ADVERTISEMENT

ಬಂದ್‌ಗೆ ಹೊಸದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:45 IST
Last Updated 29 ಸೆಪ್ಟೆಂಬರ್ 2020, 7:45 IST
ಹೊಸದುರ್ಗದಲ್ಲಿ ಸೋಮವಾರ ವಿವಿಧ ರೈತಪರ ಸಂಘಟನೆಯವರು ಸರ್ಕಾರದ ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಖಂಡಿಸಿ ಪ್ರತಿಭಟಿಸಿದರು.
ಹೊಸದುರ್ಗದಲ್ಲಿ ಸೋಮವಾರ ವಿವಿಧ ರೈತಪರ ಸಂಘಟನೆಯವರು ಸರ್ಕಾರದ ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಖಂಡಿಸಿ ಪ್ರತಿಭಟಿಸಿದರು.   

ಹೊಸದುರ್ಗ: ಭೂಸ್ವಾಧೀನ, ವಿದ್ಯುತ್‌ ಖಾಸಗೀಕರಣ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸೋಮವಾರ ಕರೆನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆ ಕೆಲವು ಅಂಗಡಿ, ಮುಂಗಟ್ಟು ಮಾಲೀಕರು ಎಂದಿನಂತೆ ಬಾಗಿಲು ತೆರೆದಿದ್ದರು. ರೈತಪರ ಸಂಘಟನೆ ಕಾರ್ಯಕರ್ತರು ಎಪಿಎಂಸಿ ಮಾರುಕಟ್ಟೆ ಸಮೀಪದಿಂದ ಟಿ.ಬಿ.ವೃತ್ತದವರೆಗೂ ಮುಖ್ಯರಸ್ತೆ ಮಾರ್ಗವಾಗಿ ಬೃಹತ್‌ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಹಲವು ಅಂಗಡಿಗಳ ಬಾಗಿಲು ಮುಚ್ಚಿಸಿದರು. ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ಆದರೆ, ಕೆಲವು ಅಂಗಡಿ ಮಾಲೀಕರು ಪ್ರತಿಭಟನಾನಿರತರು ತೆರಳಿದ ಬಳಿಕ ಅಂಗಡಿ ಬಾಗಿಲು ತೆರೆದು ವ್ಯಾಪಾರ, ವಹಿವಾಟು ನಡೆಸಿದರು. ಬಹುತೇಕ ಅಂಗಡಿ ಮಾಲೀಕರು ದಿನವಿಡೀ ಬಾಗಿಲು ಮುಚ್ಚಿ ಬಂದ್‌ಗೆ ಸಾಥ್‌ ನೀಡಿದರು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವಾದರೂ ಪ್ರಯಾಣಿಕರು ಹೆಚ್ಚಾಗಿರಲಿಲ್ಲ.

ಕಾಂಗ್ರೆಸ್‌, ಜೆಡಿಎಸ್ ಸೇರಿ ರೈತಪರ ಸಂಘಟನೆಯವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೂ ಪ್ರತಿಭಟನೆ ನಡೆಸಲಾಯಿತು. ಸುಗ್ರೀವಾಜ್ಞೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.

ADVERTISEMENT

ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಸಿ.ಮಹೇಶ್ವರಪ್ಪ, ಕಾರ್ಯದರ್ಶಿ ನಾಗಲಿಂಗಮೂರ್ತಿ, ಶಿವಕುಮಾರ್‌, ಕರಿಸಿದ್ದಯ್ಯ, ಬಯಲಪ್ಪ, ರಮೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.