ADVERTISEMENT

ಚಿತ್ರದುರ್ಗ | ಡೆಸ್ಟಿನಿ ಸೂಪರ್‌; ದೇಸಿ ಕಲೆಗಳ ದರ್ಬಾರ್‌...

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 9:01 IST
Last Updated 26 ಜನವರಿ 2026, 9:01 IST
‘ಡೆಸ್ಟಿನಿ’ ಸಮಾರಂಭದಲ್ಲಿ ಪ್ರದರ್ಶನಗೊಂಡ ಮಲ್ಲಕಂಬ ನೃತ್ಯ 
‘ಡೆಸ್ಟಿನಿ’ ಸಮಾರಂಭದಲ್ಲಿ ಪ್ರದರ್ಶನಗೊಂಡ ಮಲ್ಲಕಂಬ ನೃತ್ಯ    

ಚಿತ್ರದುರ್ಗ: ದೇವರಾಜ ಅರಸು ಶಿಕ್ಷಣ ಸಂಸ್ಥೆ ಆವರಣದ ‘ವಿದ್ಯಾದಾನ ಸೌಧ’ದಲ್ಲಿ ನಾಲ್ಕು ದಿನಗಳವರೆಗೆ ನಡೆದ ‘ಡೆಸ್ಟಿನಿ– 2026’ ಸಾಂಸ್ಕೃತಿಕ ಹಬ್ಬ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಯಿತು. ಆಕರ್ಷಕ, ಭವ್ಯ ಭೂಮಿಕೆಯಲ್ಲಿ ವಿದ್ಯಾರ್ಥಿಗಳು ಹೊಸ ಲೋಕವನ್ನೇ ಕಣ್ತುಂಬಿಕೊಂಡರು. ಸಂಗೀತ– ನೃತ್ಯದ ಸಂಗಮವಾಗಿದ್ದ ಕಾರ್ಯಕ್ರಮ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭರವಸೆಯ ಬೆಳಕು ಬಿತ್ತುವಲ್ಲಿ ಯಶಸ್ವಿಯಾಯಿತು.

ಜ.10ರಿಂದ 13ರವರೆಗೆ ಪ್ರತಿದಿನ ಸಂಜೆ ಆರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರೆ ನಂತರ ಸೆಲೆಬ್ರಿಟಿ ವಿಭಾಗದಲ್ಲಿ ವಿಶ್ವ ಪ್ರಸಿದ್ಧಿ ಪಡೆದಿರುವ ಕಲಾವಿದರು ತಮ್ಮ ಗಾಯನ, ವಾದ್ಯಸುಧೆ ಹರಿಸುವ ಮೂಲಕ ವಿದ್ಯಾರ್ಥಿಗಳು, ಪೋಷಕರು ಹಾಗೂ ಕೋಟೆನಾಡಿನ ಜನರ ಮನಸೂರೆಗೊಂಡರು. ಚುಮುಚುಮು ಚಳಿಯ ನಡುವೆಯೂ ಪ್ರೇಕ್ಷಕರಲ್ಲಿ ಸಾಂಸ್ಕೃತಿಕ ಭಾವನೆ ಮೂಡಿಸುವಲ್ಲಿ ಡೆಸ್ಟಿನಿ ಕಾರ್ಯಕ್ರಮ ಯಶಸ್ವಿಯಾಯಿತು. ಆ ಮೂಲಕ ದುರ್ಗದ ಪ್ರಮುಖ ಸಾಂಸ್ಕೃತಿಕ ಹಬ್ಬವಾಗಿ ಹೊರಹೊಮ್ಮಿತು.

ಶೈಕ್ಷಣಿಕ ಕ್ಷೇತ್ರದಲ್ಲಿ 42 ವಸಂತಗಳನ್ನು ಪೂರೈಸಿ 43ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ದೇವರಾಜ ಅರಸು ಶಿಕ್ಷಣ ಸಂಸ್ಥೆ ಕೋಟೆನಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ನೀಡುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಡೆಸ್ಟಿನಿ ಕಾರ್ಯಕ್ರಮದ ಮೂಲಕ ಸಂಸ್ಥೆ ಮಕ್ಕಳು, ಯುವಜನರು ಹಾಗೂ ಪೋಷಕರ ಮನಸ್ಸಿನಲ್ಲಿ ವಿಶ್ವಾಸವನ್ನು ನೂರ್ಮಡಿಗೊಳಿಸಿದೆ.

ADVERTISEMENT

ಡೆಸ್ಟಿನಿ ಸಾಂಸ್ಕೃತಿಕ ಹಬ್ಬಕ್ಕೆ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಸಾಕ್ಷಿಯಾದರು. ನಾಲ್ಕು ದಿನಗಳವರೆಗೆ ಎಲ್ಲವನ್ನು ಬಹಳ ಶಿಸ್ತು, ಸಂಯಮ ಅಚ್ಚುಕಟ್ಟಿನಿಂದ ನಡೆಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಕಾರ್ಯಕ್ರಮ ಸಂಘಟನೆಯಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಸಿಬ್ಬಂದಿ ತೋರಿದ ಬದ್ಧತೆ ವಿದ್ಯಾರ್ಥಿಗಳ ಪಾಲಿಗೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿತು.

