ಪುತ್ತೂರು: ‘ವೈಜ್ಞಾನಿಕ ಪರೀಕ್ಷೆ ನಡೆಸದೆ, ಕೆಲವು ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಯ ಆಧಾರದಲ್ಲಿ ಅಡಿಕೆಯ ಬಗ್ಗೆ ಆತುರದ ನಿರ್ಧಾರಕ್ಕೆ ಬರಬಾರದು. ವೈಜ್ಞಾನಿಕ ಸಂಶೋಧನೆ ನಡೆಸಿ, ಫಲಿತಾಂಶ ವನ್ನು ಸಾರ್ವಜನಿಕರ ಮುಂದಿಡುವಂತೆ ಪ್ರತಿ ರಾಜ್ಯದ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ ನುಡಿದರು.
ಶುಕ್ರವಾರ ಇಲ್ಲಿ ನಡೆದ ‘ಅರೆಕಾನಟ್ ಚಾಲೆಂಜ್: ಟರ್ನಿಂಗ್ ಪಾಲಿಸಿ ಇನ್‌ಟು ಇಂಪ್ಯಾಕ್ಟ್ ಇನ್ ದ ಸೌತ್ ಈಸ್ಟ್ ಏಷ್ಯಾ ರೀಜನ್’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.
‘ತಂಬಾಕು ಮುಂತಾದ ಕ್ಯಾನ್ಸರ್ ಕಾರಕ ಉತ್ಪನ್ನಗಳ ಪಟ್ಟಿಗೆ ಅಡಿಕೆಯನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಉತ್ಸುಕವಾಗಿದೆ. ಅಡಿಕೆಯನ್ನು ಒಂದು ಚಟವಾಗಿ ಬಳಸಲಾಗುತ್ತಿದ್ದು ಅದನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಈಗ ಹೇಳುತ್ತಿದ್ದಾರೆ. ಈ ಬಗ್ಗೆ ಸರಿಯಾದ ತಿಳಿವಳಿಕೆ ನೀಡಬೇಕು. ಅಡಿಕೆಯನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಅಡಿಕೆ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರುವ ಮುನ್ನ ಇದನ್ನು ಗಮನಿಸಬೇಕು’ ಎಂಬ ಒತ್ತಾಯ ವೆಬಿನಾರ್‌ನಲ್ಲಿ ವ್ಯಕ್ತವಾಯಿತು.
ವಿಘ್ನೇಶ್ವರ ವರ್ಮುಡಿ ಮಾತನಾಡಿ, ‘ಅಡಿಕೆ ಬೆಳೆಯುವ, ಬಳಕೆ ಮಾಡುವ ಹಾಗೂ ಅವಲಂಬಿತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ಗಮನದಲ್ಲಿ ಇರಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತ’ ಎಂದರು.
ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಸುಮಾರು 160ಕ್ಕೂ ಹೆಚ್ಚು ಮಂದಿ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.