
ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಕುಂಜತ್ತೂರು ಬಿಲ್ಲವ ಸಂಘದ ಸದಸ್ಯರು ಹಗ್ಗ ಎಳೆದ ಬಗೆ
ಪ್ರಜಾವಾಣಿ ಚಿತ್ರ
ಮಂಗಳೂರು: ಕಡಲಿನ ಕಡೆಯಲ್ಲಿ ಸೂರ್ಯ ನಸುಗೆಂಪು ಬಣ್ಣ ಸೂಸುತ್ತಿದ್ದ ಸಂಜೆಗತ್ತಲಲ್ಲಿ ನೆಹರೂ ಮೈದಾನದಲ್ಲಿ ಸ್ಮ್ಯಾಷ್, ಲಿಫ್ಟ್, ಡ್ರಾಪ್‌ಗಳ ಸೊಬಗು ಮೇಳೈಸಿತ್ತು. ಬಿಲ್ಲವರ ಜಾಗತಿಕ ಕ್ರೀಡೋತ್ಸವದ ವಾಲಿಬಾಲ್ ಫೈನಲ್ ಪಂದ್ಯ ಕ್ರೀಡಾಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಪ್ರಮುಖ ತಂಡಗಳಲ್ಲಿ ಆಡುವ ಹೆಸರಾಂತ ವಾಲಿಬಾಲ್ ಪಟುಗಳು ಅಮೋಘ ಆಟದ ಮೂಲಕ ರೋಮಾಂಚನಗೊಳಿಸಿದರು.
ಅಖಿಲ ಭಾರತ ಬಿಲ್ಲವರ ಯೂನಿಯನ್ ಭಾನುವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಾಲಿಬಾಲ್, ಹಗ್ಗಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯಗಳು ದಿನವಿಡೀ ಮುದ ನೀಡಿದವು. ಸಂಜೆ ನಡೆದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಸಂಗೀತ, ನೃತ್ಯದ ರಂಜನೆಯೂ ಇತ್ತು. ಹಾಡಿನ ಮಧ್ಯೆ ನಾರಾಯಣ ಗುರುಗಳ ಚಿತ್ರ ವೇದಿಕೆಯ ಬೃಹತ್ ಪರದೆಯ ಮೇಲೆ ಮೂಡಿಬಂದು ಪ್ರೇಕ್ಷಕರನ್ನು ವಿಸ್ಮಯಗೊಳಿಸಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ‘ಕ್ರೀಡೆಯ ಮೂಲಕ ಸಮಾಜವನ್ನು ಕಟ್ಟಬಹುದು ಮತ್ತು ಬೆಸೆಯಬಹುದು ಎಂದು ಅಭಿಪ್ರಾಯಪಟ್ಟರು.
ಆಟದಲ್ಲಿ ಗೆಲ್ಲುತ್ತ ಸೋಲುತ್ತ ಸಮಾಜದಲ್ಲಿ ಶಕ್ತಿಯ ರೂಪವಾಗಿ ಬೆಳೆದ ಕೋಟಿ–ಚೆನ್ನಯರ ಜೀವನ, ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಂಬುದನ್ನು ತಿಳಿಸಿಕೊಟ್ಟಿದೆ ಎಂದ ಅವರು ಬಿಲ್ಲವರ ಜಾಗತಿಕ ಕ್ರೀಡಾಕೂಟವು ರಾಜ್ಯದ ಹಿಂದುಳಿದ ಶೇಕಡ 60ರಷ್ಟು ಜನರ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದರು.
ಮಾನವರಾಗುವ ಮೂಲಕ ಸಮಾಜವನ್ನು ಬೆಳೆಸಬೇಕು. ಹಾಗೆ ಮಾಡಲು ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಬೆಳೆಯುವ ಅಗತ್ಯವಿದೆ. ಸಮಾಜವು ಕ್ರೀಡಾ ಮನೋಭಾವ ತೋರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಚಿತ್ರನಟ ವಿಜಯ ರಾಘವೇಂದ್ರ ಹೇಳಿದರು.
ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ದೇವರಾಜ ಅರಸು ಅವರ ಮಾದರಿಯಲ್ಲಿ ದಿವಂಗತ ದಾಮೋದರ ಸುವರ್ಣ ಕರಾವಳಿ ಭಾಗದಲ್ಲಿ ಕೆಲಸ ಮಾಡಿದ್ದರು ಎಂದ ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಕ್ರೀಡಾಕೂಟಗಳ ಮೂಲಕ ಪ್ರತಿಯೊಂದು ಸಮಾಜವೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದೆ. ಬಿಲ್ಲವ ಸಮಾಜ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದು ಖುಷಿಯ ಸಂಗತಿ ಎಂದರು.
