ADVERTISEMENT

Womens Day: ಅನಕ್ಷರಸ್ಥರಿಗೆ ಅಕ್ಷರ ಗುರುವಾದ ಲಕ್ಷ್ಮಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 8 ಮಾರ್ಚ್ 2024, 6:41 IST
Last Updated 8 ಮಾರ್ಚ್ 2024, 6:41 IST
ಲಕ್ಷ್ಮಿ
ಲಕ್ಷ್ಮಿ   

ಮೊಳಕಾಲ್ಮುರು: ಹೆಚ್ಚು ಓದದಿದ್ದರೂ, ತಿಳಿದಿರುವ ಜ್ಞಾನವನ್ನೇ ಇತರರಿಗೆ ಹಂಚುವ ಜತೆಗೆ ಅವರ ಜೀವನೋಪಾಯಕ್ಕೂ ನೆರವು ನೀಡುವ ಮೂಲಕ ತಾಲ್ಲೂಕಿನ ನಾಗಸಮುದ್ರ ಗ್ರಾಮದ ಲಕ್ಷ್ಮಿ ಕೃಷ್ಣಪ್ಪ ಮಾದರಿ ಮಹಿಳೆ ಎನಿಸಿದ್ದಾರೆ. 

ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ನಾಗಸಮುದ್ರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಕುಗ್ರಾಮ. ಈ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ಲಕ್ಷ್ಮಿ ಕೃಷ್ಣಪ್ಪ ಅವರು ಓದಿರುವುದು 8ನೇ ತರಗತಿಯಾದರೂ, ವಯಸ್ಕರಿಗೆ ಶಿಕ್ಷಣ ನೀಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. 15 ಹೆಚ್ಚು ವರ್ಷಗಳಿಂದ ಮೊಳಕಾಲ್ಮುರಿನ ಜನಸಂಸ್ಥಾನ ಸಂಸ್ಥೆಯ ಜತೆಯಲ್ಲಿ ಕೇಂದ್ರ ಸರ್ಕಾರದ ‘ಸಾಕ್ಷರ ಭಾರತ್’ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯವನ್ನು ಉಚಿತವಾಗಿ ಮಾಡುತ್ತಿರುವುದು ವಿಶೇಷ.

ಗುಂಪು ಚಟುವಟಿಕೆಗಳ ಮೂಲಕ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳ ಸಾವಿರಕ್ಕೂ ಹೆಚ್ಚು ಜನರಿಗೆ ಅಕ್ಷರ ಅಭ್ಯಾಸ ಮಾಡಿಸಿರುವ ಲಕ್ಷ್ಮಿ ಮಾದರಿಯಾಗಿದ್ದಾರೆ. ನವಸಾಕ್ಷರ ಯೋಜನೆಯಡಿ ಅಕ್ಷರ ಕಲಿತವರಿಗೆ ಕೌಶಲ ತರಬೇತಿಯನ್ನೂ ನೀಡಿ, ಅವರ ಜೀವನೋಪಾಯಕ್ಕೆ ದಾರಿ ಮಾಡುಕೊಡುವ ಉದ್ದೇಶ ಸರ್ಕಾರದ್ದು. ಅಕ್ಷರ ಕಲಿಸಿದ ಲಕ್ಷ್ಮಿ ಅವರು, ಗೌರವಧನ ಪಡೆದು, ಕೌಶಲ ತರಬೇತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಟೈಲರಿಂಗ್ ಹಾಗೂ ಸಂಬಂಧಿತ ಕಲೆಗಳ ತರಬೇತಿಯನ್ನೂ ನೀಡುತ್ತಿದ್ದಾರೆ. ನೂರಾರು ಯುವತಿಯರು, ಮಹಿಳೆಯರು ಜೀವನ ಕಟ್ಟಿಕೊಳ್ಳಲು ನೆರವಾಗಿದ್ದಾರೆ. 

