
ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ ಮಾತನಾಡಿದರು
ಚಿತ್ರದುರ್ಗ: ‘ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಕನ್ನಡ ಭಾಷೆಯ ಹಿರಿಮೆ ಕನ್ನಡಿಗರಿಂತ ಬೇರೆಯವರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಕನ್ನಡಿಗರು ಮಾತೃಭಾಷಾ ಪ್ರೀತಿ ಬೆಳೆಸಿಕೊಳ್ಳದಿರುವುದು ದುರದೃಷ್ಟಕರ’ ಎಂದು ಇತಿಹಾಸ ಸಂಶೋಧಕ ಬಿ.ರಾಜಶೇಖರಪ್ಪ ವಿಷಾದಿಸಿದರು.
ಎಸ್‌ಜೆಎಂ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಕನ್ನಡ ಭಾಷೆಯ ಶಾಲೆಗಳು ಉಳಿಯಬೇಕು, ಬೆಳೆಯಬೇಕು. ಶಾಲೆಗಳು ಮುಚ್ಚುವ ಸ್ಥಿತಿ ತಲುಪಬಾರದು. ಶಾಲೆಗಳನ್ನು ಉಳಿಸಲು ಸರ್ಕಾರಗಳು, ಹೋರಾಟಗಾರರು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿಂದಲೇ ಕನ್ನಡ ಪ್ರೇಮ ಬೆಳೆಸಬೇಕು. ಕನ್ನಡ ಪತ್ರಿಕೆ, ಕನ್ನಡದ ಲೇಖನ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು’ ಎಂದು ಹೇಳಿದರು.
‘ಕನ್ನಡದಲ್ಲಿ ಪತ್ರ ಬರೆಯುವ ಹವ್ಯಾಸವನ್ನು ಯುವಜನರು ಬೆಳೆಸಿಕೊಳ್ಳಬೇಕು. ಕನ್ನಡಪರವಾಗಿ ಕನಿಷ್ಠ ಪ್ರೇಮ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಕನ್ನಡ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಲಿಪಿ ಅತ್ಯಂತ ಸುಂದರವಾಗಿದೆ. ಕನ್ನಡ ಭಾಷೆ ದ್ರಾವಿಡ ಮಹಾಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಜಗತ್ತಿನ ಅನೇಕ ವಿದ್ವಾಂಸರು ಕನ್ನಡ ಲಿಪಿಯನ್ನು ಸುಂದರವಾದ ಲಿಪಿಯೆಂದು ಹೇಳಿದ್ದಾರೆ. ವಿನೋಭಾ ಭಾವೆಯವರು ಕನ್ನಡ ಲಿಪಿ ಜಗತ್ತಿನ ಲಿಪಿಗಳ ರಾಣಿಯೆಂದು ಬಣ್ಣಿಸಿದ್ದಾರೆ’ ಎಂದರು.
‘ಮೊಳಕಾಲ್ಮೂರಿನ ಬ್ರಹ್ಮಗಿರಿ ಶಾಸನದಲ್ಲಿ ಇಸಿಲಾ ಎಂಬ ಕನ್ನಡದ ಪದವಿದೆ. ಇಸಿಲಾ ಎಂದರೆ ಕೋಟೆಯಿರುವಂತಹ ನೆಲೆ ಎಂದರ್ಥ. ಇದು ಕ್ರಿ.ಶ 3ನೇ ಶತಮಾನದಲ್ಲಿ ಅಶೋಕನು ಹಾಕಿದ ಶಾಸನವಾಗಿದೆ. ಭೀಮಸಮುದ್ರ, ಕೊಡಗನೂರಿನಲ್ಲಿ ಲಭ್ಯವಿರುವ ಶಾಸನಗಳಲ್ಲಿ ಕನ್ನಡದ ಹಿರಿಮೆಯನ್ನು ಕಾಣಬಹುದು. ಈ ಶಾಸನಗಳಲ್ಲಿ ಕನ್ನಡ ಲಿಪಿಯ ಚೆಲುವನ್ನು ಬಣ್ಣಿಸಲಾಗಿದೆ. 9ನೇ ಶತಮಾನದಲ್ಲಿ ಶ್ರೀವಿಜ ಕವಿರಾಜಮಾರ್ಗ ರಚಿಸಿದ್ದಾರೆ. 10ನೇ ಶತಮಾದ ಆದಿಕವಿ ಪಂಪನ ಕಾವ್ಯಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ’ ಎಂದರು.