ಜ.10ರ ಶನಿವಾರ ಮುಸ್ಸಂಜೆ ಹೊತ್ತಿನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಡೆಸ್ಟಿನಿ–2026ಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನೆಯ ದೀಪ ಹೊತ್ತಿ ಉರಿಯುತ್ತಿದ್ದಂತೆ ಪಟಾಕಿ, ಸಿಡಿಮದ್ದಿನ ಸದ್ದು ಕಣ್ಣರಳಿಸಿತು. ಬೆಳಕಿನ ಚಿತ್ತಾರ ಎತ್ತರಕ್ಕೇರಿತು. ವೇದಿಕೆ ಮುಂಭಾಗದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಎಚ್‌.ಚಂದ್ರಕಲಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಂ.ಸಿ.ರಘುಚಂದನ್‌, ಸಂಸ್ಥೆಯ ಅಧ್ಯಕ್ಷೆ ಎಂ.ಸಿ.ಯಶಸ್ವಿನಿ, ಎಂ.ಸಿ.ದೀಪ್‌ಚಂದನ್‌, ಹಿರಿಯ ಉಪ ನೋಂದಣಾಧಿಕಾರಿ ತಿಪ್ಪೇರುದ್ರಪ್ಪ, ಮೈರಾ ಅಕಾಡೆಮಿಯ ಮನೀಷ್‌, ಸುಧಾ ದೇವರಾಜ್‌, ಸಂಸ್ಥೆಯ ಡೀನ್‌ (ಶೈಕ್ಷಣಿಕ) ಡಾ.ಬಿ.ಸಿ. ಅನಂತರಾಮು, ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎ.ಜೆ.ಶಿವಕುಮಾರ್, ಡಾ. ಜಿ.ಇ. ಬೈರಸಿದ್ದಪ್ಪ, ಕೆ.ಪಿ. ನಾಗಭೂಷಣ ಶೆಟ್ಟಿ ಹಾಜರಿದ್ದರು.

ಅದೇ ದಿನ ಸಂಜೆ ನಡೆದ ಸೆಲೆಬ್ರಿಟಿ ಕಾರ್ಯಕ್ರಮಗಳಲ್ಲಿ ಖ್ಯಾತ ಡೀಪ್ಸ್ ಬ್ಯಾಂಡ್ ತಂಡದ ವಾದ್ಯ ಸಂಗೀತ ಕಾರ್ಯಕ್ರಮ ಅತ್ಯಂತ ಮನಮೋಹಕವಾಗಿತ್ತು. ಶ್ರೋತೃಗಳ ಮನಸ್ಸಿಗೆ ನೆಮ್ಮದಿ ನೀಡುವ ನಿಜವಾದ ಸಂಗೀತಾನಂದದ ಅನುಭವವಾಗಿ ಪರಿಣಮಿಸಿತು. ಅವರ ಸಂಗೀತ ಪ್ರಸ್ತುತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗ್ಗಪ್ಪ, ಸುಷ್ಮಿತಾ, ಸೂರಜ್ ಹಾಗೂ ತಂಡ ಪ್ರದರ್ಶಿಸಿದ ಹಾಸ್ಯ ನಾಟಕ (ಸ್ಕಿಟ್) ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿತು. ವಿಭಿನ್ನ ಹಾಸ್ಯಶೈಲಿ, ನೈಜ ಜೀವನದ ಘಟನೆಗಳ ಆಧಾರಿತ ಹಾಸ್ಯ ಪ್ರದರ್ಶನ ಮತ್ತು ಕಲಾವಿದರ ಸಮರ್ಥ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು, ಬೆಳಕು–ಧ್ವನಿ ವ್ಯವಸ್ಥೆಯ ಸೊಗಸಾದ ಸಂಯೋಜನೆ ಹಾಗೂ ಶಿಸ್ತುಬದ್ಧ ಆಯೋಜನೆ ಎಲ್ಲರ ಗಮನ ಸೆಳೆಯಿತು.

ನರಸಿಂಹ ಅವತಾರದ ದರ್ಶನ: ಜ.11ರಂದು ಭಾನುವಾರ ನಡೆದ 2ನೇ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಭಿನಯಿಸಿದ ಅಂಜನೇಯ ಭಕ್ತಿ ನೃತ್ಯ, ನರಸಿಂಹ ಅವತಾರ ಅಭಿನಯ, ನವದುರ್ಗೆ ನೃತ್ಯ ಪ್ರದರ್ಶನಗಳು ಅತ್ಯಂತ ಅದ್ಭುತವಾಗಿದ್ದವು. ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಮೂಡಿಬಂದ ಮನಮುಟ್ಟುವ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ಅವರ ಮೆಚ್ಚುಗೆಯನ್ನೂ ಗಳಿಸಿದವು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಸೃಜನಶೀಲತೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ವಿಶೇಷವಾಗಿ ‘ಹನುಮಾನ್‌ ಚಾಲೀಸಾ‘ಕ್ಕೆ ನೃತ್ಯ ಸಂಯೋಜನೆ ಮಾಡಿದ್ದು ಎಲ್ಲರ ಮನಸೂರೆಗೊಂಡಿತು. ಹಗ್ಗದ ನೃತ್ಯ, ಮಲ್ಲಕಂಬ ಪ್ರದರ್ಶನ ಮಾಡಿದ್ದು ಎಲ್ಲರ ಗಮನ ಸೆಳೆಯಿತು.

