ಮಳೆ ಸುರಿದಾಗ ಚಿತ್ರದುರ್ಗದ ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡದ ನೀರು ಅಕ್ಕ–ತಂಗಿ ಹೊಂಡ ಸೇರುವುದು (ಸಂಗ್ರಹಚಿತ್ರ). ಚಿತ್ರದುರ್ಗದ ನೆಹರೂ ನಗರದಲ್ಲಿ ಐತಿಹಾಸಿಕ ಕಾಲುವೆಗೆ ಚರಂಡಿ ನೀರು ಸೇರಿರುವುದು
ಚಿತ್ರದುರ್ಗ: ನೂರಾರು ವರ್ಷಗಳ ಹಿಂದೆ ದುರ್ಗದ ಜನರಿಗಾಗಿ ಅರಸರು ವೈಜ್ಞಾನಿಕ ರೀತಿಯಲ್ಲಿ ಕಟ್ಟಿಸಿದ್ದ ನೀರಿನ ಕಾಲುವೆಗಳು ಈಗಲೂ ಜೀವಂತವಾಗಿವೆ. ಆದರೆ, ಈಗಿನ ಆಡಳಿತ ವ್ಯವಸ್ಥೆ ಕಾಲುವೆಗಳನ್ನು ಚರಂಡಿಗಳಾಗಿ ಪರಿವರ್ತಿಸಿದ್ದು, ಸುತ್ತಲಿನ ಕೆರೆಗಳು ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿವೆ.
ಕಲ್ಲಿನ ಕೋಟೆ, ಜೋಗಿಮಟ್ಟಿ ಗಿರಿಧಾಮ, ಆಡುಮಲ್ಲೇಶ್ವರ ಅರಣ್ಯಧಾಮ, ಚಂದ್ರವಳ್ಳಿ ಕೆರೆಯಿಂದ ಹರಿದು ಬರುವ ನೀರಿಗಾಗಿ ರಾಜರ ಕಾಲದಲ್ಲೇ ತೆರೆದ ಹಾಗೂ ಒಳಗಾಲುವೆ ನಿರ್ಮಿಸಲಾಗಿದೆ. ತಾಂತ್ರಿಕ ನೈಪುಣ್ಯತೆಯಿಂದ ನಿರ್ಮಿಸಿದ್ದ ಕಾಲುವೆಗಳಿಗೆ ನಗರಸಭೆ ಈಗ ಚರಂಡಿ ನೀರಿನ ಸಂಪರ್ಕ ಕಲ್ಪಿಸಿದೆ.
ಪಾಳೇಗಾರರಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ನೀರಾವರಿಗೆ ಪ್ರಮುಖ ಆದ್ಯತೆ ನೀಡಿದ್ದರು. ಅವರ ಕಾಲದಲ್ಲೇ ದುರ್ಗದ ವಿವಿಧೆಡೆ ಕೆರೆ, ಹೊಂಡ ಹಾಗೂ ಕಾಲುವೆಗಳು ನಿರ್ಮಾಣವಾದವು ಎಂದು ಇತಿಹಾಸಕಾರರು ಹೇಳುತ್ತಾರೆ. ಮೇಲುದುರ್ಗದ ಜನರಿಗಾಗಿ ಗೋಪಾಲಸ್ವಾಮಿ ಹೊಂಡ, ಅಕ್ಕ–ತಂಗಿ ಹೊಂಡ ನಿರ್ಮಾಣ ಮಾಡಲಾಗಿತ್ತು. ಕೋಟೆಯ ಕೆಳಭಾಗದಲ್ಲಿ (ಕೆಳಗೋಟೆ) ವಾಸಿಸುವವರಿಗೆ ಸಿಹಿನೀರಿನ ಹೊಂಡ, ಸಂತೆ ಹೊಂಡ, ಕೆಂಚಮಲ್ಲನಬಾವಿ, ಚನ್ನಕೇಶವ ಹೊಂಡ, ವೆಂಕಟರಮಣ ದೇವಾಲಯದ ಬಳಿಯ ಹೊಂಡ ನಿರ್ಮಾಣ ಮಾಡಿದ್ದರು.
