ಚಿತ್ರದುರ್ಗದ ಸಂತೆಹೊಂಡದ ಬಳಿ ಇರುವ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ
ಚಿತ್ರದುರ್ಗ: ರಾಜ್ಯದ ಅತ್ಯಂತ ಹಳೆಯ ಜಿಲ್ಲಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರದುರ್ಗದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಹೆಚ್ಚಾಗಿದೆ. ನಿತ್ಯದ ಕೆಲಸ ಕಾರ್ಯಗಳಿಗಾಗಿ ನಗರ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಬರುವ ನಾಗರಿಕರು ಜಲಬಾಧೆಯಿಂದ ಪರಿತಪಿಸುವಂತಾಗಿದೆ. ಬೇರೆ ದಾರಿ ಕಾಣದೆ ಬಯಲಲ್ಲೇ ಮಲ-ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂಬಂತಾಗಿದೆ.
ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾ ಆಸ್ಪತ್ರೆ, ರೂಪವಾಣಿ ಚಿತ್ರಮಂದಿರದ ಬಳಿ, ಮರ್ಚೆಂಟ್ಸ್ ಬ್ಯಾಂಕ್ ಪಕ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಮುಂಭಾಗ, ಸಂತೆಹೊಂಡ, ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯಗಳಿವೆ. ಈ ಪೈಕಿ ಜಿಲ್ಲಾಧಿಕಾರಿ ಕಚೇರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹೊರತುಪಡಿಸಿ ಉಳಿದವನ್ನು ನಗರಸಭೆ ನಿರ್ಮಿಸಿದೆ. ಇವು ನಿರ್ವಹಣೆ ಇಲ್ಲದೆ ನಲುಗಿವೆ.
ಒಂದೇ ಕಟ್ಟಡದಲ್ಲಿ ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಇವುಗಳ ಒಳಗೆ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ರಾಶಿ ರಾಶಿ ಗುಟ್ಕಾ ಚೀಟಿ, ಮದ್ಯದ ಬಾಟಲಿಗಳು, ಬೀಡಿ, ಸಿಗರೇಟಿನ ತುಂಡುಗಳು ಕಣ್ಣಿಗೆ ರಾಚುತ್ತವೆ. ಮುರಿದ ಬಾಗಿಲು, ನೀರಿಲ್ಲದ ನಲ್ಲಿಗಳು, ಗೋಡೆಗಳ ಮೇಲಿನ ಅಶ್ಲೀಲ ಬರಹಗಳು, ಅಲ್ಲಲ್ಲಿ ಬಿದ್ದಿರುವ ನಿರೋದ್ ಪ್ಯಾಕ್‌ಗಳು ಅಸಹ್ಯ ಮೂಡಿಸುತ್ತಿವೆ.
ನಗರದ ಹೃದಯ ಭಾಗದಲ್ಲಿನ ನಗರಸಭೆ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ನಗರಸಭೆಗೆ ಹೊಂದಿಕೊಂಡಂತೆ ಹಳೆ ಮಾಧ್ಯಮಿಕ ಶಾಲಾ ಮೈದಾನವೂ ಇದ್ದು, ಇಲ್ಲಿ ನಿರಂತರವಾಗಿ ಒಂದಿಲ್ಲೊಂದು ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ದೊಡ್ಡ ಮಟ್ಟದ ಸಭೆ, ಸಮಾರಂಭಗಳಿಗೂ ಇದು ವೇದಿಕೆ ಕಲ್ಪಿಸುತ್ತದೆ. ಆದರೆ ಇಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲ.
ನಗರಸಭೆ ಪಕ್ಕದಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಇದೆ. ಮುಂಭಾಗದಲ್ಲಿ ಅಂಬೇಡ್ಕರ್ ವೃತ್ತ ಇದೆ. ಯಾವಾಗಲೂ ಜನಸಂದಣಿಯಿಂದ ಕೂಡಿರುವ ಈ ಜಾಗಗಳಲ್ಲಿ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಇದೆಯಾದರೂ ನಗರಸಭೆ ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪಕ್ಕದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೇ ಇರುವುದರಿಂದ ನಾಗರಿಕರು ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸುವುದು ಕಂಡುಬರುತ್ತದೆ. ಕತ್ತಲು ಆವರಿಸುತ್ತಿದ್ದಂತೆಯೇ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗುತ್ತದೆ ಎಂಬ ಆರೋಪಗಳೂ ಕೇಳಿಬಂದಿವೆ.
