ADVERTISEMENT

ಚಿತ್ರದುರ್ಗ | ಬಸ್‌ ಮಾರ್ಗ ಬದಲು; ರೈತರು, ವಿದ್ಯಾರ್ಥಿಗಳ ಅಳಲು

ಬಿ.ಡಿ ರಸ್ತೆಯಲ್ಲಿ ಮತ್ತೆ ಬಸ್‌ ಸಂಚಾರ ನಿಷೇಧ, ಅವೈಜ್ಞಾನಿಕ ಕ್ರಮವೆಂದ ಸಾರ್ವಜನಿಕರು

ಎಂ.ಎನ್.ಯೋಗೇಶ್‌
Published 12 ನವೆಂಬರ್ 2025, 5:57 IST
Last Updated 12 ನವೆಂಬರ್ 2025, 5:57 IST
ಕಬ್ಬಿಣದ ಅದಿರು ತುಂಬಿದ ಲಾರಿಗಳು ಬಸವೇಶ್ವರ ಆಸ್ಪತ್ರೆ, ಡಾನ್‌ ಬಾಸ್ಕೊ ಶಾಲೆ ಮುಂದಿನ ಸರ್ವೀಸ್‌ ರಸ್ತೆ ಬಂದ ಕಾರಣ ಆಂಬುಲೆನ್ಸ್‌, ಶಾಲಾವಾಹನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದವು
ಕಬ್ಬಿಣದ ಅದಿರು ತುಂಬಿದ ಲಾರಿಗಳು ಬಸವೇಶ್ವರ ಆಸ್ಪತ್ರೆ, ಡಾನ್‌ ಬಾಸ್ಕೊ ಶಾಲೆ ಮುಂದಿನ ಸರ್ವೀಸ್‌ ರಸ್ತೆ ಬಂದ ಕಾರಣ ಆಂಬುಲೆನ್ಸ್‌, ಶಾಲಾವಾಹನ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದವು   

ಚಿತ್ರದುರ್ಗ: ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಿಂದ ಬಿ.ಡಿ ರಸ್ತೆಯ ಮೂಲಕ ಹೊರಹೋಗುವ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ನಿಷೇಧಿಸಿರುವುದು ವಿದ್ಯಾರ್ಥಿಗಳು, ರೋಗಿಗಳು ಹಾಗೂ ರೈತರನ್ನು ಪರದಾಡುವಂತೆ ಮಾಡಿಡೆ.

ದೀಪಾವಳಿ ನಂತರ ಸಂಚಾರ ಠಾಣೆ ಪೊಲೀಸರು ಹೊಸ ನಿಯಮ ಜಾರಿಗೊಳಿಸಿದ್ದಾರೆ. ನಗರ ಪ್ರವೇಶಿಸುವ ಬಸ್‌ಗಳು ಎಂದಿನಂತೆ ಬಿ.ಡಿ ರಸ್ತೆಯ ಮೂಲಕವೇ ಬರುತ್ತಿವೆ. ಆದರೆ ನಿಲ್ದಾಣದಿಂದ ಬೆಂಗಳೂರು, ಶಿವಮೊಗ್ಗ, ಚಳ್ಳಕೆರೆ ಕಡೆಗೆ ತೆರಳುವ ಬಸ್‌ಗಳ ಮಾರ್ಗ ಬದಲಾವಣೆ ಮಾಡಿರುವುದು ಸಮಸ್ಯೆ ಸೃಷ್ಟಿಸಿದೆ.

ಬೆಂಗಳೂರು ಕಡೆಗೆ ತೆರಳುವ ಬಸ್‌ಗಳು ನಿಲ್ದಾಣದಿಂದ ದಾವಣಗೆರೆ ರೈಲ್ವೆ ಗೇಟ್‌, ಮುರುಘಾಮಠ ಮೂಲಕ ಹಳೇ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಬೇಕಾಗಿದೆ. ಶಿವಮೊಗ್ಗ ಕಡೆ ತೆರಳುವ ಬಸ್‌ಗಳು ಮುರುಘಾಮಠ, ಕಾವಾಡಿಗರ ಹಟ್ಟಿ ಮೂಲಕ ತೆರಳಬೇಕಾಗಿದೆ.

ADVERTISEMENT

ಬಿ.ಡಿ ರಸ್ತೆಯಲ್ಲಿರುವ ಸಾಲುಸಾಲು ಕಾಲೇಜುಗಳಿಗೆ ಗ್ರಾಮೀಣ ಭಾಗದಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಅವರು ಇಲ್ಲಿಯವರೆಗೆ ಕಾಲೇಜು ಮುಂಭಾಗದಲ್ಲೇ ಬಸ್‌ ಹತ್ತುತ್ತಿದ್ದರು. ಈಗ ಬಸ್‌ ನಿಲ್ದಾಣಕ್ಕೆ ಅಥವಾ ಚಳ್ಳಕೆರೆ ಗೇಟ್‌ವರೆಗೆ ತೆರಳಿ ಬಸ್‌ ಹತ್ತುವ ಅನಿವಾರ್ಯತೆ ನಿರ್ಮಾಣವಾಗಿದೆ.

