ಚಿತ್ರದುರ್ಗ: ‘ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈಗಾಗಲೇ ಕೈಗೊಂಡಿರುವ ರಾಜತಾಂತ್ರಿಕ ನಿರ್ಣಯಗಳಿಗೆ ವಿಶ್ವದ ಹಲವು ದೇಶಗಳು ಸಹಮತ ವ್ಯಕ್ತಪಡಿಸಿವೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ದೇಶದ 140 ಕೋಟಿ ಜನರ ಆಶಯದಂತೆ ಪ್ರಧಾನಿ ದಿಟ್ಟ ಕ್ರಮ ಕೈಗೊಳ್ಳುತ್ತಿದ್ದಾರೆ. ಭಯೋತ್ಪಾದನೆಯನ್ನು ಶಾಶ್ವತವಾಗಿ ಕೊನೆಗಾಣಿಸಲು ಹಲವು ರಾಷ್ಟ್ರಗಳು ಪ್ರಧಾನಿ ಜೊತೆ ಕೈಜೋಡಿಸಿವೆ. ಕೇಂದ್ರ ಸರ್ಕಾರದ ಪರವಾಗಿ ವಿಶ್ವದ ಹಲವು ದೇಶಗಳು ಬೆಂಬಲ ಘೋಷಣೆ ಮಾಡಿವೆ. ಭಯೋತ್ಪಾದಕರಿಗೆ ಆಶ್ರಯ ನೀಡುವ ಪಾಪಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ದೇಶದ ವಿವಿಧೆಡೆ ಪಾಕಿಸ್ತಾನದ ಪ್ರಜೆಗಳು ನೆಲೆಸಿದ್ದಾರೆ. ಎಲ್ಲರನ್ನೂ ಹೊರ ಹಾಕುವಂತೆ ಈಗಾಗಲೇ ಪ್ರಧಾನಮಂತ್ರಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪಾಕಿಸ್ತಾನದ ಪ್ರಜೆಗಳಿದ್ದರೆ ಅವರನ್ನು ಗುರುತಿಸಿ ಹೊರಹಾಕುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆ ನಿಲ್ಲುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.
ಕಾಂಗ್ರೆಸ್‌ನಿಂದ ದಲಿತರ ಉದ್ಧಾರ ಅಸಾಧ್ಯ: ‘ಇಡೀ ದೇಶದಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಸರ್ಕಾರ ದಲಿತರ ಉದ್ಧಾರ ಮಾಡಲು ಸಾಧ್ಯವಾಗಿಲ್ಲ. ಸಾಮಾಜಿಕ ಸಮಸ್ಯೆಗಳನ್ನು ಅಳಿಸಿ ಹಾಕಲು ಕಾಂಗ್ರೆಸ್ ವಿಫಲವಾಗಿದೆ. ಮೋದಿ ಸರ್ಕಾರ ಕಳೆದ 10 ವರ್ಷಗಳಿಂದ ದಿಟ್ಟ ಕ್ರಮ ಕೈಗೊಳ್ಳುತ್ತಿದ್ದು ದಲಿತರ, ಹಿಂದುಳಿದ ವರ್ಗಗಳ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ’ ಎಂದರು.
‘ಜನಗಣತಿಯ ಜೊತೆಗೆ ಸಾಮಾಜಿಕ ಸಮೀಕ್ಷೆಯನ್ನೂ ನಡೆಸುವ ಉತ್ತಮ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಪ್ರಧಾನಿ ಕ್ರಮವನ್ನು ನಾವು ತುಂಬುಮನಸ್ಸಿನಿಂದ ಸ್ವಾಗತ ಕೋರುತ್ತೇವೆ. ಆದರೆ ರಾಹುಲ್‌ಗಾಂಧಿ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದು ಹಾಸ್ಯಾಸ್ಪದ. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಬೇಕಾದರೆ, ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಬೇಕಾದರೆ ಸಾಮಾಜಿಕ ಸಮೀಕ್ಷೆ ಅವಶ್ಯಕವಾಗಿದೆ’ ಎಂದರು.
