
ಹಿರಿಯೂರು: ಗೋಡಂಬಿಯಿಂದ ಸಾಕಷ್ಟು ತೆರಿಗೆ ಪಡೆಯುವ ಕೇಂದ್ರ–ರಾಜ್ಯ ಸರ್ಕಾರಗಳು ಬೆಳೆಗಾರರಿಗೆ ಪ್ರೋತ್ಸಾಹ ನೀಡುವಲ್ಲಿ ನಿರಾಸಕ್ತಿ ತೋರಿಸುತ್ತಿವೆ. ಗೋಡಂಬಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರಗಳು ಕಿವಿಯಾಗಬೇಕು ಎಂದು ಪ್ರಗತಿಪರ ರೈತ ಬಿ.ಎಸ್. ರಘುನಾಥ್ ಒತ್ತಾಯಿಸಿದರು.
ತಾಲ್ಲೂಕಿನ ಬಬ್ಬೂರು ಫಾರಂ ಸಮೀಪದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆಗಳ ವಿ.ವಿ, ಕೇರಳದ ಕೊಚ್ಚಿಯ ಕೇಂದ್ರೀಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೋಡಂಬಿ ಬೆಳೆಯ ಪ್ರಾದೇಶಿಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
‘ಸದಾ ಬೇಡಿಕೆ ಇರುವ, ರೈತರಿಗೂ ನಷ್ಟ ಉಂಟು ಮಾಡದ ವಾಣಿಜ್ಯ ಬೆಳೆ ಗೋಡಂಬಿ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರಿಗೆ ಯಾವುದೇ ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸದ ಕಾರಣ, ಹೊಸ ರೈತರು ಗೋಡಂಬಿ ಬೆಳೆಯಲು ಮುಂದೆ ಬರುತ್ತಿಲ್ಲ. ನಮ್ಮಲ್ಲಿ ಕೂಲಿಕಾರರ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಹೀಗಾಗಿ ಬೇಡಿಕೆಯ ಶೇ 30ರಷ್ಟು ಮಾತ್ರ ಬೆಳೆಯಲಾಗುತ್ತಿದ್ದು, ಶೇ 70 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
ಗೋಡಂಬಿ ಬೆಳೆಗೆ ಜಿಲ್ಲೆಯಲ್ಲಿ ಉತ್ತಮ ಹವಾಗುಣವಿದೆ. ಹೆಚ್ಚು ಭೂಮಿ ಹೊಂದಿರುವ ರೈತರು ಕಾಲುಭಾಗದಷ್ಟು ಪ್ರದೇಶದಲ್ಲಿ ಗೋಡಂಬಿ ಬೆಳೆದರೂ ಉತ್ತಮ ಲಾಭ ಪಡೆಯಬಹುದು. ಗೋಡಂಬಿ ಅಭಿವೃದ್ಧಿ ನಿಗಮದವರು ಸೂಕ್ತ ತಾಂತ್ರಿಕ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾಲಯದ ಮುಖ್ಯಸ್ಥ ಸುರೇಶ್ ಏಕಬೋಟೆ ಅಧ್ಯಕ್ಷತೆ ವಹಿಸಿದ್ದರು. ಸಹಪ್ರಾಧ್ಯಾಪಕ ಪ್ರಕಾಶ್ ಕೆರೂರೆ, ಸಂಶೋಧನಾ ನಿರ್ದೇಶಕ ಶರಣಪ್ಪ ಜಂಗಂಡಿ, ವಿಜ್ಞಾನಿಗಳಾದ ಪರಶುರಾಮಚಂದ್ರ ವಂಶಿ, ವೀರಭದ್ರ ರೆಡ್ಡಿ, ಬೆಳೆಗಾರರಾದ ಮೀರಾಸಾಬಿ, ದಯಾನಂದ, ರೈತ ಮುಖಂಡರಾದ ಲಿಂಗಪ್ಪ ಹಾಜರಿದ್ದರು.
ಗೋಡಂಬಿ ಬೆಳೆಯ ತಾಂತ್ರಿಕ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು.