ADVERTISEMENT

ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಸಹಕಾರಿ: ಉಪವಿಭಾಗಾಧಿಕಾರಿ ಮಹಬೂಬ್ ಜೀಲಾನಿ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:07 IST
Last Updated 26 ಮೇ 2025, 16:07 IST
ಚಿತ್ರದುರ್ಗ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ನೃತ್ಯ ಪ್ರದರ್ಶಿಸಿದ ಮಕ್ಕಳು
ಚಿತ್ರದುರ್ಗ ಜಿಲ್ಲಾ ಬಾಲಭವನದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ನೃತ್ಯ ಪ್ರದರ್ಶಿಸಿದ ಮಕ್ಕಳು   

ಚಿತ್ರದುರ್ಗ: ‘ಹೆಚ್ಚಿದ ಮೊಬೈಲ್, ಟಿವಿ ಬಳಕೆಯಿಂದ ಮಕ್ಕಳು ಊಟ ಮಾಡುವುದನ್ನು ಸಹ ಕಡಿಮೆ ಮಾಡಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಉಪವಿಭಾಗಧಿಕಾರಿ ಮಹಬೂಬ್‌ ಜೀಲಾನಿ ಖುರೇಷಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳು ಈ ಮೊದಲು ಅಜ್ಜಿ ಮನೆಗೆ ಹೋಗಿ ಗ್ರಾಮೀಣ ಪರಿಸರದಲ್ಲಿ ಬೇಸಿಗೆ ದಿನ ಕಳೆಯುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿರುವ ಕಾರಣ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ’ ಎಂದು ಹೇಳಿದರು.

‘ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಪೂರಕ. ಶಿಬಿರದಲ್ಲಿ ಯೋಗ, ಧ್ಯಾನ, ಶ್ಲೋಕ, ಚಿತ್ರಕಲೆ, ಕರಕುಶಲತೆ, ಸಮೂಹ ನೃತ್ಯ, ಸಂಗೀತ, ಮಾತನಾಡುವ ಗೊಂಬೆ, ಗಾಳಿಪಟ ತಯಾರಿಕೆ, ಅಭಿನಯ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಚಟುವಟಿಕೆ ನಡೆಸಲಾಗಿದೆ. ಈ ಮೂಲಕ ಮಕ್ಕಳ ಮನೋವಿಕಾಸಕ್ಕೆ ದಾರಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಿಗೆ ಉಪಯೋಗವಾಗಿವೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 15 ದಿನ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 103 ಮಕ್ಕಳು ಭಾಗವಹಿಸಿದ್ದರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್‌. ಬಣಕಾರ್‌ ಹೇಳಿದರು.

ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್‌.ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ, ಸಂಪನ್ಮೂಲ ವ್ಯಕ್ತಿ ಎಸ್‌.ಕುಮಾರಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.