ADVERTISEMENT

ಚಿತ್ರದುರ್ಗ: ಮೇಗಳಹಳ್ಳಿ ಜನರಿಗೆ ಬೊಮ್ಮವ್ವನಾಗತಿಹಳ್ಳಿಯ ನೀರು!

ನಿತ್ಯ ಒಂದೂವರೆ ಕಿ.ಮೀ. ಕಾಲ್ನಡಿಗೆ.. ನೀರಿಗಾಗಿ ಮಕ್ಕಳು ಮಹಿಳೆಯರ ಅಲೆದಾಟ

ಜಿ.ಬಿ.ನಾಗರಾಜ್
Published 15 ಮಾರ್ಚ್ 2024, 6:29 IST
Last Updated 15 ಮಾರ್ಚ್ 2024, 6:29 IST
ಚಿತ್ರದುರ್ಗ ತಾಲ್ಲೂಕಿನ ಮೇಗಳಹಳ್ಳಿಯ ಮಹಿಳೆಯರು ಬಿಂದಿಗೆ ಹಿಡಿದು ನೀರಿಗಾಗಿ ಬೊಮ್ಮವ್ವನಾಗತಿಹಳ್ಳಿಗೆ ಹೋಗುತ್ತಿರುವುದು
ಚಿತ್ರದುರ್ಗ ತಾಲ್ಲೂಕಿನ ಮೇಗಳಹಳ್ಳಿಯ ಮಹಿಳೆಯರು ಬಿಂದಿಗೆ ಹಿಡಿದು ನೀರಿಗಾಗಿ ಬೊಮ್ಮವ್ವನಾಗತಿಹಳ್ಳಿಗೆ ಹೋಗುತ್ತಿರುವುದು   

ಚಿತ್ರದುರ್ಗ: ಸೂರ್ಯ ಉದಯಿಸಿದ ತಕ್ಷಣ ಬಾಲಕನೊಬ್ಬ ಹಲ್ಲುಜ್ಜುತ್ತ ಬಿಂದಿಗೆ ಹಿಡಿದು ಹೆಜ್ಜೆಹಾಕಿದ. ಅದಾಗಲೇ ತಾಯಿ ಎರಡು ಕೊಡಗಳೊಂದಿಗೆ ಮಹಿಳೆಯರ ಗುಂಪಿನಲ್ಲಿ ಮುಂದೆ ಸಾಗುತ್ತಿದ್ದರು. ಒಂದೂವರೆ ಕಿ.ಮೀ. ದೂರದ ಪಕ್ಕದ ಊರಿನಿಂದ ನೀರು ಹೊತ್ತು ತರುವ ಹೊತ್ತಿಗೆ ಮನೆಯ ಯಜಮಾನ ಗಣಿ ಕೆಲಸಕ್ಕೆ ಹೊರಡಲು ಅಣಿಯಾಗಿದ್ದರು.

ಇಂತಹದೊಂದು ದೃಶ್ಯ ಚಿತ್ರದುರ್ಗ ತಾಲ್ಲೂಕಿನ ಮೇಗಳಹಳ್ಳಿಯಲ್ಲಿ ಕಂಡುಬಂತು. ಒಂದು ಕೊಡ ನೀರಿಗೂ ಊರೂರು ಅಲೆಯುವ ಸ್ಥಿತಿ ಇಲ್ಲಿನ ಜನರ ಜೀವನದ ಭಾಗವಾಗಿ ಹೋಗಿದೆ. ನಿತ್ಯ ಬೆಳಿಗ್ಗೆ ಕೊಡ ಹಿಡಿದು ಮೇಗಳಹಳ್ಳಿಯಿಂದ ಬೊಮ್ಮವ್ವನಾಗತಿಹಳ್ಳಿಗೆ ತೆರಳುವ ಮಕ್ಕಳು, ಮಹಿಳೆಯರಿಗೆ ನೀರು ಹೊತ್ತು ತರುವುದೇ ಮುಕ್ಯ ಕೆಲಸ. ಸಿಗುವ ನಾಲ್ಕಾರು ಬಿಂದಿಗೆ ನೀರಿನಲ್ಲಿ ದಿನ ಕಳೆಯಬೇಕಾಗಿದೆ.

