
ಚಿತ್ರದುರ್ಗ: ‘ಒಳಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಆದರೆ ಮೀಸಲಾತಿಯನ್ನು ಶೇ 56ಕ್ಕೆ ಏರಿಸಿರುವುದಕ್ಕೆ ತಡೆಯಾಜ್ಞೆ ನೀಡಿದೆ. ಇದನ್ನು ನೆಪ ಮಾಡಿಕೊಂಡು ಒಳಮೀಸಲಾತಿ ಅನುಷ್ಠಾನವನ್ನು ತಡೆಯಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಸಮರ್ಥನೀಯವಲ್ಲ’ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಕೋಟೆನಾಡು ಬುದ್ಧವಿಹಾರ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಒಳಮೀಸಲು ಮತ್ತು ಸರ್ಕಾರದ ಬದ್ಧತೆ ಕುರಿತ ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೀಸಲಾತಿ ಎಂಬುದು ನ್ಯಾಯದ ಶಿಶು. ಒಬ್ಬರ ಅನ್ನ ಕಿತ್ತು ಇನ್ನೂಬ್ಬರಿಗೆ ಕೊಡುವುದಲ್ಲ’ ಎಂದರು.
‘ಸರ್ಕಾರವೇ ರಚಿಸಿದ ಆಯೋಗದಿಂದ ಸಮೀಕ್ಷೆ ನಡೆಸಿ, ರಾಜ್ಯಪಾಲರಿಂದ ಅಂಕಿತ ಬಿದ್ದ ಮೇಲೂ ನೆಪವೊಡ್ಡಿ 56,342 ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೇ ಭರ್ತಿ ಮಾಡಲು ಮುಂದಾಗಿರುವುದು ನ್ಯಾಯಬಾಹಿರ. ರಾಜಕೀಯ ಹೋರಾಟವನ್ನು ಸಾಮಾಜಿಕ ನ್ಯಾಯಕ್ಕಾಗಿಯೇ ಮೀಸಲಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಇದ್ದಂತೆ ಪರಿಶಿಷ್ಟ ಜಾತಿಯ ಶೇ 15ರಷ್ಟು ಮೀಸಲಾತಿಯಲ್ಲಿಯೇ ಮಾದಿಗ, ಹೊಲೆಯ ಹಾಗೂ ಇತರೆ ಪರಿಶಿಷ್ಠ ಜಾತಿಗಳಿಗೆ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವೇ, ಸಾಮಾಜಿಕ ನ್ಯಾಯ ಎಂಬುದು ಘೋಷಣೆ ರಾಜಕಾರಣವೇ ಹೊರತು ವಾಸ್ತವಕ್ಕೆ ಅಲ್ಲ ಎಂಬುದು ಸಾಬೀತಾಗುತ್ತದೆ. ಭವಿಷ್ಯದಲ್ಲಿ ಇದು ದೊಡ್ಡ ಕಪ್ಪುಚುಕ್ಕೆ ಆಗುತ್ತದೆ’ ಎಂದು ಎಚ್ಚರಿಸಿದರು.
ಬಿಎಸ್‌ಐ ಕಾರ್ಯದರ್ಶಿ ಲಕ್ಷ್ಮೀದೇವಿ, ಉಪನ್ಯಾಸಕ ಈ.ನಾಗೇಂದ್ರಪ್ಪ, ಸಮತ ಸೇವಾ ಸಮಿತಿ ಅಧ್ಯಕ್ಷ ಪಿಲ್ಲಹಳ್ಳಿ ಹರೀಶ್, ಉಷಾ, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.