ADVERTISEMENT

ನುಡಿದಂತೆ ನಡೆಯುವ ಸಂಸ್ಕೃತಿ ಬೆಳೆಸಿಕೊಳ್ಳೋಣ: ಆರ್.ಶಿವಣ್ಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:27 IST
Last Updated 2 ಮಾರ್ಚ್ 2026, 6:27 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿಯಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿಯಲ್ಲಿ ಗಣ್ಯರು ಪುಷ್ಪನಮನ ಸಲ್ಲಿಸಿದರು   

ಚಿತ್ರದುರ್ಗ: ‘ಶರಣರ ನಡೆ-ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನುಡಿದಂತೆ ನಡೆಯುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು’ ಎಂದು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶಿವಣ್ಣ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ‘ಮಹಾಪುರುಷರು ತೋರಿದ ಸಮಾನತೆಯ ಹಾದಿ ಸಮಾಜಕ್ಕೆ ಅವಶ್ಯಕವಾಗಿದ್ದು, ದಾರ್ಶನಿಕರ ತತ್ವಗಳು ದಾರಿದೀಪವಾಗಿವೆ’ ಎಂದರು.

‘ರೇಣುಕಾಚಾರ್ಯ ಸೇರಿದಂತೆ ಅನೇಕ ದಾರ್ಶನಿಕರು ಅಂದಿನ ಕಾಲದ ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ರೇಣುಕಾಚಾರ್ಯರು ಧರ್ಮಾಚರಣೆಗಾಗಿ ಸಾರಿದ ದಶಸೂತ್ರಗಳು ಇಡೀ ವಿಶ್ವದ ಶಾಂತಿ ಮತ್ತು ನೆಮ್ಮದಿಗೆ ದಾರಿದೀಪವಾಗಿವೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ, ದಯೆ, ಕ್ಷಮೆ, ದಾನ, ಶಿವಪೂಜೆ, ಪಂಚಾಕ್ಷರಿ ಮಂತ್ರ ಜಪದಂತಹ ಹತ್ತು ಸೂತ್ರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತವೆ’ ಎಂದು ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್‌ ತಿಳಿಸಿದರು.

‘ರೇಣುಕಾಚಾರ್ಯರ ಜಯಂತಿಯು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗಬಾರದು. ಅವರ ‘ವಿಶ್ವ ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಉದಾತ್ತ ಸಂದೇಶವನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥ ಬರುತ್ತದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್‌, ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನ ಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಎಂ.ಶಶಿಧರ ಬಾಬು, ಖಜಾಂಚಿ ರುದ್ರಪ್ಪ ಜಾಲಿಕಟ್ಟೆ, ಯುವ ಘಟಕದ ಅಧ್ಯಕ್ಷ ದಿನೇಶ್‌ ಮೈಲಹಳ್ಳಿ, ಪಂಚಾಚಾರ್ಯ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ಎಸ್‌.ಷಡಾಕ್ಷರಯ್ಯ ಪ್ರವೀಣ್‌ ಇದ್ದರು.

‘ಉದಾತ್ತ ಚಿಂತನೆ ಬೋಧಿಸಿದ ಯುಗಪುರುಷ’

‘ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತ ಪ್ರತಿಪಾದಿಸುವ ಮೂಲಕ ಜಗತ್ತಿಗೆ ಮಾನವ ಧರ್ಮ ಮತ್ತು ವಿಶ್ವಶಾಂತಿಯ ಸಂದೇಶ ಸಾರಿದರು. ಸಮಾಜದಲ್ಲಿ ಸ್ವಾತಂತ್ರ್ಯ ಸಮಾನತೆ ಸಹಿಷ್ಣುತೆ ಸಾಮರಸ್ಯ ಹಾಗೂ ಸಹಬಾಳ್ವೆಯಂತಹ ಉದಾತ್ತ ಮೌಲ್ಯ ಚಿಂತನೆಗಳನ್ನು ಬೋಧಿಸಿದ ಯುಗಪುರುಷ’ ಎಂದು ಸಾಹಿತಿ ನಿರಂಜನ ದೇವರಮನೆ ಹೇಳಿದರು.

‘ಚಿಂತನೆ-ಅರಿವು-ಅನುಭಾವದ ಮೂಲಕ ವ್ಯಕ್ತಿಯ ವಿಕಾಸ ಮತ್ತು ಸಮಾಜಾಭಿವೃದ್ಧಿಯನ್ನು ಬಯಸಿದವರು. ಧರ್ಮ ಮತ್ತು ಸಂಸ್ಕೃತಿಯನ್ನು ಕೇವಲ ಲೌಕಿಕ ಬದುಕಿನ ಸಮೃದ್ಧಿಯ ಮನೋಭಾವಗಳಿಗೆ ಬಳಸಿಕೊಳ್ಳದೇ ಮನುಷ್ಯನ ಆಧ್ಯಾತ್ಮಿಕ ವಿಕಾಸಕ್ಕೆ ಮಹತ್ವದ ಶಕ್ತಿಯನ್ನಾಗಿ ರೂಪಿಸಿದರು. ಮನುಷ್ಯನ ಪ್ರಜ್ಞೆಯನ್ನು ಬೆಳೆಸಿಕೊಂಡು ಮಾನವೀಯ ನೆಲೆಯಲ್ಲಿ ಸಂಘಟನೆಯಾಗಿ ಎಲ್ಲರೂ ಪರಿಪೂರ್ಣತೆ ಸಾಧಿಸಿ ಜೀವನ್ಮುಕ್ತಿ ಪಡೆಯುವಂತೆ ತಿಳಿಸಿದವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.