ನಗರದ ಚಳ್ಳಕೆರೆ ರಸ್ತೆಯಿಂದ ಕನಕವೃತ್ತ, ಜೆಎಂಐಟಿ ವೃತ್ತದವರೆಗೆ ಅಲ್ಲಲ್ಲಿ ಶೌಚಾಲಯಗಳು ಇದ್ದರೂ ಅವು ಅವ್ಯವಸ್ಥೆಯ ಆಗರವಾಗಿವೆ. ಮುಖ್ಯ ರಸ್ತೆ ಹಾಗೂ ಪ್ರಮುಖ ವೃತ್ತದ ಬಳಿ ಸಾರ್ವಜನಿಕ ಶೌಚಾಲಯಗಳ ಕೊರತೆ ಎದುರಾಗಿದೆ. ಇಲ್ಲಿ ಶೌಚಾಲಯಗಳು ಇರುವ ಬಗ್ಗೆ ಎಲ್ಲಿಯೂ ಸೂಚನಾ ಫಲಕಗಳಿಲ್ಲ. ಹೀಗಾಗಿ ಹಳ್ಳಿಗಳು ಹಾಗೂ ಬೇರೆ ಊರುಗಳಿಂದ ಬಂದವರು ಬೇರೆ ದಾರಿ ಕಾಣದೇ ಬಯಲಲ್ಲೇ ಮಲ, ಮೂತ್ರ ವಿಸರ್ಜಿಸುತ್ತಾರೆ. ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳ ಮೇಲೆ ‘ಮಲ–ಮೂತ್ರ ವಿಸರ್ಜನೆ ಮಾಡುವಂತಿಲ್ಲ’ ಎಂಬ ನಾಮಫಲಕ ಹಾಗೂ ಗೋಡೆ ಬರಹಗಳಿವೆ. ಹೀಗಿದ್ದರೂ ಜನ ಅಲ್ಲೇ, ಯಾವುದೇ ಸಂಕೋಚವಿಲ್ಲದೇ ಮಲ, ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ.
ಸಂತೆಹೊಂಡದ ಬಳಿಯ ಶೌಚಾಲಯ ಸದಾ ದುರ್ವಾಸನೆ ಬೀರುವ ತಾಣವಾಗಿದೆ. ಸ್ವಚ್ಛತೆ ಹಾಗೂ ನಿರ್ವಹಣೆ ಮರೀಚಿಕೆಯಾಗಿದೆ. ಈ ಸ್ಥಳದಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯದ ನಿರ್ವಹಣೆ ಹಾಗೂ ಸ್ಥಿತಿ–ಗತಿ ಹೇಗಿದೆ ಎಂಬ ಬಗ್ಗೆ ನಗರಸಭೆ ಬಳಿ ಸರಿಯಾದ ಮಾಹಿತಿ ಇಲ್ಲವಾಗಿದೆ. ವಿಚಿತ್ರ ಎಂದರೆ ನಿತ್ಯ ಕಚೇರಿಯಲ್ಲಿ ಕೆಲಸ ಮಾಡುವ ನಗರಸಭೆ ಸಿಬ್ಬಂದಿಗೇ ಶೌಚಾಲಯದ ವ್ಯವಸ್ಥೆ ಇಲ್ಲ.
ಸಂತೆಹೊಂಡ ಸಮೀಪ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಶೌಚಾಲಯಗಳ ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗೆ ಹರಿಸಲಾಗುತ್ತಿದೆ. ಈ ಶೌಚಾಲಯಗಳು ದುರ್ನಾತ ಬೀರುತ್ತಿದ್ದು, ಒಳಗಡೆ ಹೋಗಲು ಸಾಧ್ಯವಾಗದೆ ಜನರು ಹೊರ ಭಾಗದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಶೌಚಾಲಯಗಳ ದುಃಸ್ಥಿತಿ ಬಗ್ಗೆ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆದರೂ ಈವರೆಗೂ ಶಾಶ್ವತ ಪರಿಹಾರ ದೊರೆತಿಲ್ಲ.
