿ, ಜೆ.ಎನ್‌.ಕೋಟೆ, ಎಣ್ಣೆಗೆರೆಯ ಘಟಕಗಳನ್ನು ಅವಲಂಬಿಸಿದ್ದಾರೆ. ಜೆ.ಎನ್‌. ಕೋಟೆಯಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ, ಅಲ್ಲಿಗೆ ನೀರು ತರಲು ಹೋಗುವ ಗ್ರಾಮಸ್ಥರು ‘ನೀರು ನಮ್ಮೂರಿಗೇ ಸಾಕಾಗುತ್ತಿಲ್ಲ, ಅರ್ಥ ಮಾಡಿಕೊಳ್ಳಿ’ ಎಂಬ ಮಾತುಗಳನ್ನು ಅಲ್ಲಿನವರಿಂದ ಕೇಳುವಂತಾಗಿದೆ. 

ಜಿಲ್ಲೆಯಲ್ಲಿ ಜಲ ಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕುಡಿಯುವ ನೀರಿನ ಕಾಮಗಾರಿಗಳು ಅತ್ಯಂತ ಕಳಪೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ಕಸವನಹಳ್ಳಿ ಗ್ರಾಮದ ಬಹುತೇಕ ನಲ್ಲಿಗಳಲ್ಲಿ ದಾರದಷ್ಟು ತೆಳುವಾಗಿ ನೀರು ಬರುತ್ತಿದೆ. ಅಷ್ಟೇ ಅಲ್ಲದೆ ಕೆಲ ನಲ್ಲಿಗಳು ನಾಮಕಾವಾಸ್ಥೆಗೆ ಎಂಬಂತಿವೆ.

ಜಿಲ್ಲೆಯಲ್ಲಿನ ಒಟ್ಟು 1,500 ಜೆಜೆಎಂ ಕಾಮಗಾರಿಗಳ ಪೈಕಿ ಶೇ 30ರಷ್ಟು ಅಂದರೆ ಅಂದಾಜು 500 ಕಾಮಗಾರಿಗಳನ್ನು ತಾಲೂಕು ಮಟ್ಟದ ತಾಂತ್ರಿಕ ತಂಡದಿಂದ ‍ಪರಿಶೀಲನೆಗೆ ಒಳಪಡಿಸಲಾಗಿದೆ. ವರದಿ ಪ್ರಕಾರ, ಈ ಪೈಕಿ 160 ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ.  

ಜಿಲ್ಲೆಯಾದ್ಯಂತ 1,026 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 765 ಸುಸ್ಥಿತಿಯಲ್ಲಿವೆ. ಉಳಿದ 261 ಘಟಕಗಳಲ್ಲಿ 121 ದುರಸ್ತಿಗಾಗಿ ಕಾದಿದ್ದರೆ, 140 ಘಟಕಗಳು ಸಂಪೂರ್ಣ ಹಾಳಾಗಿದ್ದು, ಕಾರ್ಯಾಚರಣೆ ನಿಲ್ಲಿಸಿವೆ. ನೀರಿನ ಘಟಕಗಳು ಪ್ರಾರಂಭವಾದ ಕೆಲವೇ ದಿನಗಳಿಗೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ನಿರ್ಮಾಣಕ್ಕೆ ಬಳಕೆ ಮಾಡುವ ಸಲಕರಣೆಗಳು ಕಳಪೆಯಾಗಿವೆ ಎಂಬ ದೂರಗಳು ಹೆಚ್ಚಾಗಿವೆ.

ಬಹುತೇಕ ಘಟಕಗಳಲ್ಲಿ ಅಳವಡಿಸಿದ್ದ ಗಾಜಿನ ಬಾಗಿಲು ಮುರಿದಿವೆ. ವಿದ್ಯುತ್ ಸಂಪರ್ಕದ ವೈರ್‌ಗಳು ಕಿತ್ತು ಹೋಗಿವೆ. ನೀರು ಸರಬರಾಜಿನ ಪೈಪ್‌ಗಳು ಒಡೆದು ತುಂಡು ತುಂಡಾಗಿ ಬಿದ್ದಿವೆ. ದುರಸ್ತಿಯಿಲ್ಲದೇ ಕೆಲ ಘಟಕಗಳು ಪಾಳು ಬಿದ್ದಿವೆ. ನೀರಿನ ಘಟಕದ ದುರಸ್ತಿ ಬಗ್ಗೆ ಯಾರ ಗಮನಕ್ಕೆ ತರಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮೀಣ ಜನ.

ಘಟಕಗಳ ದುರಸ್ತಿಗೆ ಹಣ ನೀರಿನಂತೆ ಖರ್ಚಾಗಿದೆ. ಪ್ರತಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಜಿಲ್ಲೆಗೆ ಬರುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದ್ದ ಈ ಘಟಕಗಳೇ ಮುಖ್ಯ ಸಮಸ್ಯೆಯಾಗಿ ಪರಿಣಮಿಸಿವೆ.