ರೈತರು ಕೃಷಿ ಮಾಡಲು ಭರಮಣ್ಣನಾಯಕನ ಕೆರೆ, ಮಲ್ಲಾಪುರ ಕೆರೆ, ಗೋನೂರು ಕೆರೆ, ಬರಗೇರಿ ಹೀಗೆ ಮುಂತಾದ ಕೆರೆಗಳಿದ್ದವು. ಜೊತೆಗೆ ಕನ್ನಡದ ಮೊದಲ ದೊರೆ ಕದಂಬರ ಮಯೂರ ವರ್ಮ ಕಟ್ಟಿಸಿದ್ದಾನೆ ಎನ್ನಲಾದ ಚಂದ್ರವಳ್ಳಿ ಕೆರೆಯೂ ದುರ್ಗದ ಜನರಿಗೆ ಸಂಜೀವಿನಿಯಾಗಿತ್ತು. ಈ ಹೊಂಡ, ಕೆರೆಗಳ ನೀರು ಹರಿದು ಹೋಗಲು ವೈಜ್ಞಾನಿಕ ರೀತಿಯಲ್ಲಿ ಹರಿಗಾಲುವೆಗಳನ್ನು ನಿರ್ಮಾಣ ಮಾಡಲಾಗಿತ್ತು.
ರಾಜರು ಕಟ್ಟಿಸಿದ್ದ ಒಳಗಾಲುವೆ ಹಾಗೂ ತೆರೆದ ಕಾಲುವೆಗಳಲ್ಲಿ ಈಗ ನಗರದ ಜನವಸತಿ ಪ್ರದೇಶಗಳ ತ್ಯಾಜ್ಯ ಹರಿಯುತ್ತಿದೆ. ತ್ಯಾಜ್ಯದ ಹರಿವು ನಗರದ ಹೊರವಲಯದಲ್ಲಿರುವ ಮಲ್ಲಾಪುರ ಕೆರೆ ಸೇರುತ್ತಿದ್ದು, ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಸಂಸ್ಕರಣೆ ಇಲ್ಲದೆ ಕೊಳಚೆ ನೀರು ಕೆರೆ ಸೇರುತ್ತಿರುವ ಕಾರಣ ಮೀನು ಹಾಗೂ ಇತರ ಜಲಚರಗಳ ಮಾರಣಹೋಮವೂ ನಡೆದಿದೆ. ಮಲ್ಲಾಪುರ ಕೆರೆ ಮಾತ್ರವಲ್ಲದೇ ಗೋನೂರು ಕೆರೆಯ ಸಾಲಿನಲ್ಲಿ ಬರುವ ಎಲ್ಲಾ ಕೆರೆಗಳಿಗೂ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡಿದೆ.
ಮಳೆಗಾಲದಲ್ಲಿ ಕೋಟೆಯ ಮೇಲಿನ ಗೋಪಾಲಸ್ವಾಮಿ ಹೊಂಡದ ನೀರು ಅಕ್ಕ–ತಂಗಿ ಹೊಂಡ, ತಣ್ಣೀರು ದೋಣಿ, ಒನಕೆ ಓಬವ್ವನ ಕಿಂಡಿ ಮೂಲಕ ಹರಿದು ಬುರುಜನಹಟ್ಟಿಯ ಸಿಹಿನೀರಿನ ಹೊಂಡ ಸೇರುತ್ತದೆ. ಅಲ್ಲಿಂದ ಒಳಗಾಲುವೆ ಮೂಲಕ ನೀರು ಹೊಳಲ್ಕೆರೆ ರಸ್ತೆ, ರವಿ ನರ್ಸಿಂಗ್ ಹೋಂ, ಗಾಂಧಿವೃತ್ತದ ಮೂಲಕ ಹರಿದು ಸಂತೆ ಹೊಂಡ ಸೇರುತ್ತದೆ.