ನಗರದ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ನಿರ್ವಹಣೆಯೂ ಆಗುತ್ತಿಲ್ಲ. ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಬಂದಿದೆ. ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲಕೆ.ಟಿ.ಶಿವಕುಮಾರ್, ಹೋರಾಟಗಾರ
-ವಿ.ಧನಂಜಯ
ನಾಯಕನಹಟ್ಟಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ನಾಯಕನಹಟ್ಟಿಯಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಕಡಿಮೆಯಿದೆ. ಇದರಿಂದ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಮತ್ತು ನಾಗರಿಕರಿಗೆ ತೊಂದರೆಯಾಗಿದೆ.
ಪಟ್ಟಣ ಪಂಚಾಯಿತಿಯು ಸ್ವಚ್ಛ ಭಾರತ ಯೋಜನೆಯಡಿ ಜಾಗನೂರಹಟ್ಟಿ ಮಾರ್ಗದಲ್ಲಿ ಒಂದು ಸಾರ್ವಜನಿಕ ಶೌಚಾಲಯ, ಮೂತ್ರ ವಿಸರ್ಜನಾ ಕಟ್ಟಡ ನಿರ್ಮಿಸಿದೆ. ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆಯ ರಸ್ತೆ ಪಕ್ಕದಲ್ಲಿ ಎರಡು ಶೌಚಾಲಯ, ಪೊಲೀಸ್ ಠಾಣೆ ಹಿಂಭಾಗದಲ್ಲಿ ನೂತನವಾಗಿ ಸಮುದಾಯ ನಿರ್ವಹಿತ ಶೌಚಾಲಯ ನಿರ್ಮಿಸಲಾಗಿದೆ. ಇದನ್ನು ಹಿಂದುಳಿದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಬಳಕೆಗೆ ನೀಡಲಾಗಿದೆ.
ಪಂಪ್‌ಹೌಸ್ ಬಳಿ ಸಮುದಾಯ ನಿರ್ವಹಿತ ಶೌಚಾಲಯ ಸಿದ್ಧವಿದ್ದು, ಉದ್ಘಾಟನೆಯಾಗಬೇಕಿದೆ. ಹಾಲಿನ ಡೇರಿ ಬಳಿಯ ಮೂತ್ರಾಲಯ ನಿರ್ವಹಣೆಯಿಲ್ಲದೆ ಸೊರಗಿದೆ. ಹೀಗೆ ಹಲವೆಡೆ ಸಾರ್ವಜನಿಕ, ಸಮುದಾಯ ಶೌಚಾಲಯಗಳನ್ನು ಪಟ್ಟಣ ಪಂಚಾಯಿತಿ ನಿರ್ಮಿಸಿದೆ. ಇವುಗಳ ನಿರ್ವಹಣೆ ಸರಿ ಇಲ್ಲ. ಕೆಲವು ಜನನಿಬಿಡ ಪ್ರದೇಶಗಳಿಂದ ದೂರವಿರುವ ಕಾರಣ ಪ್ರಯಾಣಿಕರು ಮತ್ತು ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ 16 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೂ ಸಮುದಾಯ ಶೌಚಾಲಯದ ಅಗತ್ಯವಿದೆ.
ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ಆವರಣದಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ ಏಕಕಾಲಕ್ಕೆ 50 ಜನ ಬಳಸಬಹುದಾದ ಸುಲಭ ಶೌಚಾಲಯವಿದ್ದು, ನಿರ್ವಹಣೆ ಅಚ್ಚುಕಟ್ಟಾಗಿದೆ. ಆದರೆ ಒಳಮಠದ ಬಳಿಯ ಸಮುದಾಯ ಭವನದ ಹಿಂದೆ 10 ಜನರು ಬಳಸಬಹುದಾದ ಶೌಚಾಲಯ ಇದ್ದರೂ ಇಲ್ಲದ ಸ್ಥಿತಿಯಲ್ಲಿದೆ.
