ADVERTISEMENT

ಕಾಂತಾಬಾರೆ ಬೂದಾಬಾರೆ ಕರೆ: ಜೋಡುಕರೆ ಕಂಬಳಕ್ಕೆ ಅರ್ಧಶತಕದ ಪುಳಕ

‘ಡಬಲ್ ಟ್ರ್ಯಾಕ್‌’ ಓಟದಲ್ಲಿ ದಾಖಲೆ ಬರೆಯಲಿರುವ ಐಕಳಬಾವ ಮನೆತನದ ಕಾಂತಾಬಾರೆ ಬೂದಾಬಾರೆ ಕರೆ

ವಿಕ್ರಂ ಕಾಂತಿಕೆರೆ
Published 7 ಫೆಬ್ರುವರಿ 2026, 6:30 IST
Last Updated 7 ಫೆಬ್ರುವರಿ 2026, 6:30 IST
50ನೇ ಕಂಬಳಕ್ಕೆ ಸಜ್ಜಾಗಿರುವ ಐಕಳದ ಕಾಂತಾಬಾರೆ ಬೂದಾಬಾರೆ ಕರೆಗಳು
50ನೇ ಕಂಬಳಕ್ಕೆ ಸಜ್ಜಾಗಿರುವ ಐಕಳದ ಕಾಂತಾಬಾರೆ ಬೂದಾಬಾರೆ ಕರೆಗಳು   

ಮಂಗಳೂರು: ಕರಾವಳಿಯ ಅಸ್ಮಿತೆ ಎಂದೇ ಪರಿಣಿಸುವ ಕಂಬಳಕ್ಕೆ ಶತಮಾನಗಳ ಇತಿಹಾಸ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಆಧುನಿಕ ಸ್ಪರ್ಶ ಪಡೆದ ಜೋಡುಕರೆ ಕಂಬಳ ಈಗ 50ನೇ ವರ್ಷದ ದಾಖಲೆಯ ಹೊಸ್ತಿಲಿನಲ್ಲಿದೆ. 

ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಫೆ.7ರಂದು ನಡೆಯಲಿರುವ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಒಂದೇ ಸ್ಥಳದಲ್ಲಿ 50 ವರ್ಷ ಜೋಡುಕರೆ ಓಟವನ್ನು ಏರ್ಪಡಿಸಿದ ಮೊದಲ ಕಂಬಳ ಎನಿಸಲಿದೆ. ಹೀಗಾಗಿ ಈಗಾಗಲೇ ಆರಂಭಗೊಂಡಿರುವ ಈ ಬಾರಿಯ ‘ಐಕಳೋತ್ಸವ’ಕ್ಕೂ ವಿಶೇಷ ಕಳೆ.  

ಮೂಲ್ಕಿ ಸೀಮೆಯ ಅರಸರು ಕಂದಾಯ ಆಕರದ ಅನುಕೂಲಕ್ಕಾಗಿ ಮಾಡಿದ ‘ಬಾವ’ಗಳಲ್ಲಿ ಒಂದು, ಐಕಳದ ಬಾವ. ಈ ಮನೆತನ ಹಿಂದಿನಿಂದಲೇ ಸಾಂಪ್ರದಾಯಿಕ ಅಥವಾ ಒಂಟಿಕರೆ ಕಂಬಳ ಏರ್ಪಡಿಸಿಕೊಂಡು ಬಂದಿದೆ. 1976ರಲ್ಲಿ ಜೋಡುಕರೆ ಕೋಣಗಳ ಓಟ ಆರಂಭಗೊಂಡಿತು. ಅಂದಿನಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಕಂಬಳ ತಜ್ಞರ ಪ್ರಕಾರ ಐಕಳಬಾವಕ್ಕಿಂತ ಮೊದಲೇ, 1970ರಲ್ಲಿ ಬಜಗೋಳಿ ಜೋಡುಕರೆ ಕಂಬಳ ಆರಂಭಗೊಂಡಿದೆ. ಆದರೆ 33 ವರ್ಷಗಳ ನಂತರ ಸ್ಥಗಿತಗೊಂಡು ನಂತರದ 22 ವರ್ಷ ಮಿಯಾರಿನಲ್ಲಿ ಮುಂದುವರಿದಿದೆ. 

