ADVERTISEMENT

ಮೋದಿ ಕನಸು ಸಾಕಾರಕ್ಕಾಗಿ ಸ್ವದೇಶಿ ಮೇಳ: ಗೋವಿಂದ ಕಾರಜೋಳ

ನ.12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:11 IST
Last Updated 2 ನವೆಂಬರ್ 2025, 7:11 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಚಿತ್ರದುರ್ಗ: ‘ಭಾರತ ಇಡೀ ವಿಶ್ವದಲ್ಲಿ ರಫ್ತು ರಾಷ್ಟ್ರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನಸು ಕಟ್ಟಿದ್ದಾರೆ. ಅದಕ್ಕಾಗಿ ಸ್ವದೇಶಿ ವಸ್ತುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ವಿವಿಧ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಮೋದಿ ಅವರ ಕನಸನ್ನು ಸಾಕಾರಗೊಳಿಸಲು ಸ್ವದೇಶಿ ಮೇಳದಂತಹ ಕಾರ್ಯಕ್ರಮ ಸಹಾಯಕವಾಗುತ್ತವೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

‘ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಲವು ನಾಯಕರು ದೇಶದಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಬೇಕು ಎಂದು ಕನಸು ಕಟ್ಟಿದ್ದರು. ಆದರೆ ಇಲ್ಲಿಯವರೆಗೂ ಆ ಕನಸು ನನಸಾಗಿರಲಿಲ್ಲ. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅವರ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳ ಜಾಗೃತಿ ಮೂಡಿಸುವ ಸಲುವಾಗಿ ನ.12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಸ್ವದೇಶಿ ಮೇಳ ನಡೆಯಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ದೇಶದಲ್ಲಿ ಸ್ವದೇಶಿ ಭಾವನೆ ಮೂಡಿಸುವ ಸಲುವಾಗಿ ಆತ್ಮ ನಿರ್ಭರ ಭಾರತ ಸೇರಿದಂತೆ ಹಲವು ಯೋಜನೆಗಳನ್ನು ಪ್ರಧಾನಿ ಜಾರಿಗೊಳಿಸಿದ್ದಾರೆ. ಅರ್ಥ ವ್ಯವಸ್ಥೆಯನ್ನು ಸುಧಾರಣೆ ಮಾಡಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಇಡೀ ವಿಶ್ವದಲ್ಲಿ ಹಿರಿಯಣ್ಣನ ಸ್ಥಾನಕ್ಕೆ ನಮ್ಮ ದೇಶ ಹೋಗುತ್ತಿದೆ. ಸ್ವದೇಶಿ ಮೇಳದ ಮೂಲಕ ಮೋದಿ ಅವರ ಕನಸಿಗೆ ಶಕ್ತಿ ತುಂಬಲಿದೆ’ ಎಂದರು.

ADVERTISEMENT

‘ಐತಿಹಾಸಿಕ ಚಿತ್ರದುರ್ಗದ ಗತ ವೈಭವ ಹೆಚ್ಚಿಸುವ ವಿವಿಧ ಕಾರ್ಯಕ್ರಮ ಸ್ವದೇಶಿ ಮೇಳದಲ್ಲಿ ನಡೆಯಲಿವೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಉದ್ಯಮಿಗಳಿಗೆ ಸ್ವದೇಶಿ ಮೇಳದಿಂದ ಅನುಕೂಲವಾಗಲಿದೆ. ದೇಶ, ರಾಜ್ಯದ ವಿವಿಧೆಡೆಯಿಂದ ಬರುವ ಸ್ವದೇಶಿ ವಸ್ತುಗಳ ಉತ್ಪಾದಕ ಕಂಪನಿಗಳು ಮಳಿಗೆ ತೆರೆಯಲಿವೆ. ಸ್ಥಳೀಯ ಉದ್ಯಮಿಗಳಿಗೂ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಮಾತನಾಡಿ ‘ಸ್ವದೇಶಿ ಮೇಳದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಂಸದ ಗೋವಿಂದ ಕಾರಜೋಳ, ಉಪಾಧ್ಯಕ್ಷರಾಗಿ ಮಾಜಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಮಾರ್ಗದರ್ಶನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌, ಜಿಲ್ಲೆಯ ಶಾಸಕರು ಸ್ವಾಗತ ಸಮಿತಿಯಲ್ಲಿ ಇದ್ದಾರೆ’ ಎಂದು ಹೇಳಿದರು.

‘ಪ್ರತಿ ಮನೆಮನೆಗೂ ಕರಪತ್ರ ಹಂಚುವ ಮೂಲಕ ಮೇಳಕ್ಕೆ ಆಹ್ವಾನ ನೀಡಲಾಗುತ್ತಿದೆ. 5 ದಿನ ನಡೆಯುವ ಮೇಳದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸುವರು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಾಗರಣ ಮಂಚ್‌ ಕರ್ನಾಟಕ ಪ್ರಾಂತ ಉಸ್ತುವಾರಿ ಜಗದೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮುಖಂಡರಾದ ಎ.ಮುರುಳಿ, ಹನುಮಂತೇಗೌಡ, ಸೌಭಾಗ್ಯ ಬಸವರಾಜನ್, ಎ.ಮುರಳಿ, ಕೋಗುಂಡೆ ದ್ಯಾಮಣ್ಣ, ಮಾಧುರಿ ಗಿರೀಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.