ಸೆಲೆಬ್ರಿಟಿ ವಿಭಾಗದಲ್ಲಿ ಖ್ಯಾತ ಹಿನ್ನೆಲೆ ಗಾಯಕ, ಮೆಲೋಡಿ ಕಿಂಗ್‌ ರಾಜೇಶ್‌ ಕೃಷ್ಣನ್‌ ನೀಡಿದ ರಸಸಂಜೆ ಕಾರ್ಯಕ್ರಮ ಮನಸೂರೆಗೊಂಡಿತು. ವೇದಿಕೆ ಪ್ರವೇಶಿಸುತ್ತಿದ್ದಂತೆ ರಾಜೇಶ್‌ ಅವರು ‘ಒರಟ ಐ ಲವ್ ಯು’ ಚಿತ್ರದ ‘ಯಾರೋ... ಕಣ್ಣಲ್ಲಿ ಕಣ್ಣನ್ನಿಟ್ಟು ಮನಸ್ಸಿನಲ್ಲಿ ಮನಸನ್ನಿಟ್ಟು’ ಗೀತೆ ಹಾಡಿದರು. ಇದಕ್ಕೆ ಮಕ್ಕಳ ನೃತ್ಯ ಸಾಥ್ ನೀಡಿತು. ರಾಜೇಶ್ ಅವರ ಉತ್ಸಾಹದ ಗಾಯನಕ್ಕೆ ತಲೆದೂಗಿದ ಯುವತಿಯರು ಹಾಗೂ ಮಹಿಳೆಯರು ನೃತ್ಯ ಮಾಡಿ ಖುಷಿಪಟ್ಟರು.  

ಹಾಡಿನ ನಡುವೆ ಮಾತನಾಡಿದ ರಾಜೇಶ್ ಕೃಷ್ಣನ್ ‘ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಮಕ್ಕಳ ನೃತ್ಯದ ಜೊತೆ ಹಾಡುತ್ತಿರುವುದು ಅತೀವ ಖುಷಿ ನೀಡಿತು’ ಎಂದು ಹೇಳಿದರು. ನಂತರ ‘ಹುಚ್ಚ’ ಚಿತ್ರದ ‘ಉಸಿರೇ ಉಸಿರೇ’ ಗೀತೆ ಹಾಡಿದರು. ಈ ವೇಳೆ ರಾಜೇಶ್ ಅವರೊಂದಿಗೆ ಜನರೂ ಧ್ವನಿಗೂಡಿಸಿದರು. ಮೊಬೈಲ್ ಟಾರ್ಚ್ ಲೈಟ್ ಬೆಳಗಿಸಿ ಸಂಭ್ರಮದ ಹೊನಲು ಹರಿಯುವಂತೆ ಮಾಡಿದರು. 

‘ಅಮೆರಿಕಾ ಅಮೆರಿಕಾ’ ಚಿತ್ರದ ‘ನೂರು ಜನ್ಮಕು ನೂರಾರು ಜನ್ಮಕೂ’ ಗೀತೆ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿತು. ಮೌನದ ಜೊತೆ ಅನುಸಂಧಾನ ಮಾಡುವಂತೆ ರಾಜೇಶ್‌ ಕೃಷ್ಣನ್‌ ಅವರು ಈ ಗೀತೆಯನ್ನು ಮನದುಂಬಿ ಹಾಡಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸ್ಥಾಪಕ, ಶಾಸಕ ಡಾ.ಎಂ.ಚಂದ್ರಪ್ಪ ಅವರ ಕೋರಿಕೆ ಮೇರೆಗೆ ತಿರುಪತಿ ತಿರುಮಲ ದೇವರ ನೆನಪಿನಲ್ಲಿ ‘ಪವಡಿಸು ಪರಮಾತ್ಮ’ ಗೀತೆ ಹಾಡಿದರು. ಆಗ ಇಡೀ ಆವರಣದಲ್ಲಿ ಭಕ್ತಿ ಭಾವ ಮನೆಮಾಡಿತ್ತು. ಈ ಗೀತೆಯನ್ನು ಆಸ್ವಾದಿಸುವಾಗ ಶಾಸಕ ಚಂದ್ರಪ್ಪ ಅವರ ಕಣ್ಣಲ್ಲಿ ನೀರು ಜಿನುಗಿತು. ಈ ಗೀತೆ ಹಾಡುವ ಮೊದಲು ರಾಜೇಶ್ ಅವರು ತಾವು ಕಾಲಿಗೆ ಧರಿಸಿದ್ದ ಶೂಗಳನ್ನು ತೆಗೆದರು. ಆ ಮೂಲಕ ಭಕ್ತಿ ಸಮರ್ಪಿಸಿದರು. 