ADVERTISEMENT

‘ಮೂಲ್ಕಿ ಸೀಮೆಯ ಅರಸು ಕಂಬಳಗಳು ಹೆಸರುವಾಸಿ. ಕಟಪಾಡಿ ಬೀಡು, ಐಕಳಬಾವ, ಬಜಗೋಳಿ, ಕಕ್ಕೆಪದವು ಮುಂತಾದವು ವಿಶಿಷ್ಟ. ಜೋಡುಕರೆಯ ಪರಿಕಲ್ಪನೆ ಬಂದ ನಂತರ ಕಂಬಳಗಳಲ್ಲಿ ಹೊಸತನವೂ ಮೈವೆತ್ತಿತು. ಇದೆಲ್ಲದರ ನಡುವೆ ಒಂದೇ ಜಾಗದಲ್ಲಿ 50 ವರ್ಷ ನಿರಂತರ ಕಂಬಳ ನಡೆದ ಖ್ಯಾತಿ ಐಕಳಬಾವದ್ದು’ ಎನ್ನುತ್ತಾರೆ ಅನುಭವಿ ಪ್ರೊ.ಗುಣಪಾಲ ಕಡಂಬ. 

‘ಶಾನುಭೋಗರಾಗಿದ್ದ ಯೋಗೀಶ್ ರಾವ್ ಸೇರಿದಂತೆ 10 ಮಂದಿಯ ಜೊತೆಗೂಡಿ ನರಸಿಂಹ ಶೆಟ್ಟಿ ಆರಂಭಿಸಿದ್ದು ಐಕಳಬಾವ ಜೋಡುಕರೆ ಕಂಬಳ. ನರಸಿಂಹ ಶೆಟ್ಟಿ ಅವರ ನಂತರ ಅಣ್ಣಮಾಸ್ಟರ್ ಯಾನೆ ನರಸು ಶೆಟ್ಟಿ 2004ರ ವರೆಗೆ ಮುನ್ನಡೆಸಿದರು’ ಎಂದು 2006ರಿಂದ ಕಂಬಳ ಆಯೋಜನೆಯ ಚುಕ್ಕಾಣಿ ಹಿಡಿದಿರುವ ಐಕಳ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.  

ಊರು ಬೆಳಗಿದ ಕಂಬಳ

ಐಕಳಬಾವ ಜೋಡುಕರೆಯು ಕಂಬಳದೊಂದಿಗೆ ಊರಿಗೂ ಹೊಸ ಸ್ಪರ್ಶ ನೀಡಿದೆ. ಇಲ್ಲಿ ರೆಫರಿ ಸ್ಟ್ಯಾಂಡ್ ಇದೆ. 2024ರಲ್ಲಿ ‘ಗಂತಿ’ನಲ್ಲಿ ಆಧುನಿಕ ತಂತ್ರಜ್ಞಾನದ ‘ಮೆಶ್‌ ಗೇಟ್‌’ ಪ್ರಾಯೋಗಿಕವಾಗಿ ಅಳವಡಿಸಿದ್ದು ಇಲ್ಲೇ. ಖಾಸಗಿಯಾಗಿ ಶಾಶ್ವತ ವೇದಿಕೆ ಇರುವ ಏಕೈಕ ಕಂಬಳವೂ ಇದಾಗಿದೆ. ಊರಿನಲ್ಲೂ ಹೊಸ ಬದಲಾವಣೆಗಳಾಗಿವೆ. ‘ಈ ಊರಿಗೆ ರಸ್ತೆಯೇ ಇರಲಿಲ್ಲ. ಓಡಾಡುವುದು ಕಷ್ಟವೆಂದು ಕಂಬಳಕ್ಕೆ ಹೋಗುವಾಗಲೇ ತಿಂಡಿ ಕಟ್ಟಿಸಿಕೊಂಡು ಹೋಗುತ್ತಿದ್ದೆವು. ಈಗ ಸಕಲ ಸೌಲಭ್ಯಗಳೂ ಇರುವ ಹಳ್ಳಿ ಇದು’ ಎನ್ನುತ್ತಾರೆ ಸ್ಥಳೀಯರು. 