ಮೈಸೂರಿನ ಉದ್ಯಮಿ ಎಲ್.ಸುಧಾಕರ ಪೂಜಾರಿ ಉದ್ಘಾಟಿಸಿದರು. ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬ್ರ ಹೆರಾಜೆ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ರುಕ್ಮಯ ಪೂಜಾರಿ, ಉದಯಚಂದ್ರ ಡಿ. ಸುವರ್ಣ, ಸುಧೀರ್ ಕುಮಾರ್, ಕಿರಣ್ ಕೋಡಿಕಲ್, ಶ್ವೇತಾ ಪೂಜಾರಿ, ಸತೀಶ್ ಕೆಡಿಂಜೆ, ವಿನಯಚಂದ್ರ ಡಿ ಸುವರ್ಣ, ಸಮಲತಾ ಸುವರ್ಣ, ಗೀತಾಂಜಲಿ ಸುವರ್ಣ, ಸುಖಲಕ್ಷ್ಮಿ ಸುವರ್ಣ, ಕ್ರೀಡಾಪಟುಗಳಾದ ಕೆ.ಎಸ್ ಅಶೋಕ್, ದೀಕ್ಷಿತ್ ಪೂಜಾರಿ, ಅನುಷ್ ಪ್ರಾಂಜಲ್, ಧನಲಕ್ಷ್ಮಿ ಪೂಜಾರಿ ಪಾಲ್ಗೊಂಡಿದ್ದರು. ಜೀವನ್ ಕುಮಾರ್ ತೊಕ್ಕೊಟ್ಟು ಪ್ರಸ್ತಾವಿಕವಾಗಿ ಮಾತನಾಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೆಹರೂ ಮೈದಾನದವರೆಗೆ ಕ್ರೀಡಾ ಜ್ಯೋತಿಯ ಮೆರವಣಿಗೆ ನಡೆಯಿತು.
ಪುರುಷರ ವಾಲಿಬಾಲ್ ಪಂದ್ಯದ ರೋಚಕ ಕ್ಷಣ
ವಾಲಿಬಾಲ್: ಬ್ರಹ್ಮಶ್ರೀ ಉಳ್ಳಾಲಕ್ಕೆ ಪ್ರಶಸ್ತಿ
ವಾಲಿಬಾಲ್ ಪುರುಷರ ವಿಭಾಗದ ಪ್ರಶಸ್ತಿ ಬ್ರಹ್ಮಶ್ರೀ ಉಳ್ಳಾಲ ತಂಡದ ಪಾಲಾಯಿತು. ಜೆ.ಡಿ ಸುವರ್ಣ ತಂಡ ರನ್ನರ್ ಅಪ್ ಆಯಿತು. ಬಿಲ್ಲವ ಸಂಘ ಪಡುಬಿದ್ರಿ ಮತ್ತು ಬೆಳ್ತಂಗಡಿ ಬಿಲ್ಲವ ಸಂಘ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿತು. ಹಗ್ಗಜಗ್ಗಾಟದ ಪುರಷರ ವಿಭಾಗದಲ್ಲಿ ಎಸ್‌ಎನ್‌ಡಿಪಿ ಕಾಸರಗೋಡು ಪ್ರಶಸ್ತಿ ಗೆದ್ದುಕೊಂಡರೆ ಕಾಸರಗೋಡು ಬಿಲ್ಲವರ ಸಂಘ ರನ್ನರ್ ಅಪ್ ಆಯಿತು. 3 ಮತ್ತು 4ನೇ ಸ್ಥಾನಗಳು ಕ್ರಮವಾಗಿ ಬಿಲ್ಲವ ಸೇವಾ ಸಂಘ ಬೆಳ್ತಂಗಡಿ ಮತ್ತು ಜೆ.ಸಿ ಸುವರ್ಣ ಅಭಿಮಾನಿ ಬಳಗದ ಪಾಲಾಯಿತು. ಮಹಿಳೆಯರ ವಿಭಾಗದಲ್ಲಿ ಕುಂಜತ್ತೂರು ಬಿಲ್ಲವ ಮಹಿಳಾ ಸಂಘ ಚಾಂಪಿಯನ್ ಆಯಿತು. ಬ್ರಹ್ಮಶ್ರೀ ಉಳ್ಳಾಲ ರನ್ನರ್ ಅಪ್ ಬಿಲ್ಲವ ಮಹಿಳಾ ಸಂಘ ಬಂಟ್ವಾಳ ಮೂರನೇ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಪ್ರಶಸ್ತಿ ಜೆ.ಡಿ ಸುವರ್ಣ ತಂಡದ ಪಾಲಾಯಿತು. ಪುತ್ತೂರಿನ ಬ್ರಹ್ಮಶ್ರೀ ಬಿಲ್ಲವ ಸಂಘ ರನ್ನರ್ ಅಪ್ ಬ್ರಹ್ಮಶ್ರೀ ಉಳ್ಳಾಲ ಮೂರನೇ ಸ್ಥಾನ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.