ಸಂತೆ ಹೊಂಡ ಭರ್ತಿಯಾದಾಗ ಪ್ರಸನ್ನ ಟಾಕೀಸ್ ಹಿಂಭಾಗದ ಕಾಲುವೆ, ರೀಜನಲ್ ಶಾಲೆ ಮಾರ್ಗ, ವೆಂಕಟೇಶ್ವರ ಚಿತ್ರಮಂದಿರ, ರಾಮದಾಸ್ ಕಾಂಪೌಂಡ್, ಆದರ್ಶ ಕಲ್ಯಾಣ ಮಂಟಪದ ಮೂಲಕ ಮಲ್ಲಾಪುರ ಕೆರೆ ಸೇರುತ್ತದೆ. ನೂರಾರು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಾಲುವೆಗಳು ಈಗಲೂ ಜೀವಂತವಾಗಿವೆ. ಆದರೆ ಈ ಮಾರ್ಗದಲ್ಲಿ ಕೊಳಚೆ ನೀರು ಹರಿಯುತ್ತಿರುವ ಕಾರಣ ಸುತ್ತಲಿನ ಜಲಮೂಲಗಳು ಹಾಳಾಗುವಂತಾಗಿದೆ.
ಚಂದ್ರವಳ್ಳಿ ಕೆರೆಯ ಮೂಲಕ ಹರಿದು ಬರುವ ನೀರು ತೆರೆದ ಕಾಲುವೆಯಲ್ಲೇ ಮುಂದೆ ಸಾಗಿ ಬರಗೇರಿ ಕೆರೆಗೆ ಸೇರುತ್ತದೆ. ಬರಗೇರಿ ಕೆರೆ ದಶಕದ ಹಿಂದೆಯೂ ಜೀವಂತವಾಗಿತ್ತು, ನೀರಿನಿಂದ ತುಂಬಿತ್ತು. ಆದರೆ ಈಗ ಇದು ಸಂಪೂರ್ಣವಾಗಿ ಮಾಯವಾಗಿದ್ದು ಆ ಜಾಗದಲ್ಲಿ ಖಾಸಗಿ ಲೇಔಟ್ ತಲೆ ಎತ್ತಿದೆ. ಹೀಗಾಗಿ ರಾಜರು ಕಟ್ಟಿಸಿದ ನೀರಿನ ಹರಿವಿನ ಕಾಲುವೆ ದಿಕ್ಕುತಪ್ಪಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ನಗರ ಬೆಳೆದಂತೆಲ್ಲಾ ನಗರಸಭೆ ಆಡಳಿತ ಪ್ರತ್ಯೇಕವಾದ ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡಬೇಕಾಗಿತ್ತು. ಆದರೆ ಐತಿಹಾಸಿಕ ಕಾಲುವೆಗಳನ್ನೇ ಚರಂಡಿ ಮಾಡಿಕೊಂಡ ಕಾರಣ ಇಂದು ಮಲ್ಲಾಪುರ ಮಾರ್ಗದ ಸಾಲು ಕೆರೆಗಳು ಕಲುಷಿತಗೊಂಡಿವೆ. ಈಗಲಾದರೂ ಪಾಳೇಗಾರರು ಕಟ್ಟಿಸಿದ್ದ ಐತಿಹಾಸಿಕ ಒಳಗಾಲುವೆ, ತೆರೆದ ಕಾಲುವೆಗಳನ್ನು ಸಂರಕ್ಷಿಸಬೇಕು’ ಎಂದು ನಗರದ ಉಪನ್ಯಾಸಕ ಎಸ್.ಮಂಜುನಾಥ್ ಒತ್ತಾಯಿಸಿದರು.
