ಚಿತ್ರದುರ್ಗ: ‘ವಾಲ್ಮೀಕಿ ರಾಮಾಯಣ ಮಾನವ ಬದುಕಿನ ವಿಕಾಸದ ಚರಿತ್ರೆಯಾಗಿದೆ. ಆ ಕಾರಣಕ್ಕೆ ಮೌಖಿಕ ಮತ್ತು ಶಿಷ್ಟವಾಗಿ ಅದರ ವೇಗವು ಹೆಚ್ಚಿದೆ. ರಾಮನ ಬದಲಾಗಿ ವಾಲ್ಮೀಕಿಯ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬೇಕು’ ಎಂದು ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಾಲ್ಮೀಕಿ ರಾಮಾಯಣ ಜಗತ್ತಿನ ಸಾಮಾಜಿಕ ಪಠ್ಯ. ಇದರಲ್ಲಿರುವ ಎಲ್ಲ ಅಂಶಗಳನ್ನು ಪರಿಶೀಲಿಸುವ ಮೂಲಕ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.
‘ಮಹರ್ಷಿ ವಾಲ್ಮೀಕಿ ಕುರಿತು ಹೆಚ್ಚು ಅಧ್ಯಯನದ ಅಗತ್ಯವಿದೆ. ಪ್ರತಿಯೊಬ್ಬರು ವಾಲ್ಮೀಕಿ ಬೋಧಿಸಿದ ಉಪದೇಶಗಳನ್ನು ಪರಿಪಾಲಿಸಿದರೆ ಕುಟುಂಬ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ’ ಎಂದರು.
‘ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಮೂಲಕ ಸಾದರ ಪಡಿಸಿದ ಆದರ್ಶಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಕೊಳ್ಳಬೇಕು. ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ತತ್ವವನ್ನು ಮಹಾಕಾವ್ಯದ ಮೂಲಕ ವಿಶ್ವಕ್ಕೆ ಸಾರಿದ ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿ, ಅರಿವಿನ ಮಾರ್ಗದಲ್ಲಿ ಸಾಗಿದೆ’ ಎಂದು ಹೇಳಿದರು.
‘ಮಾನವೀಯತೆ, ಐಕ್ಯತೆ ಸಂಕೇತವಾಗಿದ್ದ ವಾಲ್ಮೀಕಿ ಈಗ ಎಂಥವನಾಗಿರಬೇಕು ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. ಸಾಂಸ್ಕೃತಿಕ ರಾಜಕಾರಣದ ಸಂಕಥನದ ಬೀಜ ರಾಮಾಯಣದಲ್ಲಿ ಇವೆ. ಗ್ರೀಕ್ ಮಹಾಕವಿ ಸಹ ವಾಲ್ಮೀಕಿಯ ಹಾಗೆ ಇದ್ದ ಎಂಬ ಮೌಖಿಕ ಕಾವ್ಯಗಳು ಹೇಳುತ್ತವೆ’ ಎಂದು ಐಕ್ಯೂಎಸಿ ಸಂಚಾಲಕಿ ಪ್ರೊ.ತಾರಿಣಿ ಶುಭದಾಯಿನಿ ತಿಳಿಸಿದರು.
‘ರಾಮಾಯಣದಲ್ಲಿ ಹಲವು ಬುಡಕಟ್ಟಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯ ಪರಂಪರೆ ಇದೆ. ಮನುಕುಲದ ಚರಿತ್ರೆ ಕುರಿತು ಗಂಭೀರವಾಗಿ ಚಿಂತನೆ ಮಾಡಿದ್ದು ವಾಲ್ಮೀಕಿ’ ಎಂದು ಹೇಳಿದರು.
‘ಸಂಸ್ಕೃತದ ಕವಿ ಪಾಣಿನಿಯ ಅಷ್ಟಾಧ್ಯಾಯಿ ಕೃತಿಯ ನಂತರ ವಾಲ್ಮೀಕಿ ಮಹಾಕಾವ್ಯ ರಚನೆಯಾಗಿದೆ. ಭಾರತದ ಆಚೆಗೂ ವಾಲ್ಮೀಕಿ ಕಾವ್ಯ ವಿಸ್ತರಿಸಿಕೊಂಡು, 300ಕ್ಕೂ ಹೆಚ್ಚು ಮುದ್ರಣಗೊಂಡಿದೆ’ ಎಂದು ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ.ಬಿ.ಸುರೇಶ್ ತಿಳಿಸಿದರು.
ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ.ಹನುಮಂತಪ್ಪ, ಮೇಲ್ವಿಚಾರಕ ರಂಗನಾಥ, ಪ್ರಾಧ್ಯಾಪಕರಾದ ಪ್ರೊ.ಮಂಜುನಾಥ, ಪ್ರೊ.ಸೌಮ್ಯಾ, ಪ್ರೊ.ಸಲ್ಮಾ ಇದ್ದರು.
ಸಾಮಾಜಿಕ ಪಠ್ಯವಾಗಿರುವ ರಾಮಾಯಣದ ಪ್ರತಿ ಅಂಶಗಳನ್ನು ವಿಸ್ತೃತ ರೂಪದಲ್ಲಿ ಅರ್ಥೈಸಿಕೊಳ್ಳಬೇಕು. ಆಗ ಮಾತ್ರ ಅದರ ಸಾರ ತಿಳಿಯುತ್ತದೆ.ಜೆ.ಕರಿಯಪ್ಪ ಮಾಳಿಗೆ ಪ್ರಾಂಶುಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.