ಬಿ.ಡಿ. ರಸ್ತೆಯಲ್ಲೇ ಜಿಲ್ಲಾ ಆಸ್ಪತ್ರೆ ಇದ್ದು, ಅಲ್ಲಿಗೂ ಗ್ರಾಮೀಣ ಭಾಗದಿಂದ ರೋಗಿಗಳು ಬರುತ್ತಾರೆ. ಆಸ್ಪತ್ರೆ ಮುಂದೆಯೇ ಬಸ್‌ಗಳು ನಿಲ್ಲುತ್ತಿದ್ದ ಕಾರಣ ತೊಂದರೆ ಇರಲಿಲ್ಲ. ಈಗ ಬಸ್‌ ಸಂಚಾರ ಸ್ಥಗಿತಗೊಂಡ ನಂತರ ಬಸ್‌ ನಿಲ್ದಾಣ ಅಥವಾ ಚಳ್ಳಕೆರೆ ಗೇಟ್‌ಗೆ ಆಟೊ ಮೂಲಕ ಬರಬೇಕಾಗಿದೆ. ನಗರದಿಂದ ಹಳ್ಳಿಗಳಿಗೆ ತೆರಳುವ ರೈತರಿಗೂ ಇದರಿಂದ ತೊಂದರೆಯುಂಟಾಗಿದೆ. ಇದೇ ಸಮಯವನ್ನು ದುರುಪಯೋಗ ಮಾಡಿಕೊಂಡಿರುವ ಆಟೋಗಳು ಹೆಚ್ಚುಹಣ ವಸೂಲಿ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

2022ರಲ್ಲೂ ಪೊಲೀಸರು ಇಂಥದ್ದೇ ಕ್ರಮ ಜಾರಿಗೊಳಿಸಿದ್ದರು. ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ಮಾರ್ಗ ಬದಲಾವಣೆ ಆದೇಶವನ್ನು ಹಿಂದಕ್ಕೆ ಪಡೆಯಲಾಗಿತ್ತು. ಈಗ ಅಂಥದ್ದೇ ಕ್ರಮ ಜಾರಿಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಲಕರಲ್ಲಿ ಗೊಂದಲ:

ನಿಲ್ದಾಣದಿಂದ ಹಳೇ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುವ ಬಸ್‌ಗಳು ಬಸವೇಶ್ವರ ಆಸ್ಪತ್ರೆ ಮುಂದಿನ ಕಿರಿದಾದ ತಿರುವಿನಲ್ಲಿ ಸರ್ವೀಸ್‌ ರಸ್ತೆಗೆ ಬರಬೇಕು. ಅಲ್ಲಿಂದ ಚಳ್ಳಕೆರೆ ಗೇಟ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗಬೇಕು. ಆದರೆ ತಿರುವಿನಲ್ಲಿ ರಸ್ತೆಯೇ ಕಾಣದ ಕಾರಣ ಚಾಲಕರು ಗೊಂದಲಕ್ಕೀಡಾಗುತ್ತಿದ್ದಾರೆ.

ವೇಗವಾಗಿ ಬರುವ ಬಸ್‌ಗಳು ತಿರುವು ತೆಗೆದುಕೊಳ್ಳದೇ ಮುಂದೆ ಸಾಗಿಸುತ್ತಿವೆ. ಇದನ್ನು ತಪ್ಪಿಸಲು ಸಾರಿಗೆ ಸಂಸ್ಥೆ ವತಿಯಿಂದ ಬಸವೇಶ್ವರ ಆಸ್ಪತ್ರೆ ಮುಂದೆ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗಿದೆ. ಅವರು ಬಸ್‌ಗಳನ್ನು ತಡೆದು ಎಡಕ್ಕೆ ತಿರುವು ಪಡೆಯುವಂತೆ ಸೂಚನೆ ನೀಡುತ್ತಿದ್ದಾರೆ. ಆದರೂ ಹೊಸ ಚಾಲಕರು ಗೊಂದಲಕ್ಕೀಡಾಗುತ್ತಿದ್ದಾರೆ.

ರೈಲ್ವೆ ಕ್ರಾಸಿಂಗ್‌, ರಸ್ತೆ ದುರಾವಸ್ತೆ:

ಬೆಂಗಳೂರು, ಚಳ್ಳಕೆರೆ ಕಡೆಗೆ ತೆರಳುವ ಬಸ್‌ಗಳು ದಾವಣಗೆರೆ ರಸ್ತೆಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ಸಿಕ್ಕಿಕೊಳ್ಳುತ್ತಿವೆ. ಟ್ರೈನ್‌ ಬಂದಾಗ 20 ನಿಮಿಷ ಕಾಯಬೇಕಾಗಿದೆ. ಜೊತಗೆ ಅರ್ಧ ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವ ಕಾರಣ ಸಮಯ ವ್ಯರ್ಥವಾಗುತ್ತಿದೆ.

