ಮೊಳಕಾಲ್ಮುರು (ಚಿತ್ರದುರ್ಗ): ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಡಿ.ಜೆ ಇಲ್ಲವೇ ಧ್ವನಿವರ್ಧಕ ಬಳಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಯುವಕರು ಭಾನುವಾರ ಸುಮಾರು 2 ಗಂಟೆ ರಸ್ತೆ ತಡೆ ನಡೆಸಿದರು.
ಇಲ್ಲಿನ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಮೂರ್ತಿ ವಿಸರ್ಜನೆ ಮೆರವಣಿಗೆಯು ಪೊಲೀಸರು ಹಾಗೂ ಧರಣಿ ನಿರತರ ನಡುವಣ ವಾಗ್ವಾದಕ್ಕೆ ಕಾರಣವಾಗಿ, ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಧ್ಯಾಹ್ನ 1 ಗಂಟೆಗೆ ಶಾಸಕ ಎನ್.ವೈ.ಗೋಪಾಲಕೃಷ್ಣ, ಶೋಭಾಯಾತ್ರೆಗೆ ಚಾಲನೆ ನೀಡಿ ತೆರಳಿದರು. ನಂತರ ಬಿ. ಶ್ರೀರಾಮುಲು ಸ್ಥಳಕ್ಕೆ ಬಂದರು. ಅವರ ನೇತೃತ್ವದಲ್ಲಿ ಯುವಕರು ಡಿ.ಜೆ ಅಥವಾ ಸೌಂಡ್ ಬಾಕ್ಸ್ ಬಳಸಲು ಅವಕಾಶಕ್ಕೆ ಪೊಲೀಸರಿಗೆ ಮನವಿ ಮಾಡಿದರು.
ಪೊಲೀಸರು ಅವಕಾಶ ನಿರಾಕರಿಸಿದಾಗ, ಕೆರಳಿದ ಜನರು ರಸ್ತೆಯಲ್ಲೇ ಧರಣಿ ಕುಳಿತರು. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು.
ಕೆಲ ಮುಖಂಡರು, ‘ನೀವೇ ಮೂರ್ತಿ ವಿಸರ್ಜನೆ ಮಾಡಿಕೊಳ್ಳಿ’ ಎಂದು ಪೊಲೀಸರಿಗೆ ಹೇಳಿ ಮೆರವಣಿಗೆ ನಿಲ್ಲಿಸಿದ್ದು, ಸ್ಥಳದಿಂದ ನಿರ್ಗಮಿಸಿದರು. ಪರಿಸ್ಥಿತಿ ಕೈಮೀರಬಹುದು ಎಂದು ಪೊಲೀಸರು ಎರಡು ಸೌಂಡ್ ಬಾಕ್ಸ್‌ಗಳ ಬಳಕೆಗೆ ಅನುಮತಿ ನೀಡಿದರು. ಇದರ ಬೆನ್ನಲ್ಲೇ ಶ್ರೀರಾಮುಲು ಕೂಡ ಅಲ್ಲಿಂದ ಬೇರೆಡೆಗೆ ಪ್ರಯಾಣ ಬೆಳೆಸಿದರು.
ಸೌಂಡ್ ಬಾಕ್ಸ್‌ಗಳು ಕೈಕೊಟ್ಟಿದ್ದರಿಂದ ಬೇಸತ್ತ ಜನರು, ಡೊಳ್ಳು ಕುಣಿತ ತಂಡ ಕರೆಸಿ ಮೆರವಣಿಗೆ ನಡೆಸಿದರು. ರಾತ್ರಿ ಮೂರ್ತಿಯನ್ನು ಶಾಂತಿಯುತವಾಗಿ ವಿಸರ್ಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.