ADVERTISEMENT

20 ವರ್ಷಗಳ ಹಿಂದಿನ ಕಳವು ಪ್ರಕರಣದ ಆರೋಪಿ ಬಂಧನ

ಪ್ರಸ್ತುತ ಐಟಿ ಉದ್ಯೋಗಿಯಾಗಿರುವ ಆರೋಪಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 4:07 IST
Last Updated 31 ಮೇ 2022, 4:07 IST
ಚೆನ್ನಕೇಶವ
ಚೆನ್ನಕೇಶವ   

ಪುತ್ತೂರು: ನಗರದ ಹೊರವಲಯದ ಪಡೀಲ್ ಎಂಬಲ್ಲಿನ ಗೂಡಂಗಡಿಯೊಂದರಿಂದ 20 ವರ್ಷದ ಹಿಂದೆ ₹1500 ನಗದು ಹಾಗೂ ದಿನಸಿ ಸಾಮಗ್ರಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಂದಿನ ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಒಬ್ಬನಾಗಿದ್ದ ಈತ, ಪ್ರಸ್ತುತ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾನೆ.

ನೆಹರೂನಗರ ಸ್ವಾಮಿ ಕಾಂಪೌಂಡ್ ನಿವಾಸಿ ಚಿನ್ನಸ್ವಾಮಿ ಅವರ ಪುತ್ರ, ಪ್ರಸ್ತುತ ತಮಿಳುನಾಡಿನ ತಿರುನಾಳ್ವೆಲ್ಲಿ ಜಿಲ್ಲೆಯ ಪಳೆಯಂಕೊಟ್ಟಿ ಎಂಬಲ್ಲಿ ವಾಸ್ತವ್ಯವಿರುವ ಚೆನ್ನಕೇಶವ ಯಾನೆ ಸೂರ್ಯರಾಜ್ ಬಂಧಿತ ಆರೋಪಿ. 20 ವರ್ಷದ ಹಿಂದೆ 18 ವರ್ಷದವನಾಗಿದ್ದ ಚೆನ್ನಕೇಶವ ಬಳಿಕ ಶೈಕ್ಷಣಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಎಂಸಿಎ ಪದವಿ ಪಡೆದು ಐಟಿ ಉದ್ಯೋಗದಲ್ಲಿದ್ದಾನೆ.

ADVERTISEMENT

ಪಡೀಲ್ ಎಂಬಲ್ಲಿ ಕುದ್ಮಾರು ನಿವಾಸಿ ವಸಂತ ಗೌಡ ಅವರು ನಡೆಸುತ್ತಿದ್ದ ಗೂಡಂಗಡಿಯಿಂದ 2002ರ ಜೂನ್‌ 10ರಂದು ರಾತ್ರಿ ದಿನಸಿ ಸಾಮಾಗ್ರಿಗಳು ಮತ್ತು ನಗದು ಕಳವಾಗಿತ್ತು. ಈ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನು ದೋಷಮುಕ್ತಿಗೊಳಿಸಿತ್ತು. ಆದರೆ, ಪ್ರಕರಣದ 4ನೇ ಆರೋಪಿಯಾಗಿದ್ದ ಚೆನ್ನಕೇಶವ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನ ವಿರುದ್ಧ ವಾರಂಟ್ ಜಾರಿ ಮಾಡಿತ್ತು.

ಆರೋಪಿಯ ಪತ್ತೆಗಾಗಿ ನೇಮಕವಾಗಿದ್ದ ಪುತ್ತೂರು ನಗರ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಪರಮೇಶ್ವರ ಅವರು ಆರೋಪಿ ವಾಸ್ತವ್ಯ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ನಗರ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಮತ್ತು ಎಸ್ಐಗಳಾದ ರಾಜೇಶ್ ಹಾಗೂ ನಸ್ರೀನ್ ತಾಜ್ ಚಟ್ಟರಕಿ ಅವರ ಮಾರ್ಗದರ್ಶನದಂತೆ ಪರಮೇಶ್ವರ, ಜಗದೀಶ್ ಮತ್ತು ಕೇಶವ ಅವರು ಆರೋಪಿಯನ್ನು ತಮಿಳುನಾಡಿನಲ್ಲಿ ಮೇ 28ರಂದು ರಾತ್ರಿ ಬಂಧಿಸಿ, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.