
ಬಂಧನ
ಮಂಗಳೂರು: ಮಳಲಿ ನಾರ್ಲಪದವು ಎಂಬಲ್ಲಿ ದನದ ಮಾಂಸ ಅಕ್ರಮ ಸಾಗಾಟ ಪ್ರಕರಣ ಸಂಬಂಧ ತಿರುಚಿದ ಬಿಲ್ ನೀಡಿ ನ್ಯಾಯಾಲಯವನ್ನು ವಂಚಿಸಿದ ಕುರಿತು ಆರೋಪಿಗಳಿಬ್ಬರನ್ನು ಬಜಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದನದ ಮಾಂಸವನ್ನು ಅಕ್ರಮವಾಗಿ ಸಾಗಿಸಿದ ಆರೋಪಿ ಮುಲ್ಲರಪಟ್ಣದ ಅಬ್ದುಲ್ ಸತ್ತಾರ್ ಅಲಿಯಾಸ್ ಸತ್ತಾರ್ (54), ತಿರುಚಿದ ಬಿಲ್ ನೀಡಿದ್ದ ದೇರಳೆಕಟ್ಟೆ ಮಾಂಸದ ಅಂಗಡಿ ಮಾಲೀಕ, ತೊಕ್ಕೊಟ್ಟು ಚೊಂಬುಗುಡ್ಡೆಯ ಅಬ್ದುಲ್ ಸತ್ತಾರ್ (41) ಬಂಧಿತರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಬ್ದುಲ್ ಸತ್ತಾರ್ ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ಜೊತೆ ಬೈಕಿನಲ್ಲಿ ಡಿ. 27ರಂದು ಸಾಗುತ್ತಿದ್ದಾಗ ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್ ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿ, ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಬಜಪೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅಬ್ದುಲ್ ಸತ್ತಾರ್ ಬೈಕಿನಲ್ಲಿ ಸುಮಾರು 19 ಕೆ.ಜಿ. ಗೋಮಾಂಸ ಪತ್ತೆಯಾಗಿತ್ತು. ಗೋಮಾಂಸ ಸಾಗಾಟಕ್ಕೆ ಅಧಿಕೃತ ದಾಖಲೆ ಹೊಂದಿರದ ಕಾರಣ ಸ್ವಯಂಪ್ರೇರಿತವಾಗಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಅಬ್ದುಲ್ ಸತ್ತಾರ್‌ನನ್ನೂ ಬಂಧಿಸಿದ್ದರು.
ಗೋಮಾಂಸ ಖರೀದಿಸಿದ್ದಕ್ಕೆ ದೇರಳಕಟ್ಟೆಯ ಮಾಂಸ ಮಾರಾಟ ಮಳಿಗೆಯ ಬಿಲ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅದರ ಆಧಾರದಲ್ಲಿ ಅಬ್ದುಲ್ ಸತ್ತಾರ್‌ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
‘ಅಬ್ದುಲ್ ಸತ್ತಾರ್ ಸಲ್ಲಿಸಿದ ಬಿಲ್ ಬಗ್ಗೆ ಅನುಮಾನ ಬಂದಿದ್ದರಿಂದ ಪೊಲೀಸರು ದೇರಳಕಟ್ಟೆಯ ಮಾಂಸ ಮಾರಾಟ ಮಳಿಗೆಯ ಬಿಲ್ ಬುಕ್ ಪರಿಶೀಲಿಸಿದ್ದರು. ಆಗ ನ್ಯಾಯಾಲಯಕ್ಕೆ ತಿರುಚಿದ ಬಿಲ್ ಸಲ್ಲಿಸಿರುವುದು ಪತ್ತೆಯಾಗಿತ್ತು’ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.