ಶಿವಮೊಗ್ಗ ಕಡೆಗೆ ತೆರಳುವ ಬಸ್‌ಗಳು ಕಾವಾಡಿಗರ ಹಟ್ಟಿಯಲ್ಲಿರುವ ಇನ್ನೊಂದು ರೈಲ್ವೆ ಕ್ರಾಸಿಂಗ್‌ನಲ್ಲೂ ಸಿಕ್ಕಿಕೊಳ್ಳುತ್ತಿವೆ. ಅಲ್ಲಿ ರಾಷ್ಟ್ರೀಯ ಹೆದ್ದಾರಿ ತೀರಾ ಹದಗೆಟ್ಟಿದ್ದು ಗುಂಡಿಗಳ ನಡುವೆ ವಾಹನಗಳನ್ನು ಚಲಾಯಿಸುವುದು ಸಾಹಸವಾಗಿದೆ. 2 ಕಿ.ಮೀವರೆಗೂ ರಸ್ತೆ ಹಾಳಾಗಿದ್ದು ದೂಳಿನ ನುಡುವೆ ಬಸ್‌ಗಳು ತೆರಳಬೇಕಾಗಿದೆ.

‘ಕಾವಾಡಿಗರ ಹಟ್ಟಿ ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ನಿಂತರೆ ವಿಪರೀತ ದೂಳು ಕಾಡುತ್ತದೆ. ಕಿಟಕಿ ಹಾಕಿದರೂ ದೂಳು ನಿಯಂತ್ರಣಕ್ಕೆ ಬರುತ್ತಿಲ್ಲ. ಮಾರ್ಗ ಬದಲಾವಣೆಯ ನಂತರ ಶಿವಮೊಗ್ಗಕ್ಕೆ ತೆರಳುವ ಬಸ್‌ಗಳು ಮುಕ್ಕಾಲುಗಂಟೆ ತಡವಾಗಿ ಚಲಿಸುತ್ತಿವೆ. ಪೊಲೀಸರ ಅವೈಜ್ಞಾನಿಕ ನೀತಿಯಿಂದ ಜನರು ಸಮಸ್ಯೆ ಅನುಭವಿಸಬೇಕಾಗಿದೆ’ ಎಂದು ಪ್ರಯಾಣಿಕರೊಬ್ಬರು ದೂರಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಬಿ.ಡಿ.ರಸ್ತೆಯಲ್ಲಿ ಆಟೊ ಓಡಾಟ ಹೆಚ್ಚಾಗಿರುವುದು
ಪ್ರತಿಭಟನೆಯ ಎಚ್ಚರಿಕೆ
‘ಸಂಚಾರ ದಟ್ಟಣೆ ನಿಯಂತ್ರಣ ಪೊಲೀಸರ ಕರ್ತವ್ಯ. ಸಿಬ್ಬಂದಿ ಕೊರತೆ ಕಾರಣಕ್ಕೆ ಸಾರ್ವಜನಿಕರಿಗೆ ಶಿಕ್ಷೆ ವಿಧಿಸುವುದು ಎಷ್ಟು ಸರಿ? ಈಗಾಗಲೇ ಒಮ್ಮೆ ಬಸ್‌ ಸಂಚಾರ ಸ್ಥಗಿತಗೊಳಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಈಗ ಮತ್ತೆ ಅವೈಜ್ಞಾನಿಕ ಕ್ರಮ ಜಾರಿಗೊಳಿಸಿರುವುದು ಸರಿಯಲ್ಲ. ಕೂಡಲೇ ಬಿ.ಡಿ ರಸ್ತೆಯಲ್ಲಿ ಎಂದಿನಂತೆ ಬಸ್‌ ಸಂಚಾರ ಆರಂಭಿಸದಿದ್ದರೆ ಸಂಚಾರ ಠಾಣೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಎಚ್ಚರಿಸಿದರು.
ಆಂಬುಲೆನ್ಸ್‌ ಓಟಾಡಕ್ಕೆ ಅಡ್ಡಿ
ಬಸವೇಶ್ವರ ಆಸ್ಪತ್ರೆ ಮುಂದಿನ ಕಿರಿದಾದ ಸರ್ವೀಸ್‌ ರಸ್ತೆಯಲ್ಲಿ ಬಸ್‌ಗಳು ನುಗ್ಗುತ್ತಿರುವ ಕಾರಣ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳ ಓಡಾಟಕ್ಕೆ ತೊಂದರೆಯಾಗಿದೆ. ಚಳ್ಳಕೆರೆ ಗೇಟ್‌ನಿಂದ ಆಸ್ಪತ್ರೆವರೆಗೂ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು ಆಂಬುಲೆನ್ಸ್‌ಗಳು ಬರಲು ಪರದಾಡುವಂತಾಗಿದೆ. ಜೊತೆಗೆ ಸಮೀಪದಲ್ಲೇ ಡಾನ್‌ ಬಾಸ್ಕೊ ಶಾಲೆಯಿದ್ದು ಮಕ್ಕಳ ಜೀವಕ್ಕೂ ಅಪಾಯ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.