ಚಳ್ಳಕೆರೆ: ಈಚೆಗೆ ಧಾರಾಕಾರವಾಗಿ ಸುರಿದ ಗುಡುಗು ಸಹಿತ ಮಳೆ ಪರಿಣಾಮ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹೊಟ್ಟೆಪ್ಪನಹಳ್ಳಿ ಮೇಗಳ ಗೊಲ್ಲರಹಟ್ಟಿ ಗ್ರಾಮದ ಮಣ್ಣಿನ ರಸ್ತೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು ಬಿದ್ದ ತಗ್ಗು-ಗುಂಡಿಯಲ್ಲಿ ಕೆಸರು ಕೊಚ್ಚೆ ತುಂಬಿಕೊಂಡಿದೆ.
ಹೀಗಾಗಿ ಗ್ರಾಮದ ಜನರ ಓಡಾಟ ಮತ್ತು ದ್ವಿಚಕ್ರ ವಾಹನ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ. ಮಳೆ ಬಂದು 2-3 ದಿನವಾಗಿದ್ದರೂ ಮಣ್ಣಿನ ರಸ್ತೆ ದುರಸ್ತಿ ಬಗ್ಗೆ ಯಾರೂ ಯೋಚಿಸುತ್ತಿಲ್ಲ.
ರಸ್ತೆ ಉದ್ದಕ್ಕೂ ತುಂಬಿರುವ ಕೆಸರು-ಕೊಚ್ಚೆ ನೀರಿನಲ್ಲಿ ಓಡಾಡಿದರೆ ಕಿಚಿಕ್, ಪಿಚಕ್ ಅಂಥ ಕೆಸರು ಮುಖಕ್ಕೆ ಸಿಡಿಯುತ್ತದೆ. ಅಲ್ಲದೆ ಗ್ರಾಮದ 7-8 ಜನರು ಕೆಸರಿನಲ್ಲಿ ಜಾರಿ ಬಿದ್ದು ಕೈ, ಕಾಲು ನೋವು ಮಾಡಿಕೊಂಡ ಘಟನೆ ನಡೆದಿವೆ.
ಟ್ಯಾಕ್ಟರ್ ಮೂಲಕ ಮಣ್ಣು ಹೇರಿಸುವ ಮೂಲಕ ಗ್ರಾಮದ ರಸ್ತೆಯಲ್ಲಿನ ತಗ್ಗು-ಗುಂಡಿ ಮುಚ್ಚಬೇಕು. ಮತ್ತು ಹೊಟ್ಟೆಪ್ಪನಹಳ್ಳಿ ಗ್ರಾಮದಿಂದ ಮೇಗಳ ಗೊಲ್ಲರಹಟ್ಟಿ ವರೆಗೆ ಮಣ್ಣಿನ ರಸ್ತೆ ಬದಿಯಲ್ಲಿ ಬೆಳೆದ ಸೀಮೆಜಾಲಿ ಗಿಡಗಳನ್ನು ಕಡಿಸಿ ಹಾಕುವುದಲ್ಲದೆ ರಸ್ತೆ ಡಾಂಬರೀಕರಣ ಕೂಡಲೆ ಕ್ರಮ ಕೈಗಳ್ಳಬೇಕು ಎಂದು ಗ್ರಾಮದ ಮುಖಂಡ ನಾಗಪ್ಪ ಗ್ರಾಮ ಆಡಳಿತವನ್ನು ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿ ಕಾರ್ಯ ವಿಳಂಬವಾದಲ್ಲಿ ರೈತ ಹಾಗೂ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣ್ಣಿನ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಕ್ಕೆ ಹೆಚ್ಚು ಅನುದಾನ ಒದಗಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಕುಮಾರ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.