ADVERTISEMENT

ಚಿತ್ರದುರ್ಗ| ಸಾವಿರಾರು ರಾಮಾಯಣ ರಚನೆಗೆ ವಾಲ್ಮೀಕಿ ಪ್ರೇರಣೆ: ಡಿ.ಸುಧಾಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 6:05 IST
Last Updated 8 ಅಕ್ಟೋಬರ್ 2025, 6:05 IST
ವಾಲ್ಮೀಕಿ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎ.ತಿಪ್ಪೇಸ್ವಾಮಿ, ಎಂ.ತಿಪ್ಪೇಸ್ವಾಮಿ, ಎಚ್‌.ತಿಪ್ಪಯ್ಯ, ಪಿ.ತಿಪ್ಪೇಸ್ವಾಮಿ, ಎನ್‌.ಸುಮಾ ಅವರಿಗೆ ಮಹರ್ಷಿ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು
ವಾಲ್ಮೀಕಿ ಭವನದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎ.ತಿಪ್ಪೇಸ್ವಾಮಿ, ಎಂ.ತಿಪ್ಪೇಸ್ವಾಮಿ, ಎಚ್‌.ತಿಪ್ಪಯ್ಯ, ಪಿ.ತಿಪ್ಪೇಸ್ವಾಮಿ, ಎನ್‌.ಸುಮಾ ಅವರಿಗೆ ಮಹರ್ಷಿ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಚಿತ್ರದುರ್ಗ: ‘ಜಗತ್ತಿನಾದ್ಯಂತ 6,000ಕ್ಕೂ ಹೆಚ್ಚು ರಾಮಾಯಣ ಮಹಾಕಾವ್ಯಗಳು ರಚನೆಯಾಗಿದ್ದು ಇದಕ್ಕೆ ವಾಲ್ಮೀಕಿ ರಾಮಾಯಣ ಪ್ರೇರಣೆಯಾಗಿದೆ. ಭಾರತೀಯ ಭಾಷೆಗಳು ಮಾತ್ರವಲ್ಲದೇ ಜರ್ಮನ್, ಇಟಲಿ, ಪ್ರೆಂಚ್, ಇಂಗ್ಲಿಷ್ ಮುಂತಾದ ಭಾಷೆಗಳಲ್ಲೂ ರಾಮಾಯಣ ರಚಿತವಾಗಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ತಿಳಿಸಿದರು. 

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

‘ರಾಮಾಯಣ ಮಹಾಕಾವ್ಯದ ಮೂಲಕ ವಾಲ್ಮೀಕಿ ಮಹಾಕವಿಯು ಇಡೀ ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ಸಂದೇಶ ನೀಡಿದ್ದಾರೆ. ವಾಲ್ಮೀಕಿ ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ ಕಾಣುತ್ತಾರೆ. ಇವರ ಜೀವನವೇ ಪ್ರಗತಿಯ ಹಾದಿಯಲ್ಲಿ ಹಾಗೂ ಅರಿವಿನ ಮಾರ್ಗದಲ್ಲಿ ಸಾಗಿದೆ’ ಎಂದರು.

ADVERTISEMENT

‘ಪುರಾಣ ಪುರುಷ ಬೇಡರ ಕಣ್ಣಪ್ಪನು ಶಿವನಿಗೆ ಕಣ್ಣುಗಳನ್ನು ನೀಡಿದ ಮಹಾನ್ ವ್ಯಕ್ತಿ. ತನ್ನ ಹೆಬ್ಬೆರಳನ್ನೇ ಗುರುಕಾಣಿಕೆಯಾಗಿ ದ್ರೋಣಾಚಾರ್ಯನಿಗೆ ನೀಡಿದ ಅಮಾಯಕ ಬೇಡ ಯುವಕ ಏಕಲವ್ಯ, ಶ್ರೀರಾಮನಿಗಾಗಿ ಕಾದು ಕುಳಿತು ಹಣ್ಣುಗಳನ್ನು ನೀಡಿದ ಮುಗ್ಧೆ ಶಬರಿ. ಅಷ್ಟೇ ಅಲ್ಲ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಬೇಡ ಜನಾಂಗದ ಕೊಡುಗೆ ಸ್ಮರಣೀಯ. ಮೌರ್ಯರ ಕಾಲದಿಂದ ವಿಜಯನಗರ ಕಾಲದವರೆಗೆ ಬೇಡರು ರಕ್ಷಣಾಕಾರ್ಯದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದರು’ ಎಂದರು. 

‘ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಂಡ ಕತೆಗಳು ಇತಿಹಾಸದಲ್ಲಿವೆ. ಇದು ಬೇಡರ ಚರಿತ್ರೆಯೇ ಆಗಿದೆ. ಚಿತ್ರದುರ್ಗ, ತರೀಕೆರೆ, ಸುರಪುರ ಉಮ್ಮತ್ತೂರು ಭಾಗದ ಪಾಳೇಗಾರರು ಜನಪರವಾಗಿ ಮಾಡಿದ ಕೆಲಸ-ಕಾರ್ಯಗಳು ಸ್ಮರಣೀಯವಾಗಿವೆ. ಗುರುಮಠಗಳೊಂದಿಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದರು. 

