
ಮಂಗಳೂರು: ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ‘ಬಿಯಾಂಡ್ ಬೆಂಗಳೂರು’ ಮಿಷನ್ ಅಡಿಯಲ್ಲಿ ಮಂಗಳೂರಿನ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ಗೆ ₹1.92 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಅಧಿಕಾರಿಗಳು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ವರ್ಟೆಕ್ಸ್ ಮ್ಯಾನೇಜ್ಡ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಸಮ್ಮುಖದಲ್ಲಿ ಸೋಮವಾರ ಈ ಘೋಷಣೆ ಮಾಡಲಾಯಿತು.
ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ‘ಬಿಯಾಂಡ್ ಬೆಂಗಳೂರು ಎಂಬುದು ವಿಶಿಷ್ಟ ಅಭಿವೃದ್ಧಿ ಮತ್ತು ಅನುಷ್ಠಾನ ಕಾರ್ಯತಂತ್ರವಾಗಿದೆ. ಈ ಅನುದಾನ ಬಿಡುಗಡೆಯು ಬಿಯಾಂಡ್ ಬೆಂಗಳೂರು ಮಿಷನ್ ಅಡಿಯಲ್ಲಿ ಬೆಂಗಳೂರಿನ ಹೊರಗಿನ ವರ್ಕ್‌ಸ್ಪೇಸ್ ಆಪರೇಟರ್‌ಗೆ ನೀಡಿರುವ ಮೊದಲ ಮತ್ತು ಅತಿದೊಡ್ಡ ಅನುದಾನಗಳಲ್ಲಿ ಒಂದಾಗಿದೆ. ಅಭಿವೃದ್ಧಿಶೀಲ ನಗರಗಳಲ್ಲಿ ಎಂಟರ್‌ಪ್ರೈಸಸ್ ದರ್ಜೆಯ ವರ್ಕ್‌ಸ್ಪೇಸ್ ವೇದಿಕೆಗಳನ್ನು ಬೆಂಬಲಿಸುವ ಮೂಲಕ, ನಾವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ’ ಎಂದರು.
ಮಂಗಳೂರಿನಲ್ಲಿ ವರ್ಟೆಕ್ಸ್ ಸಂಸ್ಥೆಯ ಬದ್ಧತೆಯು ನಾವು ನಿರೀಕ್ಷಿಸುತ್ತಿರುವ ಬೆಳವಣಿಗೆಗೆ ಪೂರಕವಾಗಿದೆ. ಪ್ರಸ್ತುತ ಈ ಕ್ಲಸ್ಟರ್‌ನಲ್ಲಿ 10ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು ಇವೆ. ಮತ್ತು 1 ಮಿಲಿಯನ್ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣದ ‘ಗ್ರೇಡ್-ಎ’ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 24 ತಿಂಗಳುಗಳಲ್ಲಿ ನಾವು ಈ ಭಾಗದಲ್ಲಿ 40ಕ್ಕೂ ಹೆಚ್ಚು ಕಂಪನಿಗಳಿಗೆ ನೆಲೆ ಒದಗಿಸಿದ್ದೇವೆ. ಈ ಮೂಲಕ 8 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ರಾಷ್ಟ್ರೀಯ ಬೆಳವಣಿಗೆಯಲ್ಲಿ ಮಂಗಳೂರು ದೊಡ್ಡ ಕೊಡುಗೆ ನೀಡಬಹುದೆಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಐಟಿ- ಬಿಟಿ ಇಲಾಖೆಯ ಕಾರ್ಯದರ್ಶಿ ಎನ್. ಮಂಜುಳಾ ಮಾತನಾಡಿ, ‘ಮುಂದಿನ 5 ವರ್ಷಗಳಲ್ಲಿ ರಾಜ್ಯದ ಒಟ್ಟು ಜಿಡಿಪಿಗೆ ಡಿಜಿಟಲ್ ಆರ್ಥಿಕತೆಯ ಮೂಲಕ ಶೇ 10ರಷ್ಟು ಕೊಡುಗೆ ನೀಡುವಲ್ಲಿ ಈ ಕ್ಲಸ್ಟರ್‌ಗಳು ಪ್ರಮುಖ ಪಾತ್ರ ವಹಿಸಲಿವೆ. ರಾಜ್ಯದ ನೀತಿಗಳ ಪ್ರಯೋಜನ ಪಡೆಯಲು ಉದ್ಯಮಗಳನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ’ ಎಂದರು.
ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಮಾತನಾಡಿ, ಈ ಅನುದಾನ ಬಿಡುಗಡೆಯು ಇತರ ಉದಯೋನ್ಮುಖ ತಂತ್ರಜ್ಞಾನ ನಗರಗಳಿಗೆ ‘ಬಿಯಾಂಡ್ ಬೆಂಗಳೂರು ಚೌಕಟ್ಟಿನಡಿಯಲ್ಲಿ ಮುಂದಿನ ಪೀಳಿಗೆಯ ಟೆಕ್ ಕ್ಲಸ್ಟರ್‌ಗಳನ್ನು ಸೃಷ್ಟಿಸಲು, ಸರ್ಕಾರದೊಂದಿಗೆ ಕೈ ಜೋಡಿಸಲು ಪ್ರೇರಣೆಯಾಗಲಿದೆ ಎಂದರು.
ಮಂಗಳೂರಿನಲ್ಲಿ 40 ಕಂಪನಿಗಳಿಗೆ ನೆಲೆ 8 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿ ಹೊಸ ತಂತ್ರಜ್ಞಾನ ಕ್ಲಸ್ಟರ್‌ಗಳಿಗೆ ಬೆಂಬಲ
‘ಸಾಮರ್ಥ್ಯ ವಿಸ್ತರಣೆಗೆ ಯೋಜನೆ’: ವರ್ಟೆಕ್ಸ್ ಮಂಗಳೂರಿನಲ್ಲಿ 2250ಕ್ಕೂ ಹೆಚ್ಚು ವೃತ್ತಿಪರರ ಉದ್ಯೋಗಕ್ಕೆ ನೆರವಾಗುತ್ತಿದ್ದು ಬೆಂಗಳೂರು ಹೊರತಾದ ಅತಿದೊಡ್ಡ ಮ್ಯಾನೇಜ್ಡ್ ವರ್ಕ್‌ಸ್ಪೇಸ್ ವೇದಿಕೆಯಾಗಿ ಹೊರಹೊಮ್ಮಿದೆ. ವರ್ಕ್ ಸ್ಪೇಸ್ ಅನ್ನು 6000 ಸೀಟ್‌ಗಳ ಸಾಮರ್ಥ್ಯಕ್ಕೆ ವಿಸ್ತರಿಸಲು ಯೋಚಿಸಲಾಗಿದೆ. ಇದು ಸ್ಟಾರ್ಟ್‌ಅಪ್‌ಗಳು ಜಿಸಿಸಿಗಳು ಹೂಡಿಕೆದಾರರು ಮತ್ತು ಜಾಗತಿಕ ಉದ್ದಿಮೆಗಳನ್ನು ಸೆಳೆಯಲು ಪೂರಕವಾಗಲಿದೆ ಎಂದು ವರ್ಟೆಕ್ಸ್‌ನ ಪಾಲುದಾರ ಗುರುದತ್ ಶೆಣೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.