
ಚಿತ್ರದುರ್ಗ: ಕಾಂಗ್ರೆಸ್ ಮುಖಂಡರಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಉಂಟಾಗಿದ್ದು ಸಾರ್ವಜನಿಕರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಮೋರ್ಚಾ ಸದಸ್ಯರು, ಮುಖಂಡರು ಕಾರ್ಯಕರ್ತರು ನೀಲಕಂಠೇಶ್ವರ ದೇವಾಲಯದಿಂದ ಮೆರವಣಿಗೆ ಆರಂಭಿಸಿದರು. ಎತ್ತಿನಗಾಡಿಗಳಲ್ಲಿ ಬಂದ ಕಾರ್ಯರ್ಕತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಿದೆ. ರಾಜ್ಯದಲ್ಲಿ ರೈತರು ಸಮಸ್ಯೆ ಎದುರಿಸುತ್ತಿದ್ದರೂ ದೆಹಲಿಗೆ ಹೋಗಿ ಬಿಡಾರ ಹಾಕುತ್ತಿದ್ದಾರೆ. ಶಾಸಕರು ಕೂಡ ಗುಂಪುಗುಂಪಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡುತ್ತಿದ್ದಾರೆ. ಜನರ ಕಷ್ಟಗಳನ್ನು ಕೇಳುವವರು ಇಲ್ಲವಾಗಿದ್ದಾರೆ. ಜನರ ಸಮಸ್ಯೆಗಳ ಪರಿಹಾರಕ್ಕಿಂತ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೂ ನಾಡಿನ ಜನ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅತಿವೃಷ್ಟಿ ಸಂದರ್ಭದಲ್ಲೂ ತಲೆ ಕೆಡಿಸಿಕೊಂಡಿಲ್ಲ. ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡಿದರೂ ಸ್ಪಂದಿಸಿಲ್ಲ, ಈಗ ಮೆಕ್ಕೆಜೋಳ ಬೆಳೆದ ರೈತರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ’ ಎಂದು ಮಾಜಿ ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.
‘ಕಾಂಗ್ರೆಸ್ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಅತೀವೃಷ್ಟಿ, ಅನಾವೃಷ್ಟಿ ಎದುರಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅಧಿಕಾರಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳು ರಾಜ್ಯ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕು. ಕಾಂಗ್ರೆಸ್ ಪಕ್ಷದ ಶಾಸಕರಾಗಲಿ, ಸಚಿವರಾಗಲಿ ಜನತೆಯ ಸಮಸ್ಯೆಯನ್ನು ಅಲಿಸುತ್ತಿಲ್ಲ. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿಲ್ಲ. ಶಾಸಕರು ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
‘ಕಾಂಗ್ರೆಸ್ ಸರ್ಕಾರ ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವುದೇ ಕೆಲಸವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಅನುಕೂಲವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಆ ಯೋಜನೆಯನ್ನು ಸ್ಥಗಿತಗೊಳಿಸಿದೆ. ಇದು ರೈತರಿಗೆ ಮಾಡಿದ ಅನ್ಯಾಯವಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಆರೋಪಿಸಿದರು.
‘ಮುಖ್ಯಮಂತ್ರಿಗಳು, ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ನಾವು ಜನಾಭಿಪ್ರಾಯ ರೂಪಿಸಲಿದ್ದೇವೆ. ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುತ್ತೇವೆ. ಮುಂಗಾರು ಹಂಗಾಮಿನಲ್ಲಿ ಹಲವು ಬೆಳೆಗಳು ವಿಫಲವಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಇನ್ನೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಇದರ ವಿರುದ್ಧ ಮುಂದಿನ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.
ಇದೇ ವೇಳೆ ಪ್ರತಿಭಟನಾಕಾರರು ಮುಖ್ಯಮಂತ್ರಿಗಳ ಅಣಕು ಶವ ಯಾತ್ರೆ ನಡೆಸಿದರು, ನಂತರ ಸಿಎಂ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಎ.ಮುರಳಿ, ಅನಿತ್ ಕುಮಾರ್, ಲಿಂಗಮೂರ್ತಿ, ಎನ್.ಆರ್. ಲಕಕಾಂತ್, ಮಲ್ಲಿಕಾರ್ಜನ್, ರಾಜೇಶ್ ಬುರುಡೇಕಟ್ಟೆ, ವೆಂಕಟೇಶ್ ಯಾದವ್, ಸಂಪತ್ ಕುಮಾರ್, ಬಾಳೆಕಾಯಿ ರಾಮದಾಸ್, ಮಾಧುರಿ ಗೀರಿಶ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಲೋಕೇಶ್ ನಾಗರಾಜ್, ಸುರೇಶ್ ಮಲ್ಲೇಶ್, ಅಣ್ಣಪ್ಪ, ಬೋಸೇರಂಗಪ್ಪ, ಬಸಮ್ಮ, ಜಗದಾಂಬ, ಲಕ್ಷ್ಮಿ, ರೇಖಾ, ವೀಣಾ, ಲೀಲಾವತಿ, ಸಿದ್ದಮ್ಮ ಇದ್ದರು.
ಊಟ ತಿಂಡಿಯಲ್ಲೇ ಎರಡೂವರೆ ವರ್ಷ: ಶ್ರೀರಾಮುಲ
‘ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು ಊಟ ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದಿದ್ದಾರೆ. ಸುಳ್ಳು ಹೇಳಿಕೊಂಡು ಬಂದ ಸರ್ಕಾರದಿಂದ ಜನರಿಗೆ ಅನ್ಯಾಯವಾಗಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಚುನಾವಣೆಯ ಫಲಿತಾಂಶ ರಾಜ್ಯದಲ್ಲಿ ಬರಲಿದೆ. ಬಿಹಾರಕ್ಕಿಂತ ದೊಡ್ಡಮಟ್ಟದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ಶ್ರೀರಾಮುಲು ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಡಿಕೆಶಿಯವರು ಸಿದ್ದರಾಮಯ್ಯ ಅವರ ಮೇಲೆ ಯಾವತ್ತು ಬಾಂಬ್ ಹಾಕುತ್ತಾರೋ ಗೊತ್ತಿಲ್ಲ. ಸದ್ಯಕ್ಕಂತೂ ಕದನ ವಿರಾಮ ಘೋಷಣೆಯಾಗಿದೆ. ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯವನ್ನು ಮರೆತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ’ ಎಂದರು. ‘ಬಿ.ವೈ. ವಿಜಯೇಂದ್ರ ಅವರು ಬಿಜೆಪಿಯ ಉಸ್ತುವಾರಿ ವಹಿಸಿಕೊಂಡ ನಂತರ ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರೇ ರಾಜ್ಯಘಟಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.