ADVERTISEMENT

ಕುಕ್ಕೆಸುಬ್ರಹ್ಮಣ್ಯಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ: ಸರ್ಪಸಂಸ್ಕಾರ ಸೇವೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 13:20 IST
Last Updated 11 ಮಾರ್ಚ್ 2025, 13:20 IST
ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು
ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಮಂಗಳವಾರ ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಪೂಜೆಗಳಲ್ಲಿ ಭಾಗಿಯಾದರು. ಬುಧವಾರವೂ ಅವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಮಂಗಳವಾರ ಮುಂಜಾನೆ ಆದಿ ಸುಬ್ರಹ್ಮಣ್ಯದ ಸರ್ಪ ಸಂಸ್ಕಾರ ಯಾಗಶಾಲೆಯಲ್ಲಿ ಮೊದಲ ದಿನದ ಸರ್ಪಸಂಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು. ಕುಕ್ಕೆ ಸುಬ್ರಹ್ಮಣ್ಯದ ಖಾಸಗಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿರುವ ಅವರು, ಬುಧವಾರ ಮುಂಜಾನೆ 6ಗಂಟೆಗೆ ಎರಡನೇ ದಿನದ ಪೂಜೆಯನ್ನು ನೆರವೇರಿಸಲಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನದ ಮಹಾಪೂಜೆಯ ನಂತರ ನಡೆಯುವ ನಾಗಪ್ರತಿಷ್ಠೆ ಸೇವೆ ನೆರವೇರಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ, ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸರ್ಪಸಂಸ್ಕಾರ ಮೊದಲ ದಿನದ ಪೂಜೆಯ ಮೊದಲು ಕತ್ರಿನಾ ಅವರು ವೃತ್ತಿ ಜೀವನದ ಅಭಿವೃದ್ಧಿ ಸೇರಿದಂತೆ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅರ್ಚಕರ ಮೂಲಕ ಸಂಕಲ್ಪ ನೆರವೇರಿಸಿದ್ದಾರೆ. ಸರ್ಪಸಂಸ್ಕಾರದ ಪ್ರಧಾನ ಅರ್ಚಕ ನಂದಕಿಶೋರ್, ಕ್ರಿಯಾಕರ್ತೃ ಸುಧೀರ್ ಭಟ್ ವಿಧಿ–ವಿಧಾನಗಳನ್ನು ನೆರವೇರಿಸಿದ್ದಾರೆ. ತಮಿಳು ಸಿನಿಮಾದ ನಿರ್ದೇಶಕರೊಬ್ಬರ ಸಲಹೆಯಂತೆ ಕುಕ್ಕೆಗೆ ಕತ್ರಿನಾ ಭೇಟಿ ನೀಡಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕುಕ್ಕೆಗೆ ಬಂದ ಕತ್ರಿನಾ ಕೈಫ್ ಅವರು ವಸತಿ ಗೃಹದಿಂದ ಕಾರಿನಲ್ಲಿ ದೇವಸ್ಥಾನದವರೆಗೆ ಬಂದರು. ಈ ವೇಳೆ ಅವರು ಮಾಸ್ಕ್, ತಲೆಗೆ ದುಪಟ್ಟ ಹಾಕಿಕೊಂಡೇ ಓಡಾಟ ನಡೆಸಿದರು. ಪೂಜೆಯಲ್ಲಿ ಭಾಗವಹಿಸಿದ್ದಾಗಲೂ ಮಾಸ್ಕ್, ದುಪಟ್ಟ ತೆಗೆದಿರಲಿಲ್ಲ. ಮಧ್ಯಾಹ್ನ ದೇವಸ್ಥಾನದ ಗಣ್ಯರ ಭೋಜನ ಶಾಲೆಯಲ್ಲಿ ಪ್ರಸಾದ ಸ್ವೀಕರಿಸುವ ಸಂದರ್ಭದಲ್ಲೂ ಕೆಲ ಹೊತ್ತು ಕಾದು ಮಾಧ್ಯಮದವರ ