ADVERTISEMENT

ಬಿಜೆಪಿಯಿಂದ ದೇಶದ ಅಂತಃಸತ್ವ ನಾಶ: ಮಂಗಳೂರಿನಲ್ಲಿ ಬೃಂದಾ ಕಾರಟ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 16:45 IST
Last Updated 21 ಮಾರ್ಚ್ 2022, 16:45 IST
ಬೃಂದಾ ಕಾರಟ್
ಬೃಂದಾ ಕಾರಟ್   

ಮಂಗಳೂರು: ಸಂವಿಧಾನದ ಹೆಸರಿನಲ್ಲಿ ಅಧಿಕಾರ ಪಡೆದಿರುವ ಸಂಘ ಪರಿವಾರದ ಸಂಘಟನೆಗಳು ದೇಶದ ಏಕತೆ, ವೈವಿಧ್ಯತೆ, ಐಕ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ. ದೇಶದ ಅಂತಃಸತ್ವವನ್ನು ನಾಶ ಮಾಡುವ ಶಕ್ತಿಗಳನ್ನು ದೇಶದ ಜನರು ಸೋಲಿಸಬೇಕು ಎಂದು ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಅಭಿಪ್ರಾಯಪಟ್ಟರು.

ಅಲ್ಪಸಂಖ್ಯಾತ ಸಮುದಾಯಗಳ ನಂಬಿಕೆ ಹಾಗೂ ಹಕ್ಕುಗಳ ಮೇಲಿನ ನಿರಂತರ ದಾಳಿಯ ವಿರುದ್ಧ ಸೋಮವಾರ ಇಲ್ಲಿ ಸಿಪಿಎಂ ಆಯೋಜಿಸಿದ್ದ ಸೌಹಾರ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವ ಬಿಜೆಪಿ ಏಕ ಸಂಸೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿ ಅಂಗೀಕರಿಸಿರುವ ಮತಾಂತರ ನಿಷೇಧ ಕಾಯ್ದೆ ಕೂಡ ಸಂವಿಧಾನದ ಮೇಲೆ ಮಾಡಿರುವ ತೀವ್ರ ದಾಳಿಯಾಗಿದೆ. ಇದು ಕ್ರೈಸ್ತರ ಮೇಲಿನ ಗದಾ ಪ್ರಹಾರ ಮಾತ್ರವಲ್ಲ, ಇದು ಸಂವಿಧಾನದ ಜಾತ್ಯತೀತ ತತ್ವದ ಮೇಲಿನ ದಾಳಿಯಾಗಿದೆ’ ಎಂದರು.

ADVERTISEMENT

ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ನಿರ್ಬಂಧಿಸಿರುವ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಇಲ್ಲ. ಪಕ್ಕದ ಕೇರಳ ರಾಜ್ಯದಲ್ಲೂ ಹಿಜಾಬ್ ಹೆಣ್ಣು ಮಕ್ಕಳ ಆಯ್ಕೆಯಾಗಿದೆ. ಶಾಲೆಗಳಲ್ಲಿ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸಲು ಅವಕಾಶ ಇದೆ. ಆದರೆ, ಈ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರ ಪಾತ್ರ ಮಾತ್ರ ಇರುತ್ತದೆ. ಆದರೆ, ಇಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಶಾಸಕರು ಶಿಕ್ಷಣ ಸಂಸ್ಥೆ ಆಡಳಿತದಲ್ಲಿ ಮೂಗುತೂರಿಸಿ, ಕೋಮು ವಿಷ ಬೀಜ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಘಟಕದ ಕಾರ್ಯದರ್ಶಿ ಮಂಡಳಿಯ ಸದಸ್ಯ ಯಾದವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಪ್ರಮುಖರಾದ ಡಾ.ಕೆ.ಪ್ರಕಾಶ್, ಯಮುನಾ ಗಾಂವ್ಕರ್, ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಗುರುಶಾಂತ್, ಮಹಾಂತೇಶ, ಡಾ.ಕೃಷ್ಣ ಪ್ಪ ಕೊಂಚಾಡಿ, ಸುಕುಮಾರ್, ಪದ್ಮಾವತಿ, ಜಯಂತಿ ಶೆಟ್ಟಿ, ರಮಣಿ, ವಸಂತಿ ಇದ್ದರು. ‌ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಹಿಜಾಬ್; ಹೆಣ್ಣು ಮಕ್ಕಳ ವಿವೇಚನೆ’
‘ಪುರುಷರ ಕಪಿಮುಷ್ಠಿಯಲ್ಲಿ ಮಹಿಳೆಯರನ್ನು ಹಿಡಿದಿಟ್ಟಿಕೊಳ್ಳುವ ಮೂಲಭೂತವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಎಸ್‌ಡಿಪಿಐ, ಪಿಎಫ್‌ಐನಂತಹ ಸಂಘಟನೆಗಳು ಹಿಜಾಬ್ ಧರಿಸುವಂತೆ ಹೆಣ್ಣು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಒಪ್ಪಿಕೊಳ್ಳಲಾಗದು. ಯಾವುದೇ ವಸ್ತ್ರ ತೊಡುವ ಅಧಿಕಾರ ಮಹಿಳೆಯರ ವಿವೇಚನೆ ಆಗಿರಬೇಕೇ ವಿನಾ ಅದರಲ್ಲಿ ಪುರುಷರ ಹಸ್ತಕ್ಷೇಪ ಸಲ್ಲದು. ಈಗ ರಾಜ್ಯದ ಬಿಜೆಪಿ ಸರ್ಕಾರ ಹಿಜಾಬ್ ಗೊಂದಲ ಸೃಷ್ಟಿಸಿ, ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸಲು ಮುಂದಾಗಿದೆ’ ಎಂದು ಬೃಂದಾ ಕಾರಟ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.