‘ಗಲಾಟೆ ಅಳಿಯಂದ್ರು‘ ಚಿತ್ರದ ‘ಸಾಗರಿಯೇ’ ಗೀತೆ ಯುವಜನರಲ್ಲಿ ಕಚಗುಳಿ ಇಡುವಲ್ಲಿ ಯಶಸ್ವಿಯಾಯಿತು. ‘ಸ್ನೇಹಲೋಕ’ ಚಿತ್ರದ ‘ಒಂದೇ ಉಸಿರಲ್ಲಿ ನಾನು ನೀನು’ ಗೀತೆಯನ್ನು ರಾಜೇಶ್‌ ಕೃಷ್ಣನ್‌ ಒಂದೇ ಉಸಿರಲ್ಲಿ ಹಾಡಿ ಮುಗಿಸಿದರು. ಇದು ಪ್ರೇಕ್ಷಕರ ಉಸಿರುಗಟ್ಟುವಂತೆ ಮಾಡಿತ್ತು. ರಾಜೇಶ್‌ ಜೊತೆ ನೆರೆದಿದ್ದವರೂ ಈ ಹಾಡು ಹಾಡಿ ಸಂಭ್ರಮಿಸಿದರು. ಅಶ್ವಿನಿ ಭಾಸ್ಕರ್, ಉಷಾ ಗಂಧರ್ವ, ಕುಮಾರ್ ಗಂಗೋತ್ರಿ ಮೊದಲಾದ ಕಲಾವಿದರು ರಾಜೇಶ್ ಕೃಷ್ಣನ್ ಅವರಿಗೆ ಸಾಥ್‌ ನೀಡಿದರು.

ತೆಯ್ಯಂ ನೃತ್ಯ ಪ್ರದರ್ಶನ: ಜ.12ರಂದು ಸೋಮವಾರ ನಡೆದ 3ನೇ ದಿನದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ನೃತ್ಯ ನಿರ್ದೇಶಕರಿಂದ ತರಬೇತಿ ಪಡೆದು ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮುದ್ದಾದ ಮತ್ತು ಚುರುಕು ಹೆಜ್ಜೆಗಳು ಮೆಚ್ಚುಗೆ ಗಳಿಸಿದವು. ಕಾಲೇಜು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ವೃತ್ತಿಪರ ಮಟ್ಟದ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮತ್ತೊಂದು ಆಯಾಮ ತಂದುಕೊಟ್ಟವು. ಮೂರು ದಿನಗಳಿಂದ ವಿಭಿನ್ನ ರೀತಿಯ ಪ್ರದರ್ಶನ ನೀಡಿದ ವಿದ್ಯಾರ್ಥಿಗಳು ನೋಡುಗರ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಕೇರಳದ ಸಾಂಸ್ಕೃತಿಕ ಕಲೆ ‘ತೆಯ್ಯಂ’ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಕೇರಳದ ಪಾರಂಪರಿಕ ಜನಪದ ನೃತ್ಯ ಶೈಲಿಯನ್ನು ವಿದ್ಯಾರ್ಥಿಗಳು ವೇದಿಕೆಯ ಮೇಲೆ ಅನಾವರಣಗೊಳಿಸಿದರು. ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ, ಭಕ್ತಿ ಮತ್ತು ಉತ್ತಮ ಅಭಿವ್ಯಕ್ತಿಯೊಂದಿಗೆ ವೇದಿಕೆಯ ಮೇಲೆ ಹೆಜ್ಜೆ ಗುರುತು ಮೂಡಿಸಿದರು. ವರ್ಣರಂಜಿತ ವೇಷಭೂಷಣ, ವಿಶಿಷ್ಟ ಮುಖವರ್ಣ, ದೇಹಚಲನೆಗಳು ಹಾಗೂ ಲಯಬದ್ಧ ತಾಳಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ಭಕ್ತಿಯ ನೃತ್ಯ ಸಂಯೋಜನೆಗಳಿಗೆ ದೈವಿಕ ಭಾವ ತುಂಬುವಲ್ಲಿ ಯಶಸ್ವಿಯಾದರು. ಜನಪದ ಸಂಸ್ಕೃತಿಯ ಆಳವನ್ನು ಪ್ರತಿಬಿಂಬಿಸುವ ನೃತ್ಯ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು.

ಪಿಯುಸಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಶಿವತಾಂಡವ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಿಸಿತು. ಶಕ್ತಿಯ ಸಂಯೋಜನೆಯ ಮೂಲಕ ಆಧ್ಯಾತ್ಮದ ಸ್ಪಂದನವನ್ನು ಮೂಡಿಸಿತು. ಪರಮಶಿವನ ತಾಂಡವ ರೂಪದ ಉಗ್ರತೆ, ಲಯ ಮತ್ತು ದೈವೀಕ ಶಕ್ತಿ ವೇದಿಕೆಯ ಮೇಲೆ ಅನಾವರಣಗೊಂಡಿತು. ಪ್ರತಿ ಪ್ರದರ್ಶನಕ್ಕೂ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಮತ್ತು ಹರ್ಷೋದ್ಗಾರಗಳು ಮೊಳಗಿದವು. ಪ್ರತಿ ನೃತ್ಯ ಪ್ರದರ್ಶನಗಳು ಕತ್ತಲು– ಬೆಳಕಿನ ಸಂಯೋಜನೆಯೊಂದಿಗೆ ಹೊಸ ಬಣ್ಣ ಮೂಡಿಸಲು ಯಶಸ್ವಿಯಾದವು.