ಚಿತ್ರದುರ್ಗದ ನೆಹರೂ ನಗರದಲ್ಲಿ ಐತಿಹಾಸಿಕ ಕಾಲುವೆಗೆ ಚರಂಡಿ ನೀರು ಸೇರಿರುವುದು
ಕಾಲುವೆ ಮೇಲೆ ಪ್ರಭಾವಿಗಳ ಕಟ್ಟಡ
ನೂರಾರು ವರ್ಷಗಳ ಹಿಂದೆ ರಾಜರು ಕಟ್ಟಿಸಿರುವ ನೀರಿನ ಹರಿಗಾಲುವೆಗಳ ಮೇಲೆ ಪ್ರಭಾವಿಗಳು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಐತಿಹಾಸಿಕ ಕಾಲುವೆ ಹರಿವಿನ ಹಾದಿಯಲ್ಲಿ ತೆರಳಿದರೆ ವಾಣಿಜ್ಯ ಮಳಿಗೆಗಳು, ಶಾಲೆ, ಹೋಟೆಲ್, ಆಸ್ಪತ್ರೆ, ಲ್ಯಾಬ್ ಮುಂತಾದ ಕಟ್ಟಡಗಳು ಇರುವುದು ಪತ್ತೆಯಾಗುತ್ತದೆ. ಕಾಲುವೆ ಮೇಲೆ ಕಟ್ಟಡ ಕಟ್ಟಿರುವುದು ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿದ್ದರೂ ಅವುಗಳನ್ನು ತೆರವುಗೊಳಿಸುವ ಧೈರ್ಯ ತೋರುತ್ತಿಲ್ಲ.
ವಿವಿಧೆಡೆ ಕಾಲುವೆಗಳ ಮೇಲೆಯೇ ಮನೆ ಕಟ್ಟಿಕೊಂಡಿದ್ದಾರೆ. ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆಗಳಿಗೆ ಸೇರುತ್ತದೆ. ಮನೆ ಮಾಲೀಕರೇ ಪೈಪ್ ಹಾಕಿಕೊಂಡು ಕಾಲುವೆಗೆ ತ್ಯಾಜ್ಯ ಹರಿಸುತ್ತಿದ್ದಾರೆ. ಒಟ್ಟಾರೆ ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು ಐತಿಹಾಸಿಕ ಕಾಲುವೆಗಳನ್ನು ಹಾಳು ಮಾಡಲಾಗುತ್ತಿದೆ.
‘ಪ್ರಭಾವಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜರು ಕಟ್ಟಿಸಿದ್ದ ಕಾಲುವೆ ಜಾಗವನ್ನು ಕಬಳಿಸಿದ್ದಾರೆ. ನಗರದ ಸುತ್ತಲಿನ ಕೆರೆಗಳು ಸ್ವಚ್ಛಗೊಳ್ಳಬೇಕಾದರೆ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದು ಸ್ಥಳೀಯರಾದ ರಾಜೇಂದ್ರ ಒತ್ತಾಯಿಸಿದರು.
ಒನಕೆ ಓಬವ್ವನ ಕಿಂಡಿ ಮೂಲಕ ಮಳೆ ನೀರು ಹರಿಯುತ್ತಿರುವುದು (ಸಂಗ್ರಹ ಚಿತ್ರ)
ಚರಂಡಿ ನೀರಿನ 3 ಸಂಗ್ರಹಾಗಾರದಲ್ಲಿ 1 ಮಾತ್ರ ಚೆನ್ನಾಗಿದ್ದು, 2 ಹಾಳಾಗಿವೆ. ಹೀಗಾಗಿ ಕೊಳಚೆ ನೀರಿನ ಸಂಪರ್ಕ ಕಡಿತಗೊಂಡಿದೆ. ಅವುಗಳನ್ನುಈಗ ಸರಿಪಡಿಸಲಾಗುತ್ತಿದ್ದು ಮಲ್ಲಾಪುರ ಕೆರೆಗೆ ಕೊಳಚೆ ಸೇರದಂತೆ ತಡೆಯಲಾಗುವುದುಎಂ.ರೇಣುಕಾ, ನಗರಸಭೆ ಪೌರಾಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.