ಉಜಿರೆ: ಆರ್ಥಿಕ ಸಮಸ್ಯೆ ಹಾಗೂ ತೀವ್ರ ಅನಾರೋಗ್ಯದಿಂದ ಜೀವನದಲ್ಲಿ ಜುಗುಪ್ಸೆಗೊಂಡು ತಾಯಿ ಮತ್ತು ಮಗ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಡಾಜೆಯಲ್ಲಿ ನಡೆದಿದೆ.
ತಾಯಿ ಕಲ್ಯಾಣಿ (96) ಮೃತಪಟ್ಟಿದ್ದು, ಮಗ ಕೆ.ಜಯರಾಂ (58) ಸ್ಥಿತಿ ಗಂಭೀರವಾಗಿದೆ.
ನಾಲ್ಕು ದಿನಗಳ ಹಿಂದೆ ಮುಂಡಾಜೆ ಗ್ರಾಮದ ಕೂಳೂರು ನಿವಾಸಿಗಳಾದ ಕಲ್ಯಾಣಿ ಮತ್ತು ಕೆ.ಜಯರಾಂ ಬೆಳಿಗ್ಗೆ ಎದ್ದೇಳದೇ ಇದ್ದರೂ ಪಕ್ಕದ ಮನೆಯವರು ಮನೆಯಲ್ಲಿ ನೋಡಿದಾಗ ತಾಯಿ ಮತ್ತು ಮಗ ದೇವರ ಕೋಣೆಯ ಬಳಿ ಮಲಗಿದ್ದ ಸ್ಥಿತಿಯಲ್ಲಿದ್ದರು. ಇಬ್ಬರೂ ಉಸಿರಾಡುತ್ತಿದ್ದುದರಿಂದ ತಕ್ಷಣ ಅವರನ್ನು ಉಜಿರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಕಲ್ಯಾಣಿ ಅವರು ಸೋಮವಾರ ಮೃತಪಟ್ಟಿದ್ದಾರೆ.
ಜಯರಾಂ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯರಾಂ ಅವರು ನಾಲ್ಕು ಪುಟಗಳ ಪತ್ರ ಬರೆದಿದ್ದು, ಸಾಲದ ಸಮಸ್ಯೆ ಹಾಗೂ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಸೂಚಿಸಿದ್ದಾರೆ.
ಕಲಾವಿದರಾಗಿದ್ದ ಜಯರಾಂ ಅವರು ಚಿತ್ರಕಲಾ ಶಿಕ್ಷಕರಾಗಿ ಹೆಸರು ಪಡೆದಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.