ADVERTISEMENT

ಓಬವ್ವ ದುರ್ಗಕ್ಕಷ್ಟೆ ಅಲ್ಲ ಕನ್ನಡ ನಾಡಿಗೆ ಹೆಮ್ಮೆ : ಬಿ.ಟಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:01 IST
Last Updated 12 ನವೆಂಬರ್ 2025, 6:01 IST
ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು
ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಉದ್ಘಾಟಿಸಿದರು   

ಚಿತ್ರದುರ್ಗ: ‘ದೇಶ ಹಾಗೂ ನಾಡು ಕಂಡ ಆದರ್ಶಪ್ರಾಯ ವೀರವನಿತೆ ಒನಕೆ ಓಬವ್ವ. ಈಕೆಯ ಸ್ವಾಮಿ ನಿಷ್ಠೆ, ತ್ಯಾಗ, ಸಾಹಸ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ಓಬವ್ವ ಸಾಮಾನ್ಯ ಹೆಣ್ಣು ಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೆ ಅಲ್ಲ, ಕನ್ನಡ ನಾಡಿಗೆ ಹೆಮ್ಮೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಇಂದಿನ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದರ ಜತೆಗೆ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಯುವ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ನಿರತವಾಗಿರುವುದು ಆಶಾದಾಯಕ ಬೆಳೆವಣಿಗೆಯಲ್ಲ. ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು’ ಎಂದರು.

‘ಚಲನಚಿತ್ರ ನಟಿ ದಿವಂಗತ ಜಯಂತಿ ಅವರು ನಾಗರಹಾವು ಚಲನಚಿತ್ರದಲ್ಲಿ ಒನಕೆ ಓಬವ್ವ ಪಾತ್ರದಲ್ಲಿ ಓಬವ್ವರ ಧೈರ್ಯ, ಶಕ್ತಿ, ಸಾಹಸವನ್ನು ದೇಶಕ್ಕೆ ಪರಿಚಯಿಸಿದರು. ಆ ದೃಶ್ಯ ಇಂದಿಗೂ ಕಣ್ಮುಂದೆ ಇದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ತಿಳಿಸಿದರು.

‘ಮದಕರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಚಿತ್ರದುರ್ಗದ ಕೋಟೆಗೆ ಒದಗಿ ಬಂದ ಆಪತ್ತನ್ನು ಸಾಮಾನ್ಯ ಮಹಿಳೆ ಓಬವ್ವ ತನ್ನ ಮನೆಯಲ್ಲಿದ್ದ ಓನಕೆಯಿಂದ ಶತ್ರು ಸೈನ್ಯ ಸದೆಬಡಿದು ನಾಡಿನ ಕೋಟೆ ರಕ್ಷಿಸಿದಳು. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಸಾಕ್ಷಿ ಪ್ರಜ್ಞೆಯ ಧ್ಯೋತಕ ಒಬವ್ವ’ ಎಂದು ಹೇಳಿದರು.

‘ಒನಕೆ ಓಬವ್ವ ಎಲ್ಲರಿಗೂ ಎಂದೆಂದಿಗೂ ಮಾದರಿ. ಅವಳ ಧೈರ್ಯ, ಸಾಹಸಗಳನ್ನು ಎಲ್ಲಾ ಹೆಣ್ಣುಮಕ್ಕಳು ಅಳವಡಿಸಿಕೊಳ್ಳಬೇಕು. ಅದೇ ರೀತಿ ಯುವ ಜನತೆ ಸಮಾಜದ ಅಂಕ–ಡೊಂಕುಗಳನ್ನು ಸರಿಪಡಿಸಿ ಸಮಾಜ ಸುಧಾರಣೆಯೆಡೆಗೆ ಶ್ರಮಿಸಬೇಕು’ ಎಂದು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಶಿವಣ್ಣ ಗಂಜಿಗಟ್ಟೆ ತಿಳಿಸಿದರು.

ಜಯಂತಿ ಅಂಗವಾಗಿ ಕೋಟೆ ಮುಂಭಾಗದಿಂದ ವಾಲ್ಮೀಕಿ ಭವನದವರೆಗೂ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ನಡೆಯಿತು. ಪ್ರೊ.ಡಿ.ಎಚ್‌. ನಟರಾಜ್‌ ಒನಕೆ ಓಬವ್ವಳ ಕುರಿತು ಉಪನ್ಯಾಸ ನೀಡಿದರು.

ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಉಪವಿಭಾಗಾಧಿಕಾರಿ ಮಹೆಬೂಬ್‌ ಜಿಲಾನಿ ಖುರೇಷಿ, ತಹಶೀಲ್ದಾರ್‌ ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್‌ ಎಂ.ಕಾಳೇಸಿಂಗೆ, ಪೌರಾಯುಕ್ತೆ ಲಕ್ಷ್ಮಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನ ಮೂರ್ತಿ, ಮುಖಂಡರಾದ ಭಾರ್ಗವಿ ದ್ರಾವಿದ್‌, ಶೇಷಪ್ಪ, ದಯಾನಂದ್‌, ಅಣ್ಣಪ್ಪಸ್ವಾಮಿ, ರವಿಕುಮಾರ್‌, ಸೋಮಶೇಖರ್‌ ಇದ್ದರು.

ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ಹೈದರಾಲಿಯ ಸೈನಿಕರ ವಿರುದ್ದ ಹೋರಾಡಿ ಕೋಟೆ ರಕ್ಷಿಸಿದ ಓಬವ್ವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು.
ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.