ADVERTISEMENT

ಚಿತ್ರದುರ್ಗ: ಸ್ಮಶಾನದಲ್ಲಿ ಆರುತ್ತಿಲ್ಲ ಚಿತೆಯ ಬೆಂಕಿ

ಚಿತ್ರದುರ್ಗದ ಮುಕ್ತಿಧಾಮದಲ್ಲಿ ತಿಂಗಳಲ್ಲಿ ನಡೆದಿದೆ 84 ಶವಸಂಸ್ಕಾರ

ಜಿ.ಬಿ.ನಾಗರಾಜ್
Published 8 ಜೂನ್ 2021, 4:43 IST
Last Updated 8 ಜೂನ್ 2021, 4:43 IST
ಚಿತ್ರದುರ್ಗದ ಮುಕ್ತಿಧಾಮದಲ್ಲಿ ನಡೆದ ಅಂತ್ಯಕ್ರಿಯೆ
ಚಿತ್ರದುರ್ಗದ ಮುಕ್ತಿಧಾಮದಲ್ಲಿ ನಡೆದ ಅಂತ್ಯಕ್ರಿಯೆ   

ಚಿತ್ರದುರ್ಗ: ಕೊರೊನಾ ಸೋಂಕು ತಂದೊಡ್ಡಿದ ವಿಪತ್ತಿಗೆ ಸ್ಮಶಾನದಲ್ಲಿನ ಚಿತೆಯ ಬೆಂಕಿಯೂ ಆರುತ್ತಿಲ್ಲ. ಇಲ್ಲಿನ ಮುಕ್ತಧಾಮವೊಂದರಲ್ಲೇ ಮೇ ತಿಂಗಳಲ್ಲಿ 84 ಅಂತ್ಯಕ್ರಿಯೆಗಳು ನಡೆದಿವೆ. ಸ್ಮಶಾನದ 20 ವರ್ಷಗಳ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಶವಸಂಸ್ಕಾರ ನಡೆದಿದ್ದು ಇದೇ ಮೊದಲು.

ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನೆರವೇರಿಸುವ ಸ್ಮಶಾನ ಮುಕ್ತಿಧಾಮ. ಸೀಮಿತ ಸಮುದಾಯದ ಜನರ ಶವಗಳಿಗೆ ಇಲ್ಲಿ ಅಗ್ನಿಸ್ಪರ್ಶ ನೀಡಲಾಗುತ್ತದೆ. ನಗರದಲ್ಲಿ ಆರಕ್ಕೂ ಹೆಚ್ಚು ಸ್ಮಶಾನಗಳಿದ್ದು, ಎಲ್ಲೆಡೆ ನಡೆದ ಶವಸಂಸ್ಕಾರಗಳಿಗೆ ಲೆಕ್ಕವೇ ಇಲ್ಲ.

ಕೋವಿಡ್‌ ರೋಗಿಗಳ ಸಾವಿನ ಬಗ್ಗೆ ಆರೋಗ್ಯ ಇಲಾಖೆ ನೀಡುತ್ತಿರುವ ಅಂಕಿ–ಸಂಖ್ಯೆಗೂ ಸ್ಮಶಾನಗಳಲ್ಲಿ ಮಣ್ಣಾಗುತ್ತಿರುವ ಶವಗಳಿಗೂ ತಾಳೆ ಆಗುತ್ತಿಲ್ಲ. ಕೋವಿಡ್‌ ಪರೀಕ್ಷೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟವರು ಮಾತ್ರ ಕೊರೊನಾ ಸೋಂಕಿನ ಸಾವಿನ ಲೆಕ್ಕದಲ್ಲಿ ಸೇರುತ್ತಿದ್ದಾರೆ. ಸೋಂಕಿನ ಲಕ್ಷಣ ಇಲ್ಲದೇ ಕೊನೆಯುಸಿರೆಳೆದವರ ಸಂಖ್ಯೆ ಕಳವಳ ಮೂಡಿಸುವಂತಿದೆ.

ADVERTISEMENT

ಕೊರೊನಾ ಸೋಂಕಿನಿಂದಮೃತಪಟ್ಟವರ ಅಂತ್ಯಕ್ರಿಯೆಗೆ ‘ಮುಕ್ತಿಧಾಮ’ಕ್ಕೆ ಹೊಣೆ ನೀಡಲಾಗಿದೆ. ಪ್ರತಿ ಶವಸಂಸ್ಕಾರಕ್ಕೆ ಜಿಲ್ಲಾಡಳಿತ ₹ 2 ಸಾವಿರ ನೆರವು ನೀಡುವುದಾಗಿ ಭರವಸೆ ನೀಡಿದೆ. ಮೇ 21ರಿಂದ ಈವರೆಗೆ 12 ಸೋಂಕಿತ ಶವಗಳಿಗೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಉಳಿದವರ ಸಾವಿಗೆಕಾರಣ ಅಸ್ಪಷ್ಟ.