ಕಲುಷಿತ ನೀರು ಸಂಗ್ರಹ

ಗ್ರಾಮೀಣ ಭಾಗದಲ್ಲಿ ಪೈಪ್‌ಲೈನ್‌ಗಳು ಒಡೆದು ರಸ್ತೆ ಮೇಲೆ ನೀರು ಹರಿಯುವುದು ಸಾಮಾನ್ಯವಾಗಿದೆ. ಸಾರ್ವಜನಿಕ ನಲ್ಲಿಗಳು ಚರಂಡಿ ಪಕ್ಕದಲ್ಲೇ ಇವೆ. ಇದರಿಂದ ಕಲುಷಿತ ನೀರನ್ನು ಸಂಗ್ರಹಿಸುವ ಅನಿವಾರ್ಯತೆ ಜನರಿಗೆ ಎದುರಾಗಿದೆ. ಈಚೆಗೆ ಅಮೃತ್‌ 2.0 ಯೋಜನೆಯಡಿ ಮನೆಮನೆಗೂ ನಲ್ಲಿ ಸಂಪರ್ಕಕ್ಕೆ ಗುಂಡಿ ತೆಗೆದಿದ್ದರಿಂದ ಪೈಪ್‌ಲೈನ್‌ಗಳು ದುರಸ್ತಿಗೆ ಕಾದಿವೆ. ವ್ಯವಸ್ಥಿತವಾಗಿ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ವಾಲ್ವ್‌ಗಳಿಲ್ಲ. ಇದರಿಂದ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಆಸ್ಪತ್ರೆಗೆ ಎಡತಾಕುವುದು ಸಾಮಾನ್ಯವಾಗಿದೆ.

ನಗರಕ್ಕೂ ತಟ್ಟಿದ ನೀರಿನ ಸಮಸ್ಯೆ

ಬೇಸಿಗೆ ಆರಂಭದ ದಿನಗಳಲ್ಲೇ ಚಿತ್ರದುರ್ಗ ನಗರದ ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಗರದ ಜೋಗಿಮಟ್ಟಿ ರಸ್ತೆ ಐಯುಡಿಪಿ ಬಡಾವಣೆ ಕೆಳಗೋಟೆ ಹೌಸಿಂಗ್‌ ಬೋರ್ಡ್‌ ಮುನ್ಸಿಪಲ್‌ ಕಾಲೊನಿ ಸೇರಿದಂತೆ ಅಕ್ಕ ಪಕ್ಕದ ಬಡಾವಣೆಗಳಲ್ಲಿ ಹತ್ತರಿಂದ ಹದಿನೈದು ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಸ್ಥಳೀಯರು ದುಬಾರಿ ಹಣ ನೀಡಿ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುವಂತಾಗಿದೆ. ಕೆಳಗೋಟೆಯ ಹೌಸಿಂಗ್ ಬೋರ್ಡ್‌ ಕಾಲೊನಿ ಬಳಿಯಿರುವ ಓವರ್‌ ಹೆಡ್ ಟ್ಯಾಂಕ್‌ 10 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಆರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು ಎಂಬ ನಿಯಮವಿದೆ. ಆದರೆ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಸ್ವಚ್ಛಗೊಳಿಸಲಾಗಿತ್ತು. ವರ್ಷ ಸಮೀಪಿಸುತ್ತಿದ್ದರೂ ಅದನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

