ಮಂಗಳೂರಿನ ‘ಅಳಿಲುಗಳು ತಂಡ’ದ ಆರನೇ ವರ್ಷದ ‘ಅಳಿಲು ಸೇವೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದವರನ್ನು ಗೌರವಿಸಲಾಯಿತು
ಮಂಗಳೂರು: ‘ಲೈಂಗಿಕ ಅಲ್ಪಸಂಖ್ಯಾತರಿಗೆ ಕೆಲವೊಮ್ಮೆ ತಮ್ಮವರೇ ಅಡ್ಡಿಯಾಗುತ್ತಾರೆ. ಬೆಂಗಳೂರಿನಲ್ಲಿ ಬೇಡಿ ತಿನ್ನುತ್ತಿದ್ದ ಸಂದರ್ಭದಲ್ಲಿ ನಾನು ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಅಂದು ಒದ್ದಿದ್ದಾರೆ. ಸಿಗರೇಟ್‌ನಲ್ಲಿ ಚರ್ಮ ಸುಟ್ಟಿದ್ದಾರೆ. ಬಿಯರ್ ಬಾಟ್ಲಿಯಲ್ಲಿ ಹೊಡೆದಿದ್ದಾರೆ. ಸುಟ್ಟ ಕಲೆಗಳು ಈಗಲೂ ನನ್ನ ಮೈಮೇಲೆ ಇವೆ...’
ಆಟೊ ಸೇವೆ ಶುರು ಮಾಡಿ ಸ್ವಂತ ಕಾಲಮೇಲೆ ನಿಮತಿರುವ ಲೈಂಗಿಕ ಅಲ್ಪಸಂಖ್ಯಾತೆ ಅನಿ ಮಂಗಳೂರು ತಮ್ಮ ಸಂಕಟವನ್ನು ವಿವರಿಸುತ್ತಿದ್ದಂತೆ ಸಭಿಕರು ಸ್ತಬ್ದರಾದರು. ಮಾತು ಮುಗಿಸಿ ಹೊರಬರುತ್ತಿದ್ದಂತೆ ಅವರೊಂದಿಗೆ ಮಾತನಾಡಲು ಹಾತೊರೆದರು. ಯುವತಿಯರು ಸೆಲ್ಫಿ ತೆಗೆದುಕೊಂಡರು.
ಭಾನುವಾರ ನಗರದಲ್ಲಿ ನಡೆದ ‘ಅಳಿಲುಗಳು ತಂಡ’ ಆರನೇ ವರ್ಷದ ‘ಅಳಿಲು ಸೇವೆ’ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಅವರು ‘ಬೆಂಗಳೂರಿನಲ್ಲಿ ತುಂಬ ತೊಂದರೆ ಅನುಭವಿಸಿದೆ. ಮಂಗಳೂರಿಗೆ ಬಂದ ನಂತರ ಜೀವನದ ಹಾದಿಯೇ ಬದಲಾಯಿತು. ಇಲ್ಲಿ ಆಟೊ ಖರೀದಿಸಿ ಸ್ವಾಭಿಮಾನದ ಜೀವನ ನಡೆಸಲು ಆರಂಭಿಸಿದೆ. ಇಲ್ಲಿಯವರು ತುಂಬ ಒಳ್ಳೆಯವರು’ ಎಂದರು.
‘ಸಮಾಜ ನಮ್ಮನ್ನು ಕೀಳಾಗಿ ನೋಡುವುದನ್ನು ನಿಲ್ಲಿಸಬೇಕು. ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಬೇಕು. ಬೇಡಿ ತಿನ್ನುವ ಪರಿಸ್ಥಿತಿಗೆ ತಂದು ನಿಲ್ಲಿಸುವ ಸಮಾಜ ನಮಗೆ ಬಾಡಿಗೆಗೆ ಮನೆ ಕೊಡಲು ಮುಂದಾಗುವುದಿಲ್ಲ. ಆಟೊ ರಿಕ್ಷಾದಲ್ಲಿ ಹತ್ತಿಸುವುದಿಲ್ಲ. ನಾವೇ ಆಟೊ ಓಡಿಸಿದರೆ ಅದರಲ್ಲಿ ಪ್ರಯಾಣಿಸುವುದಕ್ಕೂ ಹಿಂಜರಿಯುತ್ತಾರೆ’ ಎಂದು ಹೇಳಿದ ನಾಲ್ಕು ಆಟೊಗಳ ಮಾಲೀಕರಾದ ಅವರು ‘ಹಿರಿಯರಿಗೆ ಮತ್ತು ಗರ್ಭಿಣಿಯರಿಗೆ ನನ್ನ ಆಟೊದಲ್ಲಿ ಉಚಿತ ಸೇವೆ ಇದೆ’ ಎಂದರು.
ವಿದ್ಯಾಗಮ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಣಂಬೂರು ವಾಸುದೇವ ಐತಾಳ ಹಾಗೂ ಸಾಧಕ ಕೃಷ್ಣ ಶೆಟ್ಟಿ ಮಾತನಾಡಿದರು. ಕ್ಯಾನ್ಸರ್‌ನಿಂದ ಬಳಲುತ್ತಿರುವವರು, ಸುಟ್ಟ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿರುವವರು, ಜೀವನ ನಿರ್ವಹಣೆಗೆ ತೊಂದರೆ ಇರುವವರಿಗೆ ನಗದು, ಅಂಧರಿಗೆ ಸ್ಟೂಲ್, ವಿಶೇಷ ಚೇತನ ಮಕ್ಕಳಿಗೆ ಡೈಪರ್ಸ್, ಥೆರಪಿ ಬೆಡ್, ಗಾಲಿ ಕುರ್ಚಿ ಸೇರಿದಂತೆ ಒಟ್ಟು ₹ 2.77 ಮೊತ್ತದ ನೆರವು ವಿತರಿಸಲಾಯಿತು. ದಂಪತಿ ಪಾರ್ವತಿ ಮತ್ತು ಶಿವಾನಂದ ಮಲ್ಯ, ನಿವೃತ್ತ ಶಿಕ್ಷಕ ಕೆ.ನಾರಾಯಣ ನಾಯಕ್, ಪರಿಸರ ಪ್ರೇಮಿ ರಾಜಮಣಿ ರಾಮಕುಂಜ, ಸ್ವಚ್ಛತಾ ಸಿಬ್ಬಂದಿ ಕೇಶವ ಪಚ್ಚನಾಡಿ ಹಾಗೂ ಜಗದೀಶ್ ಮೂಲ್ಕಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.