ಮೊಳಕಾಲ್ಮುರು: ‘ತಾಲ್ಲೂಕಿನಲ್ಲಿ ಮಿತಿಮೀರಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ನೀಡುತ್ತಿರುವ ಕುಮ್ಮಕ್ಕು ಕಾರಣ’ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ದೂರಿದರು.
‘ತಮ್ಮ ಹತ್ತಿರದ ಸಂಬಂಧಿಗಳು, ಬೆಂಬಲಿಗರು ನಡೆಸುತ್ತಿರುವ ಈ ದಂಧೆಗೆ ಶಾಸಕರು ಸಹಕಾರ ನೀಡುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳು ಇದನ್ನು ಪ್ರಶ್ನೆ ಮಾಡುವಂತಿಲ್ಲ. ತಡೆಯಲು ಹೋದಲ್ಲಿ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹೊಣೆ ಹೊತ್ತಿರುವ ತಹಶೀಲ್ದಾರ್ ಟಿ. ಜಗದೀಶ್ ಈ ಬಗ್ಗೆ ಚಕಾರ ಎತ್ತದೇ ಸುಮ್ಮನಿದ್ದಾರೆ. ಅಧಿಕಾರಿಗಳು ಅಧೀನದಲ್ಲಿರಬೇಕು ಎಂದು ಈ ಹಿಂದೆ ಶಾಸಕರಾಗಿದ್ದ ಕೂಡ್ಲಿಗಿಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನೇ ಇಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ‘ ಎಂದು ಆರೋಪಿಸಿದರು.
‘ಪರವಾನಗಿ ಪಡೆದಕ್ಕಿಂತ ದುಪ್ಪಟ್ಟು ಪ್ರದೇಶದಲ್ಲಿ ಮರಳು ದಂಧೆ ಮಾಡಲಾಗುತ್ತಿದೆ. ಪರ್ಮಿಟ್ ದುರುಪಯೋಗ ಆಗುತ್ತಿದೆ. ಈಚೆಗೆ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿರುವ ಅಕ್ರಮ ಕಬ್ಬಿಣ ಮಾರಾಟ ಘಟನೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಸಿಕ್ಕಿಬಿದ್ದಿರುವುದು ನಾಚಿಕೆಗೇಡಿನ ಸಂಗತಿ. ಎತ್ತಿನಗಾಡಿಯಲ್ಲಿ ಹಳ್ಳಿಗಳಲ್ಲಿ ಮರಳು ಸಾಗಣೆ ಮಾಡುವ ಕಾರ್ಮಿಕರ ಮೇಲೆ ದೂರು ದಾಖಲಿಸುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ಕೂಡ್ಲಿಗಿಯ ಮುಖಂಡ ತಿಪ್ಪೇಸ್ವಾಮಿ ಎಂಬಾತ ಕ್ಷೇತ್ರದ ಕಾಮಗಾರಿ, ಆಡಳಿತದ ಉಸ್ತುವಾರಿ ಮಾಡುತ್ತಿದ್ದಾನೆ. ಆವರು ಹೇಳಿದಂತೆ ಅಧಿಕಾರಿಗಳು ಕೇಳಬೇಕಿದೆ. ಪ್ರತಿಯೊಂದರಲ್ಲೂ ಅವ್ಯವಹಾರ ತಾಂಡವವಾಡುತ್ತಿದೆ. ದೇವಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ 25-30 ಅಡಿ ಆಳದಷ್ಟು ಮರಳು ಗುಣಿಗಳನ್ನು ತೋಡಲಾಗಿದೆ. ಅಂತರ್ಜಲ ಕುಸಿತಕ್ಕೆ ಇದು ಕಾರಣವಾಗಿದೆ’ ಎಂದು ಎಸ್. ತಿಪ್ಪೇಸ್ವಾಮಿ ಹೇಳಿದರು.
ಕ್ಷೇತ್ರದ ಸಮಸ್ಯೆಗಳನ್ನು ಕೇಳಲು ಎನ್.ವೈ. ಗೋಪಾಲಕೃಷ್ಣ ಅವರು ವಿಧಾನಸಭಾ ಕಲಾಪಗಳಿಗೆ ಹಾಜರಾಗುವುದಿಲ್ಲ. ಕ್ಷೇತ್ರದ ಜನರ ಬಳಿಯೂ ಸಮಸ್ಯೆ ಆಲಿಸುವುದಿಲ್ಲ. ಪರಿಣಾಮ ಕ್ಷೇತ್ರದಲ್ಲಿ ನಿಷ್ಕ್ರಿಯ ಸ್ಥಿತಿ ಉಂಟಾಗಿದೆ. ವಿಶೇಷ ಅನುದಾನ ಮಂಜೂರಾಗದಂತಾಗಿದೆ. ಇನ್ನಾದರೂ ವರ್ತನೆ ತಿದ್ದಿಕೊಳ್ಳದಿದ್ದಲ್ಲಿ ನಿಮ್ಮ ಹಗರಣಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಗಮನಕ್ಕೆ ತಂದು ಕ್ರಮಕ್ಕೆ ಕೋರಲಾಗುವುದು. ತಾಲ್ಲೂಕಿನ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಬಿಜೆಪಿ ಮಂಡಲಾಧ್ಯಕ್ಷ ಕೆ.ಟಿ. ಶ್ರೀರಾಮರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ಸದಸ್ಯ ಎಸ್. ಮಂಜಣ್ಣ, ಮುಖಂಡರಾದ ಮೊಗಲಹಳ್ಳಿ ಸಿದ್ದಾರ್ಥ್, ಹಣ್ಣಿನ ಸಿದ್ದಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.