ಫ್ಲೋರೈಡ್‌ ನೀರಿಗೆ ಬೇಸತ್ತ ಜನ 

ನಾಯಕನಹಟ್ಟಿ: ಸ್ವಚ್ಛತೆ ಕಾಣದ ಓವರ್‌ಹೆಡ್‌ ಟ್ಯಾಂಕ್‌ಗಳು ಚರಂಡಿ ಪಕ್ಕದಲ್ಲೇ ಇರುವ ಕುಡಿಯುವ ನೀರಿನ ನಲ್ಲಿಗಳು ಒಡೆದ ಪೈಪ್‌ಲೈನ್‌ಗಳು ಪಾಳುಬಿದ್ದ ಆರ್‌ಒ ಘಟಕ ಹಾಗೂ ಫ್ಲೋರೈಡ್‌ ನೀರು ಬಳಕೆಯಿಂದ ಹೋಬಳಿಯ ಜಾಗನೂರಹಟ್ಟಿಯ ಜನ ಬೇಸತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಒಂದನೇ ವಾರ್ಡ್‍ಗೆ ಸೇರಿದ ಜಾಗನೂರಹಟ್ಟಿಯಲ್ಲಿ 1800ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮಕ್ಕೆ ಕೊಳವೆಬಾವಿ ನೀರು ಆಸರೆಯಾಗಿದೆ. 9 ಕೊಳವೆ ಬಾವಿಗಳಿದ್ದರೂ ಚಿಕ್ಕಕೆರೆಯಲ್ಲಿರುವ ಬೋರ್‌ವೆಲ್‌ ಮಾತ್ರ ಸಕ್ರಿಯವಾಗಿದೆ. ಆಂಜನೇಯಸ್ವಾಮಿ ದೇವಾಲಯದ ಬಳಿ ಇರುವ ಕೊಳವೆಬಾವಿಯ ನೀರು ಜಿಡ್ಡು ಮತ್ತು ಗಡುಸಾಗಿದ್ದು ಬಳಕೆಗೆ ಯೋಗ್ಯವಾಗಿಲ್ಲ. ಓವರ್‌ ಹೆಡ್‌ ಟ್ಯಾಂಕ್ ಹಲವು ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ. ಅದನ್ನು ನಾಯಕನಹಟ್ಟಿ ಜಾತ್ರೆ ಸಮಯದಲ್ಲಿ ಮಾತ್ರ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಮೂರು ವರ್ಷಗಳಿಂದ ಜಾತ್ರೆಯ ವೇಳೆಯೂ ಸ್ವಚ್ಛಗೊಳಿಸಿಲ್ಲ. ಇದರಿಂದ ನೀರಿನಲ್ಲಿ ಹುಳು ಹುಪ್ಪಟೆಗಳು ದೊಡ್ಡಗಾತ್ರದ ಇರುವೆಗಳು ಕಾಣಿಸುತ್ತಿವೆ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲವಾಗಿದೆ. ಘಟಕದ ಯಂತ್ರಗಳು ತುಕ್ಕು ಹಿಡಿದು ಸಂಪೂರ್ಣ ಹಾಳಾಗಿವೆ. ಹನಿ ನೀರಿಗೂ ಪರಿತಪಿಸುವ ಸ್ಥಿತಿಗೆ ಜನರು ತಲುಪಿದ್ದಾರೆ.

