ಧರ್ಮಸ್ಥಳ (ದಕ್ಷಿಣ ಕನ್ನಡ): ಹರ ಹರ ಮಹಾದೇವ... ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಜೈ... ಕೇಸರಿ ಶಾಲು ಧರಿಸಿ, ಕೇಸರಿ ಬಾವುಟ ಹಿಡಿದು ಸಾಗಿಬಂದ ಬಿಜೆಪಿ ಕಾರ್ಯಕರ್ತರು ಹಾಗೂ ಕ್ಷೇತ್ರದ ಭಕ್ತರ ಘೋಷಣೆಗಳು ಧರ್ಮಸ್ಥಳದ ಬೀದಿಗಳಲ್ಲಿ ಮಾರ್ದನಿಸಿದವು.
‘ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಧರ್ಮಸ್ಥಳ ಚಲೋ’ ಸಮಾವೇಶ ಕ್ಷೇತ್ರದ ಬೀದಿಯನ್ನು ಕೇಸರಿಮಯವಾಗಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದವರು, ಧರ್ಮಸ್ಥಳದ ಮುಖ್ಯದ್ವಾರದಿಂದ ಕಾರ್ಯಕ್ರಮದ ವೇದಿಕೆಯತ್ತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಾಗಿಬಂದರು. ಧಾರಾಕಾರವಾಗಿ ಸುರಿದ ಮಳೆಯ ನಡುವೆಯೂ ಹುರುಪಿನಿಂದ ಹೆಜ್ಜೆ ಹಾಕಿದರು. ಪಕ್ಷದ ಮುಖಂಡರೂ ಮಳೆಯನ್ನು ಲೆಕ್ಕಿಸದೆ ಸಾಗಿದರು. ಸಮಾವೇಶದ ವೇದಿಕೆಯನ್ನು ತಲುಪುವಷ್ಟರಲ್ಲಿ ಬಹುತೇಕರು ಪೂರ್ತಿ ಒದ್ದೆಯಾಗಿದ್ದರು.
ನಾಯಕರ ಭಾಷಣದ ನಡು ನಡುವೆ ‘ಹರ ಹರ ಮಹಾದೇವ...’ ಘೋಷಣೆ ಕೂಗಿದರು. ಸಭಿಕರು ಕೇಸರಿ ಶಾಲು ಬೀಸುತ್ತಾ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಜೈಕಾರ ಕೂಗಿದರು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ಜಯಘೋಷ ಹಾಕಿದರು.
‘ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರದ ನಡೆಸಲಾಗುತ್ತಿದೆ’ ಎಂದು ಬಿಜೆಪಿ ಮುಖಂಡರು ಕಿಡಿಕಾರಿದರು.
ಯೂಟ್ಯೂಬ್ ಚಾನೆಲ್‌ಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಕ್ಷೇತ್ರದ ಬಗ್ಗೆ ಕಟ್ಟು ಕತೆಗಳನ್ನು ಕಟ್ಟಿದರೂ ರಾಜ್ಯ ಸರ್ಕಾರ ಕ್ರಮವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು. ಅಪಪ್ರಚಾರವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಒತ್ತಾಯಿಸಿದರು.
ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೂ ಮುನ್ನ, ಬಿಜೆಪಿ ಮುಖಂಡರು ಕ್ಷೇತ್ರದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸೌಜನ್ಯಾ ಮನೆಗೆ ವಿಜಯೇಂದ್ರ ಭೇಟಿ
ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ವಿದ್ಯಾರ್ಥಿನಿ ಸೌಜನ್ಯಾ ಅವರ ಪಾಂಗಾಳದಲ್ಲಿರುವ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಮಾವೇಶದ ನಂತರ ಭೇಟಿ ನೀಡಿದರು. ಸೌಜನ್ಯಾ ಅವರ ತಾಯಿ ಕುಸುಮಾವತಿ ಅವರೊಂದಿಗೆ ಚರ್ಚಿಸಿದರು.
‘ಸೌಜನ್ಯಾ ಪ್ರಕರಣದ ಬಗ್ಗೆ ಸಿಬಿಐ ಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ. ಅದರ ವೆಚ್ಚವನ್ನು ಬಿಜೆಪಿ ಭರಿಸಲಿದೆ. ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಕುಸುಮಾವತಿ ಅವರಿಗೆ ಹೇಳಿದ್ದೇವೆ’ ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮುನ್ನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ್ದ ಅವರು ‘ಸೌಜನ್ಯಾ ಹತ್ಯೆ ಪ್ರಕರಣ ಮರು ತನಿಖೆಗೆ ಸರ್ಕಾರ ಕ್ರಮ ವಹಿಸಿ ಆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಿ. ಈ ವಿಚಾರದಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ಕೊಡುತ್ತದೆ’ ಎಂದು ಹೇಳಿದ್ದರು.
ಎಸ್ಐಟಿ ರಚನೆ ಸ್ವಾಗತಿಸಿದ್ದೆವು. ತನಿಖೆ ನಡೆಯುವಾಗ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ತಡೆಯಲು ಸರ್ಕಾರ ಕ್ರಮ ವಹಿಸಬೇಕಿತ್ತು. ದೂರು ನೀಡಿದ ವ್ಯಕ್ತಿಯನ್ನು 24 ಗಂಟೆಗಳಲ್ಲಿ ಒದ್ದು ಒಳಗೆ ಹಾಕಬೇಕಿತ್ತು.-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಮೂವರು ಐಪಿಎಸ್ ಅಧಿಕಾರಿಗಳನ್ನು ಬಿಟ್ಟು ಬಾಹುಬಲಿ ಬೆಟ್ಟ ಅಗೆದರು. ಬೇರೆ ಧರ್ಮದ ದರ್ಗಾದಲ್ಲಿ ಇನ್ನೊಂದು ಹೆಣ ಹುಗಿದಿದ್ದೇನೆ ಎಂದು ಯಾರಾದರೂ ಹೇಳಿದರೆ ಅಲ್ಲಿ ಅಗೆಯಲಿ ನೋಡೋಣ.-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಸಿದ್ದರಾಮಯ್ಯ ಸುತ್ತ ನಕ್ಸಲ್ ಗ್ಯಾಂಗ್ ತಿಮರೋಡಿ ಗ್ಯಾಂಗ್ ಸೇರಿಕೊಂಡಿದೆ. ಇವರೆಲ್ಲ ನಗರ ನಕ್ಸಲರು. ಷಡ್ಯಂತ್ರ ಬಗ್ಗೆ ಎನ್ಐಎ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲಿದೆ.-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.