
ಮೊಳಕಾಲ್ಮುರು: ಸರ್ಕಾರವು ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ಬುಧವಾರ ತಾಲ್ಲೂಕು ಕಚೇರಿ ಎದುರು ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ₹600ರಿಂದ ₹800ರಷ್ಟು ನಷ್ಟವಾಗುತ್ತಿದೆ. ಮಾರುಕಟ್ಟೆ ವ್ಯವಸ್ಥೆ ಇಲ್ಲದ ಪರಿಣಾಮ ಸಿಕ್ಕ ಕಡೆ ರೈತರು ಮಾರಾಟ ಮಾಡಬೇಕಿದೆ. ರಾಜ್ಯ ಸರ್ಕಾರ ಬೆಂಬಲಬೆಲೆ ಘೋಷಣೆ ಮಾಡಿದ್ದರೂ ಅದರ ಪ್ರಯೋಜನ ಇಲ್ಲಿನ ರೈತರಿಗೆ ಸಿಗುತ್ತಿಲ್ಲ. ಜಿಲ್ಲಾಡಳಿತ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮೊಳಕಾಲ್ಮುರು ತಾಲ್ಲೂಕು ಸಂಪೂರ್ಣ ಮಳೆಯಾಶ್ರಿತವಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರುಣಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ₹4,000 ಕೋಟಿ ವೆಚ್ಚದಲ್ಲಿ ಮುಗಿಯಬೇಕಿದ್ದು ಯೋಜನೆ ₹23,000 ಕೋಟಿಗೆ ತಲುಪಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಅನುದಾನವೂ ಮಂಜೂರಾಗಿಲ್ಲ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಜನಪ್ರತಿನಿಧಿಗಳು ದನಿ ಎತ್ತಿ ಅನುದಾನ ಮಂಜೂರಾತಿಗೆ ಒತ್ತಡ ಹೇರಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್. ಹಳ್ಳಿ ಮಲ್ಲಿಕಾರ್ಜುನ್ ಆಗ್ರಹಿಸಿದರು.
ಶೇಂಗಾ ಮತ್ತು ಈರುಳ್ಳಿಗೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ. ಫಸಲ್ ಬಿಮಾ ಯೋಜನೆಯಡಿ ಮಧ್ಯಂತರ ಪರಿಹಾರ ನೀಡುವುದಾಗಿ ಹೇಳಿ ವಿಮಾ ಕಂಪನಿ ಮೋಸ ಮಾಡಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ತಹಶೀಲ್ದಾರ್ ಟಿ. ನಾಗವೇಣಿ ಮನವಿ ಸ್ವೀಕರಿಸಿದರು. ಸಂಘದ ಮುಖಂಡರಾದ ಕಬ್ಬಿಗೆರೆ ನಾಗರಾಜಪ್ಪ, ಆರ್.ಬಿ. ನಿಜಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಶಿವಮೂರ್ತಿ, ರಾಮಾಂಜಿನಪ್ಪ, ರಮೇಶ್, ಕುಶಾಲಪ್ಪ, ನಾಗೇಶ್, ನಾಗರಾಜಪ್ಪ, ಕಾಟಪ್ಪ, ಸಂಜೀವಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.