‘1992ರಲ್ಲಿ ಮುಕ್ತಿಧಾಮ ನಿರ್ಮಾಣವಾಗಿದೆ. ತಿಂಗಳಿಗೆ ಸರಾಸರಿ 15 ಶವಸಂಸ್ಕಾರ ನಡೆಯುತ್ತಿದ್ದವು. ಅಪರೂಪಕ್ಕೊಮ್ಮೆ 20 ಅಂತ್ಯಕ್ರಿಯೆ ನಡೆದಿವೆ. ಆದರೆ, 84 ಶವಗಳಿಗೆ ಮುಕ್ತಿ ನೀಡಿದ್ದು ಇದೇ ಮೊದಲು. ಎದುರಾಗಿರುವ ವಿಪತ್ತಿಗೆ ಇದೇ ಸಾಕ್ಷಿ’ ಎಂಬುದು ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯೊಬ್ಬರ ಅಭಿಪ್ರಾಯ.

ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆಗೆ ಮೂರು ಚಿತೆಗಳಿವೆ. ಮೂರು ಚಿತೆಯಲ್ಲಿ ಏಕಕಾಲಕ್ಕೆ ಶವಸಂಸ್ಕಾರ ನಡೆಸಲು ಸೌಲಭ್ಯ ಇದೆ. ಶವವನ್ನು ಚಿತೆಗೆ ಇಟ್ಟು ವಿಧಿವಿಧಾನಗಳನ್ನು ನೆರವೇರಿಸಲು ಕೊಂಚ ಸಮಯ ಹಿಡಿಯುತ್ತದೆ. ಸೌದೆ ಇಟ್ಟು, ಹತ್ತಿ ಬೀಜ ಸುರಿದು, ಡೀಸೆಲ್‌ ಬಳಸಿ ಬೆಂಕಿ ಇಡಲು ಮುಕ್ತಿಧಾಮದಲ್ಲಿ ಸಿಬ್ಬಂದಿ ಇದ್ದಾರೆ. ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ವಿಶ್ವಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು ಸ್ವಯಂ ಸೇವಕರಾಗಿ ನೆರವು ನೀಡುತ್ತಿದ್ದಾರೆ.

‘ಚಿತೆಯಲ್ಲಿ ಶವವೊಂದು ಸಂಪೂರ್ಣ ಸುಡಲು ಸುಮಾರು ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಚಿತಾಭಸ್ಮವನ್ನು ಹೊರಗೆ ತೆಗೆದು ಮತ್ತೊಂದು ಶವಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಮಯದ ಕೊರತೆ ಎದುರಾಗಿತ್ತು. ಹೀಗಾಗಿ, ಅಂತ್ಯಕ್ರಿಯೆಗೆ ಬರುವ ಮೊದಲೇ ವಾರಸುದಾರರಿಗೆ ಸಮಯ ನಿಗದಿಪಡಿಸುತ್ತಿದ್ದೆವು. ಇದರಿಂದ ಅಂತ್ಯಕ್ರಿಯೆಗೆ ಸರತಿಯಲ್ಲಿ ಕಾಯುವುದು ತಪ್ಪಿತು’ ಎಂದು ಮೂಲಗಳು ಮಾಹಿತಿನೀಡಿವೆ.

ಬೆಳಿಗ್ಗೆ 6ರಿಂದ ಆರಂಭವಾಗುತ್ತಿದ್ದ ಅಂತ್ಯಕ್ರಿಯೆ ಪ್ರಕ್ರಿಯೆಗಳು ರಾತ್ರಿಯವರೆಗೆ ನಿರಂತರವಾಗಿ ನಡೆದಿವೆ. ಅಗತ್ಯ ಸೌಧೆ, ತಾತ್ಕಾಲಿಕ ಚಿತೆಗಳ ನಿರ್ಮಾಣಕ್ಕೂ ಮುಕ್ತಿಧಾಮ ಸಮಿತಿ ಸಿದ್ಧತೆ ಮಾಡಿಕೊಂಡಿದೆ. ದಿನವೊಂದಕ್ಕೆ ಗರಿಷ್ಠ ಆರು ಅಂತ್ಯಕ್ರಿಯೆಗಳನ್ನು ನೆರವೇರಿಸಲಾಗಿದೆ. ಎಂಗಮ್ಮನಕಟ್ಟೆ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ, ಜೋಗಿಮಟ್ಟಿ ರಸ್ತೆಯಲ್ಲಿಯೂ ಸ್ಮಶಾನಗಳಿವೆ. ಇಲ್ಲಿ ಎಷ್ಟು ಸಂಖ್ಯೆಯ ಅಂತ್ಯಕ್ರಿಯೆಗಳು ನಡೆದಿರಬಹುದು ಎಂಬುದು ಊಹೆಗೂ ನಿಲುಕದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.