‘ಚಿತ್ರದುರ್ಗವನ್ನಾಳಿದ ಮತ್ತಿ ತಿಮ್ಮಣ್ಣನಾಯಕ ಮುರುಘಾ ಮಠದ ಶ್ರೀಗಳನ್ನು ತನ್ನ ಭಕ್ತಿಯಿಂದ ನೆಲೆನಿಲ್ಲುವಂತೆ ಮಾಡಿದ. ರಾಜಾ ಬಿಚ್ಚುಗತ್ತಿ ಭರಮಪ್ಪನಾಯಕ, ಹಿರೇಮದಕರಿನಾಯಕ, ದುರ್ಗ ಮರೆಯಲಾಗದ ರಾಜವೀರ ಮದಕರಿನಾಯಕ, ಕಂಪಿಲೆಯ ಕಂಪಿಲೆರಾಯ, ವಿಜಯನಗರದ ಎಚ್.ಎಂ.ನಾಯಕ ಇಂದಿಗೂ ಸ್ಮರಣೀಯವಾಗಿದ್ದಾರೆ’ ಎಂದರು. 

ಸಹಾಯಕ ಪ್ರಾಧ್ಯಾಪಕ ಓಬಣ್ಣ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮುದ್ದಾಪುರ ಹೊಸಹಟ್ಟಿಯ ಪಿ.ತಿಪ್ಪೇಸ್ವಾಮಿ, ಲಿಂಗವ್ವನಾಗ್ತಿಹಳ್ಳಿಯ ಎಂ.ತಿಪ್ಪೇಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನೌಕರ ಹಿರಿಯೂರು ತಾಲ್ಲೂಕಿನ ಗುಯಿಲಾಳು ಗ್ರಾಮದ ಎಚ್.ತಿಪ್ಪಯ್ಯ, ಚಿತ್ರದುರ್ಗ ನಗರಸಭೆಯ ಪ್ರಥಮ ಉಪಾಧ್ಯಕ್ಷೆಯಾಗಿದ್ದ ಎನ್.ಸುಮಾ, ಜೋಡಿಚಿಕ್ಕೇನಹಳ್ಳಿಯ ಗೊಲ್ಲರಹಟ್ಟಿಯ ಎ.ತಿಪ್ಪೇಸ್ವಾಮಿ ಅವರಿಗೆ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದಿಂದ ಸನ್ಮಾನಿಸಲಾಯಿತು. 

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮುದಾಯಕ್ಕೆ 5 ಎಕರೆ ಜಮೀನು ಹಾಗೂ ವಾಲ್ಮೀಕಿ ಭವನಕ್ಕೆ ₹50 ಲಕ್ಷ ಅನುದಾನ ನೀಡುವಂತೆ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು. 

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ, ಉಪಾಧ್ಯಕ್ಷೆ ಶಕೀಲಾಭಾನು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ‘ಜಿಲ್ಲಾ ನಾಯಕ ಸಮಾಜ’ದ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಇದ್ದರು. 

ಅದ್ಧೂರಿ ಮೆರವಣಿಗೆ: ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಭಾವಚಿತ್ರ, ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿಯಾಗಿ ನಡೆಯಿತು. ಐತಿಹಾಸಿಕ ಕೋಟೆ ಮುಂಭಾಗದಲ್ಲಿ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಚಾಲನೆ ನೀಡಿದರು. 

ಕೋಟೆ ಮುಂಭಾಗದಿಂದ ಏಕನಾಥೇಶ್ವರಿ ದೇವಸ್ಥಾನ, ಉಚ್ಚಂಗಿ ಯಲ್ಲಮ್ಮ, ಆನೆಬಾಗಿಲು, ಗಾಂಧಿವೃತ್ತ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತ ಮೂಲಕ ವೇದಿಕೆ ತಲುಪಿತು.

ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯಲ್ಲಿ ಸಾರ್ವಜನಿಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಥೀಮ್‌ಪಾರ್ಕ್‌ಗೆ ಭೂಮಿ ಕೊಡಿ
ನವೀನ್‌ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ‘ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವರು ಘೋಷಣೆ ಮಾಡಿದ್ದರು. ಜಿಲ್ಲಾಡಳಿತ 30 ಎಕರೆ ಜಾಗ ನೀಡಿದರೆ ಥೀಮ್ ಪಾರ್ಕ್ ಜೊತೆಗೆ ಬೃಹತ್ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಮದಕರಿ ನಾಯಕರು ಹಾಗೂ ವಾಲ್ಮೀಕಿಯ ಶ್ರೇಯವನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ’ ಎಂದರು. ‘ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ವಾಲ್ಮೀಕಿ ನಾಯಕ ಜನಸಂಖ್ಯೆ ಇರುವುದರಿಂದ ರಾಜ್ಯಮಟ್ಟದ ವಾಲ್ಮೀಕಿ ಜಯಂತಿಯನ್ನು ಇಲ್ಲಿಯೇ ಆಚರಿಸುವಂತಾಗಬೇಕು. ರಾಮಾಯಣ ಮಹಾಕಾವ್ಯವು ಮನುಷ್ಯ ಸಂಬಂಧದ ಬಗ್ಗೆ ಅಡಿಪಾಯ ಹಾಕಿಕೊಟ್ಟಿದೆ. ಮಾದರಿ ಸಮಾಜ ನಿರ್ಮಾಣ ಹೇಗೆ ಆಗಬೇಕು ಎಂಬ ಕಲ್ಪನೆಯನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದೆ. ವಾಲ್ಮೀಕಿಯವರ ವಿಚಾರ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.