ಮೇಗಳಹಳ್ಳಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಹಳ್ಳಿ. ಇಲ್ಲಿಯ ಜನರು ಕಾಲ್ನಡಿಗೆಯಲ್ಲಿ ಸಾಗಿ ನೀರು ತರುವ ಬೊಮ್ಮವ್ವನಾಗತಿಹಳ್ಳಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಆದರೂ ಗ್ರಾಮಸ್ಥರು ಕುಡಿಯುವ ನೀರನ್ನು ಉದಾರವಾಗಿ ನೀಡುತ್ತಿದ್ದಾರೆ. ಎರಡು ಗ್ರಾಮಗಳ ನಡುವೆ ನಿತ್ಯ ನಸುಕಿನಲ್ಲಿ ಬಿಂದಿಗೆ ಹೊತ್ತ ಮಹಿಳೆಯರ ಸಾಲು ಮೆರವಣಿಗೆಯಂತೆ ಕಾಣುತ್ತದೆ.

ADVERTISEMENT

ಅಂದಾಜು 300 ಮನೆ, 1,500 ಜನಸಂಖ್ಯೆ ಹೊಂದಿರುವ ಮೇಗಳಹಳ್ಳಿಯಲ್ಲಿ 5 ಕೊಳವೆಬಾವಿಗಳಿವೆ. ಈ ಪೈಕಿ 3 ಕೊಳವೆಬಾವಿಗಳು ಸಂಪೂರ್ಣ ಬತ್ತಿವೆ. ಮಿಕ್ಕ ಎರಡರಲ್ಲಿ ಸ್ವಲ್ಪಸ್ವಲ್ಪ ನೀರು ಬರುತ್ತದೆ. ಪ್ರತಿ ಕೇರಿಗೆ ವಾರಕ್ಕೊಮ್ಮೆ ನೀರು ಬಿಡುವ ಪಾಳಿಯನ್ನು ಬೊಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ನಿಗದಿ ಮಾಡಿದೆ. ಉಳಿದ ದಿನ ಅಗತ್ಯ ಇರುವ ನೀರಿಗಾಗಿ ಜನರು ಪಕ್ಕದ ಬೊಮ್ಮವ್ವನಾಗತಿಹಳ್ಳಿಯನ್ನೇ ಅವಲಂಬಿಸಿದ್ದಾರೆ.

‘ಕಳೆದ 3 ತಿಂಗಳಿಂದಲೂ ನೀರಿನ ತೊಂದರೆ ಇದೆ. ಮನೆಯ ನಲ್ಲಿಯಲ್ಲಿ ವಾರಕ್ಕೊಮ್ಮೆ ನೀರು ಬರುತ್ತದೆ. ಉಳಿದ ದಿನ ಹೊಲ, ತೋಟದ ಕೊಳವೆಬಾವಿಗಳಿಗೆ ತೆರಳಿ ನೀರು ತರುತ್ತಿದ್ದೆವು. ಇತ್ತೀಚೆಗೆ ಅವು ಬತ್ತಿದ್ದರಿಂದ ಪಕ್ಕದ ಊರನ್ನೇ ಅವಲಂಬಿಸಬೇಕಿದೆ. ನಿತ್ಯ ಬೆಳಿಗ್ಗೆ 7ರಿಂದ 9ರವರೆಗೆ ಬಿಂದಿಗೆಯಲ್ಲಿ ನೀರು ಹೊತ್ತು ತರುತ್ತೇವೆ’ ಎನ್ನುತ್ತ ತಲೆ ಮೇಲಿನ ಬಿಂದಿಗೆ ಸರಿಪಡಿಸಿಕೊಂಡರು ರೂಪಾ.

ಗ್ರಾಮದ ಪಕ್ಕದಲ್ಲೇ ಕಬ್ಬಿಣದ ಅದಿರು ಗಣಿಗಾರಿಕೆ ನಡೆಯುತ್ತಿದೆ. ಗಣಿಯ ದೂಳು ಇಡೀ ಊರನ್ನು ಆವರಿಸಿಕೊಂಡಿದೆ. ಬಟ್ಟೆ ತೊಳೆಯಲು, ಸ್ನಾನ ಮಾಡಲು ಕೂಡ ನೀರಿನ ಕೊರತೆ ಎದುರಾಗಿದೆ. ಗ್ರಾಮಸ್ಥರ ಕೋರಿಕೆಗೆ ಮಣಿದು ಗಣಿ ಕಂಪೆನಿ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿತ್ತು. ಗಣಿಪ್ರದೇಶದ ಗುಂಡಿಯ ನೀರನ್ನು ಟ್ಯಾಂಕರ್‌ನಲ್ಲಿ ತಂದು ಸರಬರಾಜು ಮಾಡಲಾಗುತ್ತಿತ್ತು. ಈ ನೀರಿನಲ್ಲಿ ಸ್ನಾನ ಮಾಡಿದವರಿಗೆ ತುರಿಕೆ ಕಾಣಿಸಿಕೊಂಡಿತು. ಹೀಗಾಗಿ, ಈ ಟ್ಯಾಂಕರ್‌ಗಳು ಕೂಡ ನೀರು ಹೊತ್ತು ಬರುತ್ತಿಲ್ಲ.