ADVERTISEMENT

‘ನಾನು 16ನೇ ವರ್ಷಕ್ಕೆ ಟೈಲರಿಂಗ್ ಕಲಿತೆ. ಸರ್ಕಾರದ ಯೋಜನೆಯಡಿ, ಕಳೆದ 15 ವರ್ಷಗಳಿಂದ ಗ್ರಾಮದ ಯುವತಿಯರು, ಮಹಿಳೆಯರಿಗೆ ಟೈಲರಿಂಗ್ ಕಲಿಸುತ್ತಿದ್ದೇನೆ. ಟೈಲರಿಂಗ್ ತರಬೇತಿ ನೀಡಿದ್ದಕ್ಕೆ ಸರ್ಕಾರ ಅಲ್ಪ ಗೌರವಧನ ನೀಡಿದೆ. ಖಾಸಗಿಯಾಗಿ ಬಂದು ಕಲಿಯುವವರಿಗೆ ಪ್ರತಿ ತಿಂಗಳು ಆರಂಭದಲ್ಲಿ ₹50 ಶುಲ್ಕ ಪಡೆಯುತ್ತಿದ್ದೆ. ಈಗ ಸಾಮಗ್ರಿಗಳ ದರ ಹೆಚ್ಚಿರುವ ಕಾರಣ ಸ್ವಲ್ಪ ಹೆಚ್ಚಳ ಮಾಡಿದ್ದೇನೆ. ಆದರೆ ಯಾರಿಗೂ ಇಷ್ಟೇ ಕೊಡಬೇಕು ಎಂದು ಷರತ್ತು ವಿಧಿಸುವುದಿಲ್ಲ’ ಎಂದು ಎಂದು ಲಕ್ಷ್ಮಿ ಹೇಳುತ್ತಾರೆ. 

ಟೈಲರಿಂಗ್ ತರಬೇತಿ ನೀಡುತ್ತಿರುವ ಲಕ್ಷ್ಮಿ
ಟೈಲರಿಂಗ್ ತರಬೇತಿ ನೀಡುತ್ತಿರುವ ಲಕ್ಷ್ಮಿ
ನ್ನ ಕಷ್ಟದಲ್ಲೂ ಇನ್ನೊಬ್ಬರ ಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದನೆ ಮಾಡಿದ್ದನ್ನು ನಾನು ಕಂಡಿದ್ದೇನೆ. ಅಕ್ಷರ ಕಲಿಸುವ ಜತೆಗೆ ಜೀವನ ಪಾಠ ಕೇಳಿಕೊಟ್ಟಿರುವ ಲಕ್ಷ್ಮಿ ಅಭಿನಂದನಾರ್ಹರು
ವಿರೂಪಾಕ್ಷಪ್ಪ ಜನಸಂಸ್ಥಾನ ಸಂಸ್ಥೆ ಅಧ್ಯಕ್ಷ
ಕಾಲ ಬದಲಾದಂತೆ ಟೈಲರಿಂಗ್ ಕ್ಷೇತ್ರದಲ್ಲೂ ಬದಲಾವಣೆಯಾಗಿವೆ. ಟೈಲರಿಂಗ್ ಜತೆಯಲ್ಲಿ ಬ್ಯಾಗ್ ಹೊಲಿಯುವುದು ಜಿಗ್-ಜಾಗ್ ಕಸೂತಿ ಹಾಕುವುದು ಕೈಯಿಂದ ಕಸೂತಿ ಹಾಕುವುದನ್ನೂ ಕಲಿಸಿಕೊಡುತ್ತಿದ್ದೇನೆ. ನೂರಾರು ಜನರು ನನ್ನ ಬಳಿ ಕಲಿತವರು ಉತ್ತಮ ಜೀವನ ಕಟ್ಟಿಕೊಂಡು ನೆಮ್ಮದಿಯಿಂದ ಇದ್ದಾರೆ. ಇದು ನನಗೆ ಹೆಮ್ಮೆ ಸಂಗತಿ
ಲಕ್ಷ್ಮಿ ಕೃಷ್ಣಪ್ಪ ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.