ಸಮುದಾಯ ಭವನದ ಹಿಂದೆ ನಿರ್ಮಿಸಿರುವ ಕಾರಣ ಜನರಿಗೆ ಅಲ್ಲಿ ಶೌಚಾಲಯ ಇದೇ ಎಂಬುದೇ ತಿಳಿಯದಂತಾಗಿದೆ. ಇದರಿಂದಾಗಿ ದೇಗುಲದ ಮುಂದಿರುವ ಅಂಗಡಿ ಮುಂಗಟ್ಟಗಳ ಹಿಂದೆಯೇ ಶೌಚ ಕಾರ್ಯ ಮುಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಒಳಮಠ ದೇಗುಲದ ನೂತನ ದಾಸೋಹ ಮಂದಿರದ ಬಳಿ ಶೌಚಾಲಯ ನಿರ್ಮಿಸಿದರೆ ಭಕ್ತರಿಗೆ ಅನುಕೂಲವಾಗಲಿದೆ.
-ಎಚ್.ಡಿ.ಸಂತೋಷ್
ಹೊಸದುರ್ಗ: 4 ಬಾರಿ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪಡೆದ ಹೊಸದುರ್ಗದಲ್ಲಿ ಬೆರಳೆಣಿಕೆಯಷ್ಟು ಶೌಚಾಲಯಗಳು ಇದ್ದು, ಅವು ನಿರ್ವಹಣೆ ಇಲ್ಲದೇ ನಲುಗಿವೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿನ ಶೌಚಾಲಯದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಲ್ಲಿ ಕಸದ ಬುಟ್ಟಿಯ ವ್ಯವಸ್ಥೆಯಿಲ್ಲ. ಬಾಗಿಲುಗಳು ಇದ್ದೂ ಇಲ್ಲದಂತಿವೆ. ಸುತ್ತಮುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ನೀರಿನ ವ್ಯವಸ್ಥೆ ದೂರದ ಮಾತಾಗಿದೆ. ಇಷ್ಟಾದರೂ ಶೌಚಾಲಯ ಬಳಸುವವರಿಂದ ತಲಾ ₹ 5 ಪಡೆಯಲಾಗುತ್ತಿದೆ.
ಎರಡನೇ ಮುಖ್ಯ ರಸ್ತೆಯಲ್ಲಿನ ಶೌಚಾಲಯದಲ್ಲಿ ಬಾಗಿಲುಗಳೇ ಭದ್ರವಾಗಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಅಶೋಕ ರಂಗಮಂದಿರದ ಎದುರು ಬಯಲಲ್ಲೇ ಶೌಚ ಮಾಡಲಾಗುತ್ತಿದೆ.
ಪಟ್ಟಣದ ಬಂಡೆ ಮಾರುಕಟ್ಟೆ, ಕುರಿ ಮಾರುಕಟ್ಟೆ, ನಿತ್ಯ ನಡೆಯುವ ತರಕಾರಿ ಮಾರುಕಟ್ಟೆ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಬಂಡೆ ಮಾರುಕಟ್ಟೆಗೆ ವ್ಯಾಪಾರಸ್ಥರು ರಾತ್ರಿ 9 ಗಂಟೆಯಿಂದಲೇ ಬಂದು, ಬೆಳಿಗ್ಗೆ 11 ಗಂಟೆಯವರೆಗೂ ಇರುತ್ತಾರೆ. ಬೆಳಿಗ್ಗೆ ವ್ಯಾಪಾರ ವಹಿವಾಟು ತುಸು ಜೋರಾಗಿಯೇ ನಡೆಯುತ್ತಿರುತ್ತದೆ. ಪಟ್ಟಣದ ನೂರಾರು ಜನರು ಇಲ್ಲಿ ಓಡಾಡುತ್ತಾರೆ. ಅವರಿಗೆ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ.
ನಗರದ ಸೌಂದರ್ಯ ಹಾಗೂ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪುರಸಭೆಯು ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯ ನಿರ್ಮಿಸಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.