ಸೆಲೆಬ್ರಿಟಿ ವಿಭಾಗದಲ್ಲಿ ಕನ್ನಡ ‌ರ್‍ಯಾಪರ್ ಎಂ.ಸಿ.ಬಿಜ್ಜು ಹಾಗೂ ಮಹಿಳಾ ರ್‍ಯಾಪರ್ ಇಶಾನಿ ಅವರ ಗೀತೆಗಳು ಪ್ರೇಕ್ಷಕರನ್ನು ಕುಂತಲ್ಲೇ ಕುಣಿಸಿದವು. ಬಹುತೇಕ ಗೀತೆಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಕಾರಣ ಯುವಜನರು ಗಾಯಕರೊಂದಿಗೆ ಧ್ವನಿಗೂಡಿಸಿದರು. ಬಿಜ್ಜು ಅವರು ಹಾಡಿದ ‘ಬ್ಯಾಡ್‌ ಬಾಯ್ಸ್‌’ ಗೀತೆ ಕೇಳುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮತ್ತೆ ಮತ್ತೆ ಹಾಡಿಸುವ ಮೂಲಕ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಮಕ್ಕಳೊಂದಿಗೆ ಪೋಷಕರು ಕೂಡ ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಬಿಗ್‌ಬಾಸ್‌ ಸ್ಪರ್ಧಿಯೂ ಆಗಿದ್ದ ಇಶಾನಿ ವಿಭಿನ್ನ ಶೈಲಿಯ ರ‍್ಯಾಪ್‌ ಗೀತೆಗಳ ಮೂಲಕ ಯುವಜನರ ಮನಸ್ಸಿನಲ್ಲಿ ಮಿಂಚು ಸಂಚಾರಗೊಳ್ಳುವಂತೆ ಮಾಡಿದರು.

ಡಿಜೆ ಬಜಾನ: ಜ.13ರಂದು ಮಂಗಳವಾರ ನಡೆದ ಕಡೇ ದಿನದ ಕಾರ್ಯಕ್ರಮದಲ್ಲಿ ಖ್ಯಾತ ಯುವ ಗಾಯಕಿ ದಿವ್ಯಾ ರಾಮಚಂದ್ರ ಅವರ ಗಾಯನ ಹಾಗೂ ಇರಾನ್‌ನ ಸುಮಯಾ ಅವರ ‘ಡಿಜೆ ಬಜಾನ’ ಸದ್ದಿಗೆ ಸಾವಿರಾರು ವಿದ್ಯಾರ್ಥಿಗಳು ಗೆಜ್ಜೆ ಕಟ್ಟಿಕೊಂಡವರಂತೆ ಕುಣಿದರು. ದಿವ್ಯಾ ಅವರು ಹಾಡಿದ ಕನ್ನಡ ಚಿತ್ರಗೀತೆಗಳ ರೀಮಿಕ್ಸ್ ಹಾಡುಗಳು ಯುವಜನರ ಮನಸುಗಳಲ್ಲಿ ಕಚಗುಳಿ ಇಟ್ಟವು. ಗಾಯನದ ಜೊತೆಗಿದ್ದ ಡಿಜೆಗೆ ಯುವಕರು ಮನಸೋತು ಕುಪ್ಪಳಿಸಿದರು. ಹಳೆಯ ಮತ್ತು ಹೊಸ ಚಿತ್ರಗೀತೆಗಳ ರೀಮಿಕ್ಸ್ ಗಾಯನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಜಾನಪದ ಧಾಟಿಯ ‘ನಾ ಡ್ರೈವರಾ’ ಗೀತೆ ಆರಂಭಿಸುತ್ತಿದ್ದಂತೆ ಉದ್ಘೋಷ ಮೊಳಗಿಸಿದರು. ರೀಮಿಕ್ಸ್‌ನಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್‌ ಹುಟ್ಟಬೇಕು’ ಗೀತೆಗೆ ಪ್ರೇಕ್ಷಕರೂ ಧ್ವನಿಗೂಡಿಸಿದರು. ‘ಅಲ್ಲಾಡ್ಸ್ ಅಲ್ಲಾಡ್ಸ್‌’ ಗೀತೆಗೆ ಹುಚ್ಚೆದ್ದವರಂತೆ ಕುಣಿದರು. ‘ಮಸ್ತ್ ಮಲೈಕಾ’ ಗೀತೆ ಹುಡುಗರ ಮೈಯಲ್ಲಿ ಮಿಂಚು ನವಿರೇಳುವಂತೆ ಮಾಡಿತು.

ಡಿಜೆ ಸುಮಯಾ ಅವರು ಯುವ ಮನಸ್ಸುಗಳಿಗೆ ತಕ್ಕಂತೆ ಚೈತನ್ಯಭರಿತ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿದ್ಯುತ್‌ ಸಂಚಾರ ಮೂಡಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರವಲ್ಲದೇ ಶಾಲಾ, ಕಾಲೇಜು ಶಿಕ್ಷಕರು ಹಾಗೂ ಸಿಬ್ಬಂದಿಯೂ ನೃತ್ಯ ಮಾಡಿದರು. ಮಕ್ಕಳು, ಪೋಷಕರು ಕೂಡ ಹೆಜ್ಜೆ ಹಾಕಿದರು.

