ADVERTISEMENT

ಚಿತ್ರದುರ್ಗ: 8 ಜನರಿಗೆ ಕೋವಿಡ್‌, ಶುಶ್ರೂಷಕಿ, ಪ್ರಯೋಗಾಲು ಸಿಬ್ಬಂದಿಗೂ ಸೋಂಕು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 14:24 IST
Last Updated 13 ಜುಲೈ 2020, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಶುಶ್ರೂಷಕಿ ಹಾಗೂ ಪ್ರಯೋಗಾಲಯದ ಸಿಬ್ಬಂದಿ ಸೇರಿ ಎಂಟು ಜನರಿಗೆ ಕೋವಿಡ್‌ ಇರುವುದು ಸೋಮವಾರ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗದ 47 ವರ್ಷದ ಪುರುಷ, 45 ವರ್ಷದ ಪುರುಷ, 29 ವರ್ಷದ ವ್ಯಕ್ತಿ, 60 ವರ್ಷದ ಮಹಿಳೆ, 80 ವರ್ಷದ ವೃದ್ಧೆ ಹಾಗೂ 52 ವರ್ಷದ ಮಹಿಳೆ ಕೊರೊನಾ ಸೋಂಕಿತರು. ಹಿರಿಯೂರಿನ 31 ವರ್ಷದ ಮಹಿಳೆ ಮತ್ತು ಚಳ್ಳಕೆರೆಯ 65 ವರ್ಷದ ಪುರುಷನಿಗೆ ಸೋಂಕು ಇರುವುದು ಖಚಿತವಾಗಿದೆ. ಇವರಲ್ಲಿ ಬಹುತೇಕರು ಪ್ರಾಥಮಿಕ ಸಂಪರ್ಕಿತರು.

ಸೋಮವಾರ 120 ಜನರ ಗಂಟಲು, ಮೂಗು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 8 ಜನರಲ್ಲಿ ಪಾಸಿಟಿವ್‌ ಕಾಣಿಸಿಕೊಂಡಿದೆ. ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಇವರ ಗಂಟಲು ದ್ರವದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ADVERTISEMENT

120 ರೋಗಿಗಳಲ್ಲಿ 83 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 36 ಸಕ್ರಿಯ ಪ್ರಕರಣಗಳಿವೆ. ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ 15, ಭರಮಸಾಗರದಲ್ಲಿ 2, ಹಿರಿಯೂರು ತಾಲ್ಲೂಕು ಧರ್ಮಪುರದಲ್ಲಿ 5, ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 1, ಪರಶುರಾಂಪುರದಲ್ಲಿ 3, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 2, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದಲ್ಲಿ ಮೂವರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 32 ಕಂಟೈನ್ಮೆಂಟ್ ವಲಯಗಳಿವೆ. ಸೋಂಕಿತರಿಗೆ ಸಂಬಂಧಿಸಿದಂತೆ 1,994 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.