ಐಕಳಬಾವ ಕಂಬಳದ ಕರೆಗಳನ್ನು ಅವಳಿ ವೀರರಾದ ಕಾಂತಾಬಾರೆ ಬೂದಾಬಾರೆ ನಿರ್ಮಿಸಿದ್ದು ಎನ್ನಲಾಗುತ್ತಿದ್ದು ಅವರ ಹೆಸರಿನಲ್ಲೇ ಖ್ಯಾತಿ ಗಳಿಸಿದೆ. ಮಂಜೊಟ್ಟಿಯಲ್ಲಿ ನೆರಳು ನೀಡಲು ಬೃಹತ್‌ ಜೋಡಿ ಅಶ್ವತ್ಥ ಮರಗಳು ಇವೆ. ಈ ಕಂಬಳಕ್ಕೆ ನಾಗಾಲಯ ಮತ್ತು ದೈವಗಳ ಸಂಬಂಧವೂ ಇದ್ದು 50ನೇ ವರ್ಷದ ಸಂದರ್ಭದಲ್ಲಿ ಜೀರ್ಣೋದ್ಧಾರ ಕಾರ್ಯವೂ ನಡೆದಿದೆ. 

ಐಕಳ ಕಂಬಳ ಕೋಣಗಳ ಓಟಕ್ಕಷ್ಟೇ ಸೀಮಿತವಲ್ಲ. ಅದು ಈಗ ಊರಿನ ಉತ್ಸವವಾಗಿ ಪರಿವರ್ತನೆಯಾಗಿದೆ. ಐಕಳೋತ್ಸವದಲ್ಲಿ ಕ್ರೀಡೆ ಸಾಂಸ್ಕೃತಿಕ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೂ ಆದ್ಯತೆ ಸಿಗುತ್ತದೆ.
ದೇವಿಪ್ರಸಾದ್ ಶೆಟ್ಟಿ ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ
ಗೆದ್ದವರಿಗೆ ಚಿನ್ನದ ಪದಕ ಕೊಡುವ ಸಂಪ್ರದಾಯ ಐಕಳಬಾವ ಕಂಬಳದಲ್ಲಿ ಹಿಂದಿನಿಂದಲೇ ಇದೆ. ಈ ಕಂಬಳಕ್ಕೆ ಹೊರನಾಡಿನಿಂದಲೂ ಬೆಂಬಲವಿದ್ದು ಮುಂಬೈಯಲ್ಲಿ ಕಂಬಳ ಸಮಿತಿಯನ್ನೇ ಸ್ಥಾಪಿಸಲಾಗಿದೆ.
ಚಿತ್ತರಂಜನ್ ಭಂಡಾರಿ ಐಕಳಬಾವ ಕಂಬಳ ಸಮಿತಿ ಕಾರ್ಯಾಧ್ಯಕ್ಷ
ಐಕಳ ಮನೆತನದವರ ಜೊತೆ ಊರವರು ಸೇರಿಕೊಂಡು ನಡೆಸುತ್ತಿರುವ ಕಂಬಳಕ್ಕೆ 50 ತುಂಬುತ್ತಿರುವ ದಿನ ಕಂಬಳ ಪ್ರೇಮಿಗಳೆಲ್ಲರ ಸಂಭ್ರಮದ ದಿನ .
ಲೋಕೇಶ್ ಶೆಟ್ಟಿ ರಾಜ್ಯ ಕಂಬಳ ಸಂಸ್ಥೆಯ ಕೋಶಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.