ADVERTISEMENT

ಚಿತ್ರದುರ್ಗ: ಕಸದ ಕೊಂಪೆಯಾದ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ

ಶೌಚಾಲಯ ಸೌಲಭ್ಯವಿಲ್ಲದೇ ಡಿಎನ್‌ಬಿ ತರಬೇತಿ ಕೇಂದ್ರದ ಅಭ್ಯರ್ಥಿಗಳ ಪರದಾಟ

ಎಂ.ಎನ್.ಯೋಗೇಶ್‌
Published 21 ನವೆಂಬರ್ 2025, 6:12 IST
Last Updated 21 ನವೆಂಬರ್ 2025, 6:12 IST
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ, ಡಿಎನ್‌ಬಿ ತರಬೇತಿ ಕೇಂದ್ರ ಸ್ಥಿತಿ ಹೀಗಿದೆ
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರ, ಡಿಎನ್‌ಬಿ ತರಬೇತಿ ಕೇಂದ್ರ ಸ್ಥಿತಿ ಹೀಗಿದೆ   

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಂಆರ್‌ಐ ಸ್ಕ್ಯಾನಿಂಗ್‌ ಹಾಗೂ ಡಿಎನ್‌ಬಿ ತರಬೇತಿ ಕೇಂದ್ರಗಳು ಕೊಳಕು ಪರಿಸರದಲ್ಲಿ ನಡೆಯುತ್ತಿದ್ದು, ಕಳಪೆ ನಿರ್ವಹಣೆ ಎದ್ದು ಕಾಣುತ್ತಿದೆ. ಇಡೀ ಆವರಣ ದುರ್ವಾಸನೆಯಲ್ಲಿ ಮುಳುಗಿರುವ ಕಾರಣ ಅಲ್ಲಿಗೆ ಬರುವವರು ಅಸಹ್ಯ ಪಟ್ಟುಕೊಳ್ಳುವಂತಾಗಿದೆ.

ಸ್ಕ್ಯಾನಿಂಗ್‌ ಕಟ್ಟಡದ ಆವರಣ ಪ್ರವೇಶಿಸುತ್ತಿದ್ದಂತೆ ಅದೊಂದು ಪಾಳು ಬಿದ್ದ ಕಟ್ಟಡದಂತೆ ಕಾಣುತ್ತದೆ. ಆವರಣದ ಮುಂದೆ ಬೆಳೆದು ನಿಂತಿರುವ ಗಿಡಗಂಟಿಗಳನ್ನು ಹಲವು ವರ್ಷಗಳಿಂದ ತೆರವು ಮಾಡಿಲ್ಲ. ಜೊತೆಗೆ ಆವರಣವನ್ನು ಸ್ವಚ್ಛಗೊಳಿಸದೆ, ಕಸವನ್ನೂ ಗುಡಿಸದ ಕಾರಣ ಇಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ ಎಂಬಂತಿದೆ. ತೆರವುಗೊಂಡ ಕೊಂಪೆಯಂತೆ, ಭೂತಬಂಗಲೆಯಂತೆ ಕಟ್ಟಡ ಕಾಣುತ್ತದೆ.

ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಲ್ಲಿ ಹಲವು ವರ್ಷಗಳಿಂದ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ನಡೆಯುತ್ತಿದೆ. ಸ್ಕ್ಯಾನಿಂಗ್‌ ಮಾಡುವ ಕೊಠಡಿ, ವೈದ್ಯರ ಕೊಠಡಿಯನ್ನು ಮಾತ್ರ ಹೈಟೆಕ್‌ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಉಳಿದಂತೆ ಇಡೀ ಆವರಣ ಕಸದ ಕೊಂಪೆಯಾಗಿದೆ. ಇಲ್ಲಿ ಮೊದಲು ಡಯಾಲಿಸಿಸ್‌ ಕೇಂದ್ರವೂ ನಡೆಯುತ್ತಿತ್ತು. ಈಗ ಅದನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದ್ದು, ಸದ್ಯ ಅಲ್ಲಿ ಸ್ಕ್ಯಾನಿಂಗ್‌ ಹಾಗೂ ಡಿಎನ್‌ಬಿ ತರಬೇತಿ ಮಾತ್ರ ನಡೆಯುತ್ತಿವೆ.

ADVERTISEMENT

ಸ್ಕ್ಯಾನಿಂಗ್‌ ಕೇಂದ್ರದ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಇಲ್ಲದ ಕಾರಣ ಅಲ್ಲಿಗೆ ತೆರಳುವವರು ಕಿರಿಕಿರಿ ಅನುಭವಿಸುತ್ತಾರೆ. ವಿವಿಧ ಆರೋಗ್ಯ ಸಮಸ್ಯೆ ಎದುರಿಸುವ ನೂರಾರು ರೋಗಿಗಳು ಅಲ್ಲಿಗೆ ಸ್ಕ್ಯಾನಿಂಗ್‌ಗಾಗಿ ಬರುತ್ತಾರೆ. ದಿನಕ್ಕೆ ಕನಿಷ್ಠ 80– 100 ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ರೋಗಿಗಳಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲದ ಕಾರಣ ಪರದಾಡಬೇಕಾದ ಸ್ಥಿತಿ ಇದೆ.

