ಚಿತ್ರದುರ್ಗ: ಆರ್.ಜಿ. ಹಳ್ಳಿಯ ಸಿಎನ್‌ಜಿ (ಸಂಕುಚಿತ ನೈಸರ್ಗಿಕ ಅನಿಲ) ವಿತರಣಾ ಕೇಂದ್ರದಲ್ಲಿ ಟ್ಯಾಂಕರ್ ಬುಲೆಟ್ ಸ್ಫೋಟಗೊಂಡ ನಂತರ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಸ್ಥಳೀಯ ಬಂಕ್‌ಗಳಲ್ಲಿ ಸಿಎನ್‌ಜಿ ಸಿಗದ ಕಾರಣ ಆಟೊ ಚಾಲಕರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ.
ಏ. 9ರಂದು ವಿತರಣಾ ಕೇಂದ್ರದಲ್ಲಿ ಟ್ಯಾಂಕರ್ ಬುಲೆಟ್‌ಗೆ (ಉದ್ದದ ಸಿಲಿಂಡರ್) ಸಿಎನ್‌ಜಿ ತುಂಬಿಸುವಾಗ ಸ್ಫೋಟ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿರುವ ಕಾರಣ ಸಿಎನ್‌ಜಿ ವಿತರಣೆ ಸ್ಥಗಿತಗೊಂಡಿದೆ. ವಿತರಣಾ ಕೇಂದ್ರದಲ್ಲೇ ‘ಮಹಾನಗರ ಗ್ಯಾಸ್’ ಸಿಎನ್‌ಜಿ ಬಂಕ್ ಕೂಡ ಇದ್ದು ಅಲ್ಲಿಯೂ ವಹಿವಾಟು ನಡೆಯುತ್ತಿಲ್ಲ.
ಎರಡೂ ಜಿಲ್ಲೆಗಳಲ್ಲಿರುವ 21 ಸಿಎನ್‌ಜಿ ಬಂಕ್‌ಗಳಲ್ಲಿ ಅನಿಲ ಕೊರತೆಯಾಗಿದ್ದು, ಆಟೊಗಳ ಓಡಾಟಕ್ಕೆ ತೊಂದರೆಯಾಗಿದೆ. ಏ. 10 ಮತ್ತು 11ರಂದು ಎರಡೂ ಜಿಲ್ಲೆಗಳ 10,000ಕ್ಕೂ ಹೆಚ್ಚು ಸಿಎನ್‌ಜಿ ಆಟೊಗಳು ಬಹುತೇಕ ಸ್ಥಗಿತಗೊಂಡಿದ್ದವು. ಏ. 12ರ ನಂತರ ಬೆರಳೆಣಿಕೆಯಷ್ಟು ಬಂಕ್ ಮಾಲೀಕರು ಹೊರ ಜಿಲ್ಲೆಗಳಿಂದ ಸಿಎನ್‌ಜಿ ತರಿಸುತ್ತಿದ್ದು, ಅನಿಲ ತುಂಬಿಸಿಕೊಳ್ಳಲು ಆಟೊ ಚಾಲಕರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಾರ್‌ಗಳಿಗೂ ಸಿಎನ್‌ಜಿ ಕೊರತೆಯಾಗಿದ್ದು, ಮಾಲೀಕರು ಕಾರುಗಳನ್ನು ಮನೆಯಲ್ಲಿಯೇ ನಿಲ್ಲಿಸಿದ್ದಾರೆ.
