ADVERTISEMENT

ಮೊಳಕಾಲ್ಮುರು: ಕೋಟೆಗುಡ್ಡ ಮಾರಮ್ಮ ಸಿಡಿ ಉತ್ಸವ ವೈಭವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:04 IST
Last Updated 9 ಜನವರಿ 2026, 7:04 IST
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದಲ್ಲಿ ಗುರುವಾರ ಸಂಜೆ ಕೋಟೆಗುಡ್ಡ ಮಾರಮ್ಮದೇವಿ ಸಿಡಿ ವೈಭವದಿಂದ ನಡೆಯಿತು 
ಮೊಳಕಾಲ್ಮುರು ತಾಲ್ಲೂಕಿನ ರಾಯಾಪುರದಲ್ಲಿ ಗುರುವಾರ ಸಂಜೆ ಕೋಟೆಗುಡ್ಡ ಮಾರಮ್ಮದೇವಿ ಸಿಡಿ ವೈಭವದಿಂದ ನಡೆಯಿತು    

ಮೊಳಕಾಲ್ಮುರು: ಜಿಲ್ಲೆಯ ಪ್ರಮುಖ ಸಿಡಿ ಉತ್ಸವಗಳಲ್ಲಿ ಒಂದಾದ ತಾಲ್ಲೂಕಿನ ರಾಯಾಪುರದ ಕೋಟೆಗುಡ್ಡ ಮಾರಮ್ಮದೇವಿ ಸಿಡಿ ಉತ್ಸವ ಗುರುವಾರ ಸಂಜೆ ವೈಭದಿಂದ ನಡೆಯಿತು.

ಪ್ರತಿವರ್ಷ ಶೂನ್ಯಮಾಸದಲ್ಲಿ ಈ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಉತ್ಸವದ ಅಂಗವಾಗಿ ಮಂಗಳವಾರ ದೇವಿಯನ್ನು ಬುಡಕಟ್ಟು ಸಂಸ್ಕೃತಿಗಳ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಗಂಗಾಪೂಜೆಗೆ ಕರೆದುಕೊಂಡು ಹೋಗಲಾಗಿತ್ತು. ವಾಪಸ್‌ ಬಂದ ನಂತರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಬುಧವಾರ ವಿರಪೋತರಾಜುಲು ಅವರಿಂದ ಪೂಜೆ ನಡೆಯಿತು.

ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜೆ ಸಲ್ಲಿಸಲಾಯಿತು. ಸಂಜೆ 4 ಗಂಟೆಗೆ ಸಿಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿಡಿಗೂ ಮುನ್ನ ಆಡುವ ವ್ಯಕ್ತಿಯನ್ನು ಮೆರವಣಿಗೆಯಲ್ಲಿ ಆವರಣಕ್ಕೆ ಕರೆ ತರಲಾಯಿತು. ನಂತರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಿಡಿ ಕಂಬ ಪ್ರದಕ್ಷಿಣೆ ಹಾಕಿಸಲಾಯಿತು. ಸಿಡಿ ಆಡುವಾಗ ಅರಿಶಿನ, ಬೇವಿನ ಸೊಪ್ಪನ್ನು ಸಿಡಿ ಆಡುವಾತ ಭಕ್ತರಿಗೆ ಪ್ರೋಕ್ಷಣೆ ಮಾಡಿದರು. ನಂತರ 3 ಸುತ್ತು ಖಾಲಿ ಸಿಡಿ ಕಂಬವನ್ನು ಸುತ್ತಿಸಲಾಯಿತು.

ADVERTISEMENT

ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ವಿಜಯನಗರ, ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಂದ ಅಪಾರ ಭಕ್ತರು ಪಾಲ್ಗೊಂಡಿದ್ದರು. ಶುಕ್ರವಾರ ಬೆಳಿಗ್ಗೆ ಮಹಾಮಂಗಳಾರತಿ ಸಲ್ಲಿಸಿ ದೇವಿಯನ್ನು ಗುಡಿದುಂಬಿಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ ಎಂದು ಪ್ರಕಟಣೆ ತಿಳಿಸಿದೆ.