ಕನ್ನಡ, ಹಿಂದಿ ಹಾಡುಗಳು ಇಡೀ ಕಾಲೇಜು ಆವರಣವನ್ನು ನೃತ್ಯ ವೇದಿಕೆಯನ್ನಾಗಿ ಮಾಡಿದವು. ‘ಟಗರು ಬಂತು ಟಗರು’ ಗೀತೆ ಬಂದಾಗ ಯುವಜನರ ಉದ್ಘೋಷ ಮುಗಿಲು ಮುಟ್ಟಿತು. ಪ್ರೇಮಲೋಕ ಚಿತ್ರದ ‘ಯಾರೇ ನೀನು ರೋಜ ಹೂವೇ’ ಗೀತೆಗಂತೂ ಹುಡುಗರು ಹುಚ್ಚೆದ್ದು ಕುಣಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ‘ನಾನು ನಂದಿನಿ, ಬೆಂಗಳೂರಿಗೆ ಬಂದೀನಿ’ ಗೀತೆ ಮೆಚ್ಚುಗೆ ಗಳಿಸಿತು. ಜೊತೆಗೆ ‘ಕರಿ ಮಣಿ ಮಾಲೀಕ ನೀನಲ್ಲ’ ಗೀತೆ ಹಾಕಿದಾಗ ಕಾಲೇಜು ಮೈದಾನದಲ್ಲಿದ್ದ ಪ್ರತಿಯೊಬ್ಬರೂ ಹಾಡಿದರು. ‘ಏಳು ಮಲೆ ಮಾದೇವ’ ಗೀತೆ ಹಾಕಿದಾಗ ನೃತ್ಯದಲ್ಲೂ ಭಕ್ತಿ ಭಾವ ಮೂಡಿತು. ಆರ್‌ಸಿಬಿ ಕ್ರಿಕೆಟ್‌ ಗೆಲುವಿನ ಗೀತೆ ಇಡೀ ಕಾಲೇಜು ಆವರಣದಲ್ಲಿ ವಿಜಯೋತ್ಸವವನ್ನು ಮೊಳಗಿಸಿತು.

ಸಮಾರೋಪ ಸಮಾರಂಭದ ಅಂಗವಾಗಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಸಿಬ್ಬಂದಿಗೆ ‘ಶ್ರೇಷ್ಠ ಸಿಬ್ಬಂದಿ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅತ್ಯುತ್ತಮ ಸೇವೆ ಸಲ್ಲಿಸಿದ ಕೆ.ಪಿ. ನಾಗಭೂಷಣ ಶೆಟ್ಟಿ ಅವರಿಗೆ ಶ್ರೇಷ್ಠ ಪ್ರಾಂಶುಪಾಲರು, ಕೆ.ಟಿ. ಕೊಟ್ರೇಶ್‌ ಅವರಿಗೆ ಶ್ರೇಷ್ಠ ಅಕಾಡೆಮಿಕ್ ಕೋ ಆರ್ಡಿನೇಟರ್ ಪ್ರಶಸ್ತಿಗಳನ್ನು ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರಶಸ್ತಿ ಪಡೆದ ಸಿಬ್ಬಂದಿಯ ಕಾರ್ಯಕ್ಷಮತೆ, ನಿಷ್ಠೆ ಹಾಗೂ ಶೈಕ್ಷಣಿಕ ಸಾಧನೆಗಳನ್ನು ಪ್ರಶಂಸಿಸಲಾಯಿತು.

ಗಮನ ಸೆಳೆದ ಹಿರಣ್ಯಕಶ್ಯಪು ಪ್ರಸಂಗದ ನರಸಿಂಹ ನೃತ್ಯ 
ಗಮನ ಸೆಳೆದ ವಿದ್ಯಾರ್ಥಿನಿಯರ ನೃತ್ಯ ಪ್ರದರ್ಶನ (ಈ ಚಿತ್ರವನ್ನು 8 ಕಾಲಂಗೆ ಬಳಸಬಹುದು)
ರಾಜೇಶ್‌ ಕೃಷ್ಣನ್‌ ಗಾಯನ
ಕನ್ನಡ ರ‍್ಯಾಪರ್‌ ಎಂ.ಸಿ.ಬಿಜ್ಜು ಅವರಿಗೆ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್‌ ಅಭಿನಂದಿಸಿದರು
ವಿದ್ಯಾರ್ಥಿಗಳ ಅಪ್ಪು ನೃತ್ಯ
ಕೈಲಾಸ ಪರ್ವತವನ್ನೇ ಧರೆಗಿಳಿಸಿದ ವಿದ್ಯಾರ್ಥಿಗಳು
ಗಮನ ಸೆಳೆದ ವಿದ್ಯಾರ್ಥಿನಿಯರ ನೃತ್ಯ
ಡೆಸ್ಟಿನಿ ಉದ್ಘಾಟನೆಗೊಳ್ಳುತ್ತಿದ್ದಂತೆ ನಡೆದ ಸಿಡಿಮದ್ದುಗಳ ಪ್ರದರ್ಶನ
ಹಾಸ್ಯ ಕಾರ್ಯಕ್ರಮ
ದಿವ್ಯಾ ರಾಮಚಂದ್ರ ಅವರ ಗಾಯನ
ಇಶಾನಿ ಗಾಯನ
ನವದುರ್ಗೆಯರ ನೃತ್ಯ
ಡೆಸ್ಟಿನಿಗೆ ಬಂದ ತಿರುಪತಿ ತಿಮ್ಮಪ್ಪ
ವೇದಿಕೆಗೆ ಬಂದ ಡಾ.ಎಂ.ಚಂದ್ರಪ್ಪ ಅವರನ್ನು ಮಕ್ಕಳು ಅಭಿನಂದಿಸಿದರು
ಎಂ.ಚಂದ್ರಪ್ಪ  (ಕಟೌಟ್‌ ಮಾಡುವುದು)
ಎಂ.ಸಿ.ರಘುಚಂದನ್‌  (ಕಟೌಟ್‌)
ರಾಜೇಶ್‌ ಕೃಷ್ಣನ್‌ ಅವರೊಂದಿಗೆ ಎಚ್‌.ಚಂದ್ರಕಲಾ ಎಂ.ಸಿ.ಯಶಸ್ವಿನಿ ಅವರು ಮಾತನಾಡಿದರು
ಎಂ.ಸಿ.ಯಶಸ್ವಿನಿ  (ಕಟೌಟ್‌)
ವಿದ್ಯಾರ್ಥಿಗಳ ನೃತ್ಯ (ಇದು ಮಸ್ಟ್‌ ಬರಬೇಕು)
ಸಮಾರೋಪ ಸಮಾರಂಭದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು
ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ

