
ಹಿರಿಯೂರು: ನಗರದಲ್ಲಿ ವೇದಾವತಿ ನದಿಯ ಮೇಲ್ಭಾಗದ ಬಡಾವಣೆಯಲ್ಲಿ ನಗರಸಭೆಗೆ ಸೇರಿದ ಮಾಂಸದ ಮಾರುಕಟ್ಟೆ ಇದ್ದರೂ ಕೋಳಿ, ಮೀನು, ಮಾಂಸ ಮಾರಾಟಗಾರರು ರಸ್ತೆ ಬದಿಯಲ್ಲಿ ವ್ಯಾಪಾರ–ವಹಿವಾಟು ನಡೆಸುತ್ತಿರುವ ಕಾರಣ ಸಾರ್ವಜನಿಕರು ಯಾತನೆ ಅನುಭವಿಸುತ್ತಿದ್ದಾರೆ.
ಮಾಂಸ ಮಾರುಕಟ್ಟೆಯಲ್ಲಿ 16 ಮಳಿಗೆಗಳಿದ್ದು, ಈ ಪೈಕಿ ನಾಲ್ಕು ಮಳಿಗೆಯವರು ರಸ್ತೆಕಡೆಗೆ ಬಾಗಿಲು ತೆರೆದು ವಹಿವಾಟು ನಡೆಸುತ್ತಿದ್ದಾರೆ. ಉಳಿದವರು ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ ಇಲ್ಲ ಎಂಬ ಕಾರಣ ನೀಡಿ ಬಾಡಿಗೆ ಪಾವತಿಸುವುದನ್ನೇ ನಿಲ್ಲಿಸಿದ್ದಾರೆ ಎಂಬ ಆರೋಪವಿದೆ.
ತ್ಯಾಜ್ಯ ನದಿಗೆ: ಮಾಂಸ ಮಾರುಕಟ್ಟೆಯ ತ್ಯಾಜ್ಯವನ್ನು ವೇದಾವತಿ ನದಿಗೆ ಎಸೆಯಲಾಗುತ್ತಿದೆ. ಇದರಿಂದ ನದಿ ದಡದಲ್ಲಿ ನೆಲೆಸಿರುವ ಕುಟುಂಬಗಳು ನರಕ ಯಾತನೆ ಅನುಭವಿಸುತ್ತಿವೆ. ಅಂಗಡಿಯವರು ರಸ್ತೆ ಬದಿಯಲ್ಲೇ ಮಾಂಸವನ್ನು ನೇತು ಹಾಕಿರುತ್ತಾರೆ ಎಂದು ಈ ಮಾರ್ಗದಲ್ಲಿ ಸಂಚರಿಸುವ ಬಸವನಕಟ್ಟೆ ಬಡಾವಣೆ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ರಸ್ತೆಬದಿ ಬದಲು ಮಾರುಕಟ್ಟೆ ಒಳಗೆ ವ್ಯಾಪಾರ ನಡೆಯಬೇಕು. ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ವಾಹನಕ್ಕೆ ನೀಡುವಂತಾಗಬೇಕು ಎಂದು ಅಬ್ದುಲ್ ಕರೀಂ ಎಂಬವರು ಒತ್ತಾಯಿಸಿದ್ದಾರೆ.
ಸ್ಪಷ್ಟನೆ: ‘ಡಿಸೆಂಬರ್ ಮೊದಲ ವಾರದಲ್ಲಿ ಮಾಂಸ ವ್ಯಾಪಾರಿಗಳ ಸಭೆ ನಡೆಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದಲ್ಲಿ ದಂಡದ ಜೊತೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಅಂದಿನಿಂದ ಯಾರೂ ತ್ಯಾಜ್ಯವನ್ನು ನದಿಗೆ ಅಥವಾ ರಸ್ತೆಯಲ್ಲಿನ ಚರಂಡಿಗೆ ಬಿಸಾಡುತ್ತಿಲ್ಲ’ ಎಂದು ನಗರಸಭೆ ಪೌರಾಯುಕ್ತ ಎ. ವಾಸೀಂ ತಿಳಿಸಿದ್ದಾರೆ.
ಸ್ಥಳಾಂತರದ ಭರವಸೆ: ‘ಮಾಂಸ ಮಾರುಕಟ್ಟೆಗೆ ಕನಿಷ್ಟ ಸೌಲಭ್ಯಗಳನ್ನು ಕಲ್ಪಿಸಿ ಕೋಳಿ, ಮೀನು, ಮಾಂಸದ ಮಾರಾಟವನ್ನು ಮಾರುಕಟ್ಟೆ ಒಳಗೆ ನಡೆಸುವಂತೆ ವರ್ತಕರಿಗೆ ಸೂಚಿಸಲಾಗುವುದು. ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಇದ್ದಲ್ಲಿ ಸುತ್ತಮುತ್ತಲ ನಿವಾಸಿಗಳಿಗೆ ಮಾತ್ರವಲ್ಲ, ಗ್ರಾಹಕರಿಗೂ ಅಸಹ್ಯ ಉಂಟಾಗುತ್ತದೆ ಎಂಬ ಅರಿವು ತಮಗೆ ಇದೆ’ ಎಂದು ಅವರು ತಿಳಿಸಿದ್ದಾರೆ.
ಮಾಂಸ ಮಾರುಕಟ್ಟೆ ಕಟ್ಟಡ ಶಿಥಿಲವಾಗಿದ್ದು ಮಳಿಗೆಗಳ ಟೆಂಡರ್ ಅವಧಿ ಮುಗಿದ ನಂತರ ಹೊಸಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಹಲವು ವರ್ತಕರು ಕಂತು ರೂಪದಲ್ಲಿ ಬಾಡಿಗೆ ಪಾವತಿಸಿದ್ದಾರೆ-ಎ. ವಾಸೀಂ, ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.