ರೋಗಿಗಳ ಉಪಯೋಗಕ್ಕೆ ಇರುವ ಶೌಚಾಲಯ ತೀರಾ ಕೊಳಕಾಗಿರುವ ಕಾರಣ ಅಲ್ಲಿಗೆ ಯಾರೂ ಹೋಗುವುದಿಲ್ಲ. ಅಲ್ಲಿಯ ದುರ್ವಾಸನೆ ಇಡೀ ಆವರಣಕ್ಕೆ ವ್ಯಾಪಿಸಿದೆ. ಅದರ ಸುತ್ತಲೂ ಇರುವ ಕಸವನ್ನು ಸ್ವಚ್ಛಗೊಳಿಸಿ ಹಲವು ವರ್ಷಗಳೇ ಆಗಿದೆ. ಇನ್ನೊಂದು ಕೊಠಡಿಯಲ್ಲಿ ಒಂದೇ ಒಂದು ಶೌಚಾಲಯವಿದ್ದು, ಅದನ್ನು ಮಹಿಳೆಯರು ಮಾತ್ರ ಬಳಸುತ್ತಾರೆ. ಪುರುಷರು ಶೌಚಕ್ಕಾಗಿ ಹೊರಗೆ ತೆರಳುತ್ತಾರೆ.

‘ಜಿಲ್ಲಾಸ್ಪತ್ರೆ ಆವರಣದಲ್ಲಿ ಸಾಕಷ್ಟು ಜಾಗವಿದೆ, ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಂದು ಒಳ್ಳೆಯ ಜಾಗ ನೀಡಲು ಸಾಧ್ಯವಾಗಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದು ರೋಗಿಗಳು ಪರದಾಡಬೇಕಾಗಿದೆ. ರೋಗ ನಿವಾರಣೆಗೆ ಬಂದರು ರೋಗ ಹತ್ತಿಸಿಕೊಂಡು ತೆರಳುವ ಪರಿಸ್ಥಿತಿ ಇದೆ’ ಎಂದು ಸ್ಕ್ಯಾನಿಂಗ್‌ಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಅಸಮಧಾನ ವ್ಯಕ್ತಪಡಿಸಿದರು.

ಇದೇ ಕಟ್ಟಡದಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗಾಗಿ ಇರುವ ಡಿಎನ್‌ಬಿ ತರಬೇತಿ ಕೇಂದ್ರ ನಡೆಯುತ್ತಿದ್ದು ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿದೆ. ತರಬೇತಿಗಾಗಿ ಒಂದು ಕೊಠಡಿ ಮಾತ್ರ ಇದೆ. ಡಿಎನ್‌ಬಿ ಅಭ್ಯರ್ಥಿಗಳು, ಅಲ್ಲಿ ಕೆಲಸ ಮಾಡುವ ಶುಶ್ರೂಷಕರ ಬಳಕೆಗೂ ಒಂದೇ ಒಂದು ಶೌಚಾಲಯವಿಲ್ಲ. ತರಬೇತಿಗೆ ಬಂದ ವೈದ್ಯರು ಹೊರಗೇ ಶೌಚ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ಇದೆ.

‘ಶೌಚಾಲಯ ಸೌಲಭ್ಯ ನೀಡಲು ಹಲವು ವರ್ಷಗಳಿಂದ ಕೇಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಲ್ಲಿಗೆ ಬರಬೇಕೆಂದರೆ ಬೇಸರವಾಗುತ್ತದೆ’ ಎಂದು ತರಬೇತಿ ಕೇಂದ್ರದ ಅಭ್ಯರ್ಥಿಯೊಬ್ಬರು ತಿಳಿಸಿದರು.

ಎಂಆರ್‌ಐ ಸ್ಕ್ಯಾನಿಂಗ್‌ ಕೇಂದ್ರದಲ್ಲಿ ರೋಗಿಗಳಿಗೆ ಸಕಲ ಸೌಲಭ್ಯ ಒದಗಿಸಲಾಗಿದೆ. ಈಗ ಯಾವುದೇ ತೊಂದರೆಯಾಗುತ್ತಿದ್ದರೆ ಪರಿಶೀಲನೆ ಮಾಡಿ ಸರಿಪಡಿಸಲಾಗುವುದು.
– ಡಾ.ಎಸ್‌.ಪಿ.ರವೀಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.