ADVERTISEMENT

ಚಿತ್ರದುರ್ಗ| ಪಲ್ಸ್ ಪೋಲಿಯೊ ಕಾರ್ಯಕ್ರಮ: ಮೊದಲ ದಿನವೇ ಶೇ.99.89 ಗುರಿ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:14 IST
Last Updated 22 ಡಿಸೆಂಬರ್ 2025, 6:14 IST
<div class="paragraphs"><p>ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗುವಿಗೆ ಪಲ್ಸ್‌ ಪೋಲಿಯೊ ಲಸಿಕೆ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌</p></div>

ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗುವಿಗೆ ಪಲ್ಸ್‌ ಪೋಲಿಯೊ ಲಸಿಕೆ ಹಾಕಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌

   

ಚಿತ್ರದುರ್ಗ: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಭಾನುವಾರ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ಶೇ 99.89ರಷ್ಟು ಗುರಿ ಸಾಧಿಸಲಾಗಿದೆ. 

ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ವ್ಯವಸ್ಥಿತವಾಗಿ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಾಥಾ ನಡೆಸಿ ಜಾಗೃತಿ ಮೂಡಿಸಲಾಗಿತ್ತು. ಜತೆಗೆ ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದರು.

ADVERTISEMENT

ನಗರ ಪ್ರದೇಶದಲ್ಲಿ 28,082, ಗ್ರಾಮೀಣ ಭಾಗದಲ್ಲಿ 98,279 ಸೇರಿ ಒಟ್ಟು 1,26,361 ಮಕ್ಕಳನ್ನು ಗುರುತಿಸಲಾಗಿತ್ತು. ಇದರಲ್ಲಿ 1,26,219 ಮಕ್ಕಳಿಗೆ ಮೊದಲ ದಿನವೇ ಲಸಿಕೆ ಹಾಕಲಾಗಿದೆ. ಡಿ.24 ರವರೆಗೆ ಲಸಿಕೆ ನೀಡುವ ಕಾರ್ಯ ಮುಂದುವರೆಯಲಿದೆ.

1,091 ಲಸಿಕಾ ಕೇಂದ್ರಗಳು, 63 ಟ್ರಾನ್ಸಿಟ್‌ ಪಾಯಿಂಟ್ ಮತ್ತು 15 ಮೊಬೈಲ್ ತಂಡಗಳ ಮೂಲಕ ಲಸಿಕೆ ಹಾಕಲಾಯಿತು. 2,338 ಲಸಿಕಾ ಕಾರ್ಯಕರ್ತರು, 239 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಉಸ್ತುವಾರ ಸಚಿವ ಡಿ.ಸುಧಾಕರ್‌ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ನೆರೆಯ ರಾಷ್ಟ್ರಗಳಲ್ಲಿ ಇನ್ನೂ ಪ್ರಕರಣಗಳು ಪತ್ತೆಯಾಗುತ್ತಿವೆ. ಆ ಕಾರಣಕ್ಕೆ ದೇಶದಲ್ಲಿ ಪುನಃ ಅಭಿಯಾನ ಆರಂಭಿಸಲಾಗಿದೆ. ಐದು ವರ್ಷದೊಳಗಿನ ಮಗುವಿಗೆ ತಪ್ಪದೆ ಲಸಿಕೆ ಹಾಕಿಸಿ’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಡಿ.ಎಂ.ಅಭಿನವ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಇದ್ದರು.

ಮೊದಲ ದಿನ ಬೂತ್ ಮಟ್ಟದಲ್ಲಿ ಶೇ 99.89 ರಷ್ಟು ಪೋಲಿಯೊ ಲಸಿಕೆ ಹಾಕಲಾಗಿದೆ. ಡಿ.24 ರವರೆಗೆ ಮನೆಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ
ಡಾ.ಡಿ.ಎಂ.ಅಭಿನವ್ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.