ಡಾ.ಎಂ.ಚಂದ್ರಪ್ಪ; ಕನಸು ಪರಿಶ್ರಮ ಯಶಸ್ಸು ಮೊದಲ ದಿನದ ಕಾರ್ಯಕ್ರಮದಲ್ಲಿ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸ್ಥಾಪಕ ಡಾ.ಎಂ.ಚಂದ್ರಪ್ಪ ಅವರು ನಡೆದು ಬಂದ ಹಾದಿಯ ಬಗ್ಗೆ ನೃತ್ಯ ಸಂಯೋಜನೆಯ ಮೂಲಕ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು. ಕಡು ಬಡತನದಿಂದ ಪರಿಶ್ರಮದ ಹಾದಿಯಲ್ಲಿ ಮೂಡಿದ ಹೆಜ್ಜೆ ಗುರುತುಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದವು. ಕನಸು ಪರಿಶ್ರಮ ಹಾಗೂ ಯಶಸ್ಸಿನ ಸೂತ್ರವನ್ನು ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡಲಾಯಿತು. ಬಡತನದ ನಡುವೆ ಒಬ್ಬ ಸಹೋದರ ಮೂವರು ಸಹೋದರಿಯರ ನಡುವೆ ಜನಿಸಿದ ಚಂದ್ರಪ್ಪ ಅವರು ಪರಿಶ್ರಮದ ಹಾದಿಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಬಂದ ಪರಿಯನ್ನು ವರ್ಣಿಸಲಾಯಿತು. ಬಜಾರ್‌ ನ್ಯಾಯಬೆಲೆ ಅಂಡಿಯಲ್ಲಿ ಕೆಲಸ ಲಾಭ ನಷ್ಟಗಳ ನಡುವೆ ಹೊಸ ಬದುಕು ಕಂಡುಕೊಂಡ ಪರಿಯನ್ನು ನೃತ್ಯದ ಮೂಲಕ ಅನಾವರಣಗೊಳಿಸಲಾಯಿತು. ಅಧ್ಯಾತ್ಮದ ಹಾದಿ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪರಿಶ್ರಮದ ಬದುಕು ಬಡವರಿಗೆ ನೀಡುವ ಸಹಾಯಹಸ್ತ 1893ರಿಂದ ವಿವಿಧ ವಿದ್ಯಾಸಂಸ್ಥೆಗಳ ಸ್ಥಾಪನೆ ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮುಂತಾದ ವಿಚಾರ. 5 ಬಾರಿ ಶಾಸಕರಾಗಿ ಮಾಡಿದ ಸಾಧನೆ ಜನರ ಪ್ರೀತಿ ಎಲ್ಲವನ್ನೂ ವರ್ಣನೆ ಮಾಡಲಾಯಿತು. ಸಾಕ್ಷ್ಯಚಿತ್ರವನ್ನು ಕಣ್ಣಾರೆ ಕಂಡ ಚಂದ್ರಪ್ಪ ಅವರು ಅತ್ಯಂತ ಭಾವುಕರಾದರು. ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು.

ಡ್ರಗ್ಸ್‌ ಮುಕ್ತ ಶಾಲಾ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕರು ಶಾಸಕರಾದ ಡಾ.ಎಂ.ಚಂದ್ರಪ್ಪ ಅವರು ‘ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಮೊರೆ ಹೋಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಬಹಳ ಸಣ್ಣ ವಯಸ್ಸಿನಲ್ಲೇ ಡ್ರಗ್ಸ್‌ ದಾಸರಾಗಿ ಮಕ್ಕಳು ಹಾಳಾಗುತ್ತಿದ್ದಾರೆ. ಆದರೆ ನಮ್ಮ ಶಾಲಾ ಕಾಲೇಜುಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ. ನಮ್ಮ ಆಡಳಿತ ಮಂಡಳಿ ಸಿಬ್ಬಂದಿ ಮಾದಕ ವಸ್ತುಗಳ ವಿರುದ್ಧ ಹೋರಾಟವನ್ನೇ ಮಾಡುತ್ತಿದ್ದಾರೆ. ನಮ್ಮ ಮಕ್ಕಳು ವಿದ್ಯಾರ್ಥಿಗಳು ಇಂತಹ ಅಪಾಯಕಾರಿ ವಸ್ತುಗಳಿಂದ ದೂರವಿದ್ದಾರೆ’ ಎಂದು ಹೇಳಿದರು. ‘ಗ್ರಾಮೀಣ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಾವು ಶಿಕ್ಷಣ ಸಂಸ್ಥೆ ಕಟ್ಟಿದ್ದೇವೆ. ಪೋಷಕರಿಂದ ಹಣ ಪಡೆದು ಶಾಲೆ ನಡೆಸುವ ಸಂಸ್ಕೃತಿ ನಮ್ಮದಲ್ಲ. ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ನಾವು ಶಿಕ್ಷಣ ಸಂಸ್ಥೆ ಕಟ್ಟಿದ್ದೇವೆ. 43 ವರ್ಷಗಳಿಂದ ನಮ್ಮ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಅದು ನಮ್ಮಲ್ಲಿ ಸಾರ್ಥಕತೆಯ ಭಾವ ಮೂಡಿಸಿದೆ’ ಎಂದು ಹೇಳಿದರು. ‘ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ನಮ್ಮ ಉದ್ದೇಶವಾಗಿದೆ. ನಾನು 32 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಮನೆ ಬಾಗಿಲಿಗೆ ಉಚಿತವಾಗಿ ಬಸ್‌ ಕಳುಹಿಸುವ ಮೂಲಕ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಡತನದ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.