ಸಂಶೋಧಕಿ ಯಶೋದಾ ರಾಜಶೇಖರಪ್ಪ, ‘ಬನವಾಸಿಯ ಕದಂಬರ ದೊರೆ ಮಯೂರವರ್ಮನು ಪಲ್ಲವರಿಂದ ಅವಮಾನಕ್ಕೆ ಒಳಗಾದ ನಂತರ ಆತ ದುರ್ಗದ ನೆಲದಲ್ಲಿ ನೆಲೆ ಕಂಡುಕೊಂಡ. ಚಂದ್ರವಳ್ಳಿ ಪ್ರದೇಶಕ್ಕೆ ಬಂದು ನೆಲೆಸಿ ಇಲ್ಲಿಯ ಜನರ ಸಹಾಯದಿಂದ ಪಲ್ಲವರ ವಿರುದ್ಧ ಹೋರಾಡಿ ಕನ್ನಡದ ಮೊದಲ ಸಾಮ್ರಾಜ್ಯವನ್ನು ಸ್ಥಾಪಿಸಿದ. ಕನ್ನಡ ಸಾಮ್ರಾಜ್ಯವನ್ನು ಕಟ್ಟಲು ಮಯೂರವರ್ಮನಿಗೆ ಆಶ್ರಯ ನೀಡಿದ ನಾಡು ನಮ್ಮ ಚಿತ್ರದುರ್ಗದ ಚಂದ್ರವಳ್ಳಿ ಪ್ರದೇಶ ಎನ್ನುವುದು ಹೆಮ್ಮೆಯ ವಿಷಯವಾಗಿದೆ’ ಎಂದರು.
ಪ್ರಾಚಾರ್ಯ ಪಿ.ಬಿ.ಭರತ್, ‘ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳೇ ಮುಂದಾಳತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಬಹುಭಾಷೆಗಳ ನಡುವೆ ಕನ್ನಡದ ಸಾರ್ವಭೌಮತ್ವವನ್ನು ಹಾಗೂ ಆಸ್ಮಿತೆಯನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕನ್ನಡವನ್ನು ನಾವು ಉಳಿಸಿದರೆ ನಾವು ಕನ್ನಡವನ್ನು ಬೆಳೆಸಿದಂತೆ’ ಎಂದರು.
ಸಮಾರಂಭದಲ್ಲಿ ಬಿ.ಜಿ.ಕುಮಾರಸ್ವಾಮಿ, ಕೆ.ಆರ್.ಕೃಷ್ಣಾರೆಡ್ಡಿ, ಎಸ್.ಪಿ.ಶಿವಕುಮಾರ್, ಟಿ.ವಿ.ಅರವಿಂದ, ಎಚ್.ಕೆ.ಲೋಕೇಶ್, ಎ.ಎಂ.ರಾಜೇಶ್, ಎಸ್.ಚೇತನ್, ನಿರಂಜನ್ ಕೆ. ಶ್ರೀಮತಿ ಪಲ್ಲವಿ ಇದ್ದರು.
ಎಸ್‌ಜೆಎಂ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿ ‘ಕನ್ನಡದ ಬಗ್ಗೆ ಸರಿಯಾದ ತಿಳಿವಳಿಕೆ ಹಾಗೂ ಅನುಭವಗಳು ಇಲ್ಲದ ಕಾರಣ ಭಾಷಾಪ್ರೇಮ ಮೂಲೆಗುಂಪಾಗುತ್ತಿದೆ. ಕನ್ನಡ ಪಠ್ಯಕ್ರಮವನ್ನು ತಂದೆತಾಯಿಗಳು ಸರಿಯಾಗಿ ಮಕ್ಕಳಿಗೆ ಓದಿಸಿದರೆ ಅದರ ಪರಿಣಾಮ ತಿಳಿಯುತ್ತದೆ. ಕನ್ನಡ ಭಾಷೆ ನಮಗೆ ಸಂತೋಷ ನೀಡುವ ಆನಂದ ಭಾಷ್ಪ ತರುವ ಶಕ್ತಿ ಹೊಂದಿದೆ’ ಎಂದರು. ‘ಇಂದಿನ ಯುವ ಜನತೆ ಸಾಧ್ಯವಾದಲ್ಲಿ ಹಳೆಗನ್ನಡ ಹಾಗೂ ನಡುಗನ್ನಡದ ಒಂದೊಂದು ಕೃತಿ ಓದಿದರೆ ನಮ್ಮ ಭಾಷೆಯ ಮಹತ್ವ ತಿಳಿಯುತ್ತದೆ. ಆ ಮೂಲಕ ಜೀವನ ಸಾರ್ಥಕವಾಗುತ್ತದೆ. ಕನ್ನಡ ಸಾಹಿತ್ಯ ಜೈನ ಸಾಹಿತ್ಯದಿಂದ ಶ್ರೀಮಂತವಾಯಿತು. ಜೈನ ಸಾಹಿತ್ಯ ಅದ್ಭುತವಾದ ಕೊಡುಗೆ ನೀಡಿದೆ. ವಚನ ಸಾಹಿತ್ಯ ದಾಸ ಸಾಹಿತ್ಯ ಸಹ ಕನ್ನಡಕ್ಕೆ ತನ್ನದೇ ಆದ ಕೊಡುಗೆ ನೀಡಿವೆ. ಇವು ಕೇವಲ ಸಾಹಿತ್ಯವಲ್ಲ. ನಮ್ಮ ಬದುಕಿಗೆ ನೆಮ್ಮದಿ ಹಾಗೂ ದಾರಿ ತೋರುವ ಮಾರ್ಗಗಳಾಗಿವೆ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.