ತುಕ್ಕು ಹಿಡಿದ ನೀರಿನ ಘಟಕದ ಯಂತ್ರೋಪಕರಣ

ಹೊಸದುರ್ಗ: ತಾಲ್ಲೂಕಿನಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ಬಳಕೆಗೆ ಲಭ್ಯವಾಗಿಲ್ಲ. ಘಟಕ ನಿರ್ಮಿಸಿ ವರ್ಷಗಳೇ ಕಳೆದರೂ ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ. ಯಂತ್ರೋಪಕರಣಗಳು ಹಾಳಾದ ಕಾರಣ ಶುದ್ಧೀಕರಣ ಘಟಕದಿಂದ ಹನಿ ನೀರೂ ಬರುತ್ತಿಲ್ಲ. ಕಂಗುವಳ್ಳಿ ಪಂಚಾಯಿತಿ ವ್ಯಾಪ್ತಿಯ ಪೀಲಾಪುರ ನೀರಗುಂದ ಆಲದಹಳ್ಳಿ ಕೊಂಡಜ್ಜಿ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಮೊದಲು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದು ಮಳಲಿ ಗ್ರಾಮದಲ್ಲಿ. 350 ಮನೆಗಳಿರುವ ಈ ಗ್ರಾಮದಲ್ಲಿ ಘಟಕ ದುರಸ್ತಿಗೆ ಬಂದು 5 ವರ್ಷಗಳಾದರೂ ಯಾವ ಅಧಿಕಾರಿಗಳೂ ಗಮನಹರಿಸಿಲ್ಲ. ‘ಘಟಕ ಆರಂಭವಾದ ಒಂದು ತಿಂಗಳು ಮಾತ್ರ ನೀರು ಉಪಯೋಗಿಸಿದ್ದೇವೆ. ನಂತರ ಇದರ ಸೌಲಭ್ಯ ದೊರೆತಿಲ್ಲ. ಶುದ್ಧ ಕುಡಿಯುವ ನೀರಿಗಾಗಿ 3 ಕಿ.ಮೀ ದೂರವಿರುವ ಕೊಂಡಜ್ಜಿ ಗ್ರಾಮಕ್ಕೆ ಹೋಗಬೇಕು. ಬೇಸಿಗೆ ಕಾಲದಲ್ಲಿ ₹ 25 ರಿಂದ ₹30 ನೀಡಿ ಒಂದು ಕ್ಯಾನ್ ಖರೀದಿಸುತ್ತೇವೆ. ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದೆ’ ಎಂದು ಗ್ರಾಮಸ್ಥ ಮಹೇಶ್ವರಪ್ಪ ಬೇಸರ ವ್ಯಕ್ತಪಡಿಸಿದರು. ‘ತಾಲ್ಲೂಕಿನಾದ್ಯಂತ ಒಟ್ಟು 185 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಅದರಲ್ಲಿ 102 ಘಟಕಗಳನ್ನು ಪಂಚಾಯಿತಿಗಳಿಗೆ ನೀಡಲಾಗಿದೆ. ದುರಸ್ತಿಗೆ ಬಂದಿರುವ 44 ಘಟಕಗಳನ್ನು ರಿಪೇರಿ ಮಾಡಿ ಪಂಚಾಯಿತಿಗೆ ನೀಡಲಾಗುವುದು. ತುಂಬಾ ಹಳೆಯದಾದ ಘಟಕಗಳ ಬದಲಿಗೆ ಹೊಸ ಘಟಕಗಳನ್ನು ನಿರ್ಮಿಸಲಾಗುವುದು’ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರಸನ್ನ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ನೀರಿನ ಸರಬರಾಜಿನಲ್ಲಿ ಲೋಪ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ
– ಟಿ.ವೆಂಕಟೇಶ್‌, ಜಿಲ್ಲಾಧಿಕಾರಿ
ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮಗಳನ್ನು ಗುರುತಿಸಿ ಜನಸಂಖ್ಯೆ ಮತ್ತು ಲಭ್ಯವಿರುವ ಬೋರ್‌ವೆಲ್‌ಗಳ ಸ್ಥಿತಿಗತಿ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ. ಜತೆಗೆ ಜಂಟಿ ಸಮೀಕ್ಷೆಗೆ ನಿರ್ದೇಶನ ನೀಡಲಾಗಿದೆ.
ಡಾ.ಎಸ್‌.ಆಕಾಶ್, ಸಿಇಒ, ಜಿಲ್ಲಾ ಪಂಚಾಯಿತಿ
ಜೆಜೆಎಂನಡಿ ಅಳವಡಿಸಿರುವ ನಲ್ಲಿಗಳಲ್ಲಿ ನೀರು ಹರಿಯುವುದು ದೂರದ ಮಾತು. ಆ ನೀರನ್ನು ಕುಡಿಯಲೂ ಆಗುವುದಿಲ್ಲ. ಗ್ರಾಮದ ಆರ್‌ಒ ಘಟಕ ದುರಸ್ತಿಗೊಳಿಸಿದರೆ ಸಮಸ್ಯೆ ಬಗೆಹರಿಯುತ್ತದೆ.
– ಸಿ.ಕೇಶವಮೂರ್ತಿ, ಗ್ರಾಮಸ್ಥ, ಕಸವನಹಳ್ಳಿ
ನಿತ್ಯ ಕೂಲಿ ಬಿಟ್ಟು ನೀರಿಗೆ ಕಾಯುವುದೇ ಕೆಲಸವಾಗಿದೆ. ಕುಡಿಯುವ ನೀರಿಗೂ ಪಕ್ಕದ ಊರಿಗೆ ಹೋಗಬೇಕು. ಎರಡು ವರ್ಷದಿಂದ ಇದೇ ಗೋಳಾಗಿದೆ. ಮನೆಯಲ್ಲಿ ಒಬ್ಬರು ನೀರು ತರುವ ಕೆಲಸ ಮಾಡುವಂತಾಗಿದೆ.
– ತಿಮ್ಮಕ್ಕ, ಗ್ರಾಮಸ್ಥೆ ಕಸವನಹಳ್ಳಿ
ಹೊಸದುರ್ಗ ತಾಲ್ಲೂಕಿನಾದ್ಯಂತ 40 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಅವುಗಳನ್ನು ದುರಸ್ತಿ ಮಾಡಿ ಪಂಚಾಯಿತಿಗೆ ನೀಡಿದರೆ ಅನುಕೂಲವಾಗುತ್ತದೆ.
– ಸುನೀಲ್‌ ಕುಮಾರ್‌, ಇಒ, ತಾಲ್ಲೂಕು ಪಂಚಾಯಿತಿ
ಪೂರಕ ಮಾಹಿತಿ: ಎಚ್‌.ಡಿ.ಸಂತೋಷ್‌, ವಿ.ಧನಂಜಯ
ಕಸವನಹಳ್ಳಿಯಲ್ಲಿನ ಜೆಜೆಎಂ ನಲ್ಲಿಗಳ ಸ್ಥಿತಿ
ಸಂಪೂರ್ಣ ಹಾಳಾಗಿರುವ ಹೊಸದುರ್ಗ ತಾಲ್ಲೂಕಿನ ಮಳಲಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.