ಗ್ರಾಮದ ಸುತ್ತಲಿನ ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಭರಮಸಾಗರ ಏತ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಗ್ರಾಮದ ಕೆರೆಗಳಿಗೆ ತುಂಗಭದ್ರಾ ನೀರು ಹರಿಯಲಿಲ್ಲ. ಹೊಸ ಕೊಳವೆಬಾವಿ ಕೊರೆಸುವುದಾಗಿ ಗ್ರಾಮ ಪಂಚಾಯಿತಿ ನೀಡಿದ ಆಶ್ವಾಸನೆ ಇನ್ನೂ ಈಡೇರಿಲ್ಲ. ಗ್ರಾಮದ ತೋಟಗಳ ಕೊಳವೆಬಾವಿಗಳಲ್ಲೂ ನೀರು ತಳ ಕಂಡಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಸಲು ಗ್ರಾಮ ಪಂಚಾಯಿತಿ ಮೀನ–ಮೇಷ ಎಣಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಜಾನುವಾರುಗಳ ಸ್ಥಿತಿ ಅಯೋಮಯ

ಮೇಗಳಹಳ್ಳಿಯ ಜನರು ಕೃಷಿ ಹಾಗೂ ಹೈನುಗಾರಿಕೆ ಅವಲಂಬಿಸಿದ್ದಾರೆ. ಸಮೀಪದ ಕೆರೆ ಹಳ್ಳಗಳಲ್ಲಿ ನೀರಿನ ಸೆಲೆ ಬತ್ತಿ ಹೋಗಿದೆ. ಇದರಿಂದಾಗಿ ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಿದೆ. ‘ಪ್ರತಿ ಮನೆಯಲ್ಲಿ ಎತ್ತು ಹಸು ಎಮ್ಮೆ ಕುರಿ ಮೇಕೆಗಳಿವೆ. ನೀರಿಗೆ ತತ್ವಾರ ಉಂಟಾಗಿರುವಾಗ ಜಾನುವಾರುಗಳ ದಾಹ ನೀಗಿಸುವುದು ಹೇಗೆ ಎಂಬುದು ತೋಚುತ್ತಿಲ್ಲ. ಅವುಗಳ ಸ್ಥಿತಿ ಅಯೋಮಯ ಎಂಬಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಅನುಕೂಲ’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗೋಕಟ್ಟೆ ಬದಿದಾದ ಪರಿಣಾಮವಾಗಿ ಕೊಳವೆಬಾವಿ ಬತ್ತಿದವು. ಹೊಸ ಕೊಳವೆಬಾವಿ ಕೊರೆಸುವ ಪ್ರಯತ್ನ ನಡೆಯುತ್ತಿದೆ. ಟ್ಯಾಂಕರ್‌ ನೀರು ಪೂರೈಸುವಂತೆ ಮನವಿ ಮಾಡಲಾಗಿದೆ.
-ಮಂಜುನಾಥ್‌, ಗ್ರಾಮ ಪಂಚಾಯಿತಿ ಸದಸ್ಯ ಮೇಗಳಹಳ್ಳಿ
ಪಕ್ಕದ ಊರಿನಿಂದ ನೀರು ಹೊತ್ತು ತರಲು ಕಷ್ಟವಾಗುತ್ತಿದೆ. ಕೈಕಾಲುಗಳಲ್ಲಿ ನೋವು ಕಾಣಿಸಿಕೊಂಡು ಆಯಾಸವಾಗುತ್ತಿದೆ. ಬಟ್ಟೆ ತೊಳೆಯಲು ಸ್ನಾನಕ್ಕೂ ತೊಂದರೆಯಾಗಿದೆ.
-ಶಾರದಮ್ಮ, ಮೇಗಳಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.