‘ಕಾಂಗ್ರೆಸ್ ಮುಖಂಡರು ವೋಟ್‌ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಕಳೆದ 75 ವರ್ಷಗಳಿಂದ ದಲಿತರನ್ನು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಸಮೀಕ್ಷೆ ಅವೈಜ್ಞಾನಿಕವಾದುದು. ಆದರೆ ಕೇಂದ್ರ ಸರ್ಕಾರ ಉದ್ದೇಶಿಸಿರುವ ಸಮೀಕ್ಷಾ ಕಾರ್ಯವು ಹಿಂದುಳಿದವರಿಗೆ, ದಲಿತರಿಗೆ ನ್ಯಾಯ ಒದಗಿಸುವ ಕ್ರಮವಾಗಿದೆ’ ಎಂದರು.
‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಹಿಂದೂ ಯುವಕರು ಹತ್ಯೆಯಾಗುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ 3,500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೊ ಫೈನಾನ್ಸ್ ಹಾವಳಿಯಿಂದ ಸಾಮಾನ್ಯ ಜನರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ ‘ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೇರವಾಗಿ, ಅವಿರೋಧವಾಗಿ ಸಂಸತ್‌ಗೆ ಆಯ್ಕೆ ಮಾಡಬೇಕು ಎಂಬ ಒತ್ತಾಯ ಆಗ ವ್ಯಕ್ತವಾಗಿತ್ತು. ಆದರೆ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರು ಬೇಕಂತಲೇ ಅವರ ವಿರುದ್ಧ ಅಭ್ಯರ್ಥಿ ಹಾಕಿ, ಅವರ ವಿರುದ್ಧ ಹಲವು ಸುತ್ತು ಪ್ರಚಾರ ನಡೆಸಿ ಸೋಲಿಸಿದರು. ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್‌ನಿಂದ ದಲಿತರ ಉದ್ಧಾರ ಸಾಧ್ಯವೇ’ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ಸಿದ್ದಾಪುರ, ರಾಮದಾಸ್, ಡಾ.ಗುಂಡಾರ್ಪಿ ಸಿದ್ದಾರ್ಥ, ಜೈಪಾಲಯ್ಯ, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ, ರಾಮರೆಡ್ಡಿ, ಶೈಲೇಶ್, ಶ್ರೀರಾಮ್ ರೆಡ್ಡಿ, ಜಿಂಕಲ್ ಬಸವರಾಜ್, ಯಶವಂತ್, ಕಿರಣ್ ಇದ್ದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ರಾಜ್ಯ ಸರ್ಕಾರದ ವೈಫಲ್ಯಗಳು ಬೆಲೆ ಏರಿಕೆ ನೀತಿ ಕಾನೂನು– ಸುವ್ಯವಸ್ಥೆ ಹದಗೆಟ್ಟಿರುವುದನ್ನು ವಿರೋಧಿಸಿ ಮೇ 8ರಂದು ನಗರದಲ್ಲಿ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮುಖಂಡರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಯ ಮೇಲೆ ಈ ಕಾರ್ಯಕ್ರಮ ನಡೆಯಲಿದೆ. ಅಂದು ನಗರದಾದ್ಯಂತ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು’ ಎಂದು ಹೇಳಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿರುವ ಅವೈಜ್ಞಾನಿಕ ಜಾತಿ ಗಣತಿಗೆ ನಮ್ಮ ವಿರೋಧವಿದೆ. ಗಣತಿಯ ಮೂಲ ಪ್ರತಿಯೇ ನಾಪತ್ತೆಯಾಗಿದ್ದು ಅದನ್ನು ಯಾರೂ ಒಪ್ಪುವುದಿಲ್ಲ. ಆದರೆ ಪ್ರಧಾನಮಂತ್ರಿ ನಡೆಸಲು ಉದ್ದೇಶಿಸಿರುವ ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ನಮ್ಮ ಸ್ವಾಗತವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.