ಚಿತ್ರದುರ್ಗದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವೇಶದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಚಿತ್ರದುರ್ಗ: ‘ಒಳ ಮೀಸಲಾತಿಗಾಗಿ ನಾವು 30 ವರ್ಷ ಹೋರಾಟ ಮಾಡಿದವರು. ನಿಮ್ಮ ಲಾಠಿಗೆ ಹೆದರುವುದಿಲ್ಲ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು.
ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮಾದಿಗ ವಕೀಲರ ರಾಜ್ಯಮಟ್ಟದ ಮೊದಲ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದರು.
‘ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಬೇಕು. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಸಂವಿಧಾನ ಬದ್ಧವಾಗಿರುವ ಈ ಹಕ್ಕನ್ನು ನ್ಯಾಯಯುತ ಹೋರಾಟದ ಮೂಲಕ ಪಡೆಯುವುದಂತೂ ನೂರಕ್ಕೆ ನೂರರಷ್ಟು ಸತ್ಯ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತಿದ್ದೇವೆ. ಅವರ ನಡೆ ಅನುಮಾನ ಮೂಡಿಸುತ್ತಿದೆ’ ಎಂದು ತಿಳಿಸಿದರು.
‘ಒಳಮೀಸಲಾತಿ ಬಗ್ಗೆ ನಮ್ಮ ಸಮುದಾಯದ ನಾಯಕರು ಸದನದಲ್ಲಿ ಮಾತನಾಡುತ್ತಿಲ್ಲ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟು ಸದನದಲ್ಲೇ ಈ ವಿಚಾರವಾಗಿ ಗಟ್ಟಿ ಧ್ವನಿ ಎತ್ತಬೇಕು. ಸಂವಿಧಾನ ಬದ್ಧ ಹಕ್ಕನ್ನು ನೀಡುವುದಾಗಿ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿದರೆ ಸಾಕು. ನಾವು ಮತ್ತೇನನ್ನೂ ಕೇಳುವುದಿಲ್ಲ’ ಎಂದರು.
ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ವೇದಿಕೆ ಅಧ್ಯಕ್ಷ ಎಸ್.ಅರುಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.