ಸಾಧನೆಯ ಹಾದಿಯಲ್ಲಿ ನಮ್ಮ ನಡೆ : ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಂ.ಸಿ.ರಘುಚಂದನ್‌ ಅವರು ಮಾತನಾಡಿ ‘43 ವರ್ಷಗಳ ನಮ್ಮ ಹಾದಿ ಸುಲಭದ್ದಾಗಿರಲಿಲ್ಲ. ಒಂದೊಂದೇ ಇಟ್ಟಿಗೆಗಳನ್ನು ಇಟ್ಟು ಸಂಸ್ಥೆ ಕಟ್ಟಿದ ಕಾರಣ ಇಂದು ಶಾಲಾ ಕಾಲೇಜುಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಸಂಸ್ಥೆಯ ಎಲ್ಲಾ ಶ್ರೇಯಸ್ಸನ್ನು ನಮ್ಮ ಪೋಷಕರು ಹಾಗೂ ಶಿಕ್ಷಕರಿಗೆ ಸಲ್ಲಿಸುತ್ತೇನೆ. ಎಲ್‌ಕೆಜಿಯಿಂದ ಆಯುರ್ವೇದ ವೈದ್ಯಕೀಯ ಶಿಕ್ಷಣದವರೆಗೂ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮಲ್ಲಿ ಕಲಿಯುತ್ತಿದ್ದಾರೆ’ ಎಂದರು. ‘ಪ್ರತಿ ವರ್ಷ ಬಹಳ ದೊಡ್ಡ ಮಟ್ಟದಲ್ಲಿ ನಾವು ಡೆಸ್ಟಿನಿ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡುತ್ತೇವೆ. ಮಕ್ಕಳು ಸಂಭ್ರಮಿಸಬೇಕು. ಹೊಸ ಸ್ಫೂರ್ತಿ ಭರವಸೆ ಪಡೆಯಬೇಕು ಎಂಬುದೇ ಇದರ ಉದ್ದೇಶವಾಗಿದೆ. ಇಂದು ನಮ್ಮ ಮಕ್ಕಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ್‍ಯಾಂಕ್‌ ಪಡೆದಿದ್ದಾರೆ. ಹಲವರು ಚಿನ್ನದ ಪದಕ ಜಯಿಸಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೂ ಬೆಳೆದಿದ್ದಾರೆ’ ಎಂದು ತಿಳಿಸಿದರು.  ‘ಡೆಸ್ಟಿನಿ’ ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ ಅದು ಚಿತ್ರದುರ್ಗದ ಪ್ರತಿಭೆ ಏಕತೆಯ ಸಂಕೇತ. ನಮ್ಮ ಊರಿನ ಅತಿದೊಡ್ಡ ಸಾಂಸ್ಕೃತಿಕ ಉತ್ಸವವಾಗಿ ಹೊರ ಹೊಮ್ಮಿದೆ. ಈ ಅದ್ಭುತ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಸ್ಥಿರತೆ ಕೃತಜ್ಞತೆ ಭವಿಷ್ಯತೆ : ದೇವರಾಜ ಅರಸು ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಂ.ಸಿ.ಯಶಸ್ವಿನಿ ಅವರು ಮಾತನಾಡಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಮೂರು ಸೂತ್ರಗಳ ಬಗ್ಗೆ ಹೇಳಿದರು. ‘ಯುವಜನರು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸ್ಥಿರತೆ ಕಾಪಾಡಿಕೊಳ್ಳಬೇಕು. ಕೃತಜ್ಞತಾ ಮನೋಭಾವ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಏನೇ ಕೆಲಸ ಇದ್ದರೂ ಅದನ್ನು ಅಂದೇ ಮಾಡಿ ಮುಗಿಸಬೇಕು. ಮುಂದಕ್ಕೆ ಹಾಕುವ ಮನೋಭಾವ ಕೈಬಿಡಬೇಕು. ಭವಿಷ್ಯತೆಯ ಬಗ್ಗೆ ಕನಸುಗಳನ್ನು ಹೊಂದಬೇಕು’ ಎಂದರು. ‘ನಮ್ಮ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ಮೌಲ್ಯ ಬೆಳೆಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕೃತಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ. ಕೇವಲ ಪಠ್ಯಕ್ರಮ ಮಾತ್ರವಲ್ಲದೇ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕವಾಗಿ ಮೌಲಿಕವಾಗಿ ಮುನ್ನಡೆಯುವಂತೆ ನಾವು ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕಾಗಿದೆ’ ಎಂದು ತಿಳಿಸಿದರು.