ಚಿತ್ರದುರ್ಗ ನಗರವೊಂದರಲ್ಲೇ 3,000ಕ್ಕೂ ಹೆಚ್ಚು ಸಿಎನ್‌ಜಿ ಆಟೊಗಳಿದ್ದು, ಅನಿಲ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬ್ಯಾಂಕ್ ಕಾಲೊನಿ ಸಮೀಪದ ಎಸ್.ಆರ್. ಬಂಕ್‌ನಲ್ಲಿ ಮಾತ್ರ ಸಿಎನ್‌ಜಿ ದೊರೆಯುತ್ತಿದ್ದು, ಆಟೊ ಚಾಲಕರು ನಸುಕಿನ 4 ಗಂಟೆಯಿಂದಲೇ ಆಟೊಗಳನ್ನು ಸಾಲುಗಟ್ಟಿ ನಿಲ್ಲಿಸುತ್ತಿದ್ದಾರೆ. ಸಾವಿರಾರು ಆಟೊಗಳು ಬಂಕ್‌ನಿಂದ 1 ಕಿ.ಮೀ. ದೂರದವರೆಗೂ ಸಾಲುಗಟ್ಟಿ ನಿಂತಿವೆ.
‘ಆರ್.ಜಿ.ಹಳ್ಳಿಯ ಬಂಕ್ ಸ್ಥಗಿತಗೊಂಡ ನಂತರ 2 ದಿನ ಆಟೊ ಓಡಿಸಲು ಸಾಧ್ಯವಾಗಲಿಲ್ಲ. ಈಗ ಬಂಕ್ ಮಾಲೀಕರು ಹೊರಗಿನಿಂದ ಸಿಎನ್‌ಜಿ ತರಿಸಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಸಾಲಿನಲ್ಲಿ ನಿಂತರೆ 11 ಗಂಟೆಗೆ ಅನಿಲ ಸಿಕ್ಕಿದೆ. ಹೀಗಾದರೆ ನಾವು ಆಟೊ ಓಡಿಸಿ ಜೀವನ ಮಾಡುವುದು ಹೇಗೆ? ಬಡ ಆಟೊ ಚಾಲಕರ ಕಷ್ಟ ಕೇಳುವವರು ಯಾರೂ ಇಲ್ಲವಾಗಿದ್ದಾರೆ’ ಎಂದು ಆಟೊ ಚಾಲಕ ಮಂಜಣ್ಣ ಬೇಸರ ವ್ಯಕ್ತಪಡಿಸಿದರು.
ಎರಡೂ ಜಿಲ್ಲೆಗಳಲ್ಲಿ ಸಿಎನ್‌ಜಿ ವಿತರಣೆ ಸ್ಥಗಿತಗೊಂಡ ನಂತರ ಬಂಕ್ ಮಾಲೀಕರು ಹಾವೇರಿ ಹಾಗೂ ಹುಬ್ಬಳ್ಳಿಯಿಂದ ಅನಿಲ ತರಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಗೆ ಹಾವೇರಿ ಹಾಗೂ ಹುಬ್ಬಳ್ಳಿ ವಿತರಣಾ ಕೇಂದ್ರದಿಂದ ಸಿಎನ್‌ಜಿ ಬರುತ್ತಿದೆ. ಚಿತ್ರದುರ್ಗ ಜಿಲ್ಲೆಗೆ ರಾಣೆಬೆನ್ನೂರು ಬಳಿ ಇರುವ ವಿತರಣಾ ಕೇಂದ್ರದಿಂದ ಅನಿಲ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
‘ಪೊಲೀಸರು ಆದಷ್ಟು ಬೇಗ ವಿಚಾರಣಾ ಪ್ರಕ್ರಿಯೆ ಮುಗಿಸಿ ಸಿಎನ್‌ಜಿ ವಿತರಣೆಗೆ ಕ್ರಮ ವಹಿಸಬೇಕು. ಸಿಎನ್‌ಜಿಯನ್ನೇ ನಂಬಿ ಸಾವಿರಾರು ಚಾಲಕರು ಜೀವನ ನಡೆಸುತ್ತಿದ್ದು, ಆದಷ್ಟು ಬೇಗ ಅನಿಲ ಸಿಗುವಂತಾಗಬೇಕು’ ಎಂದು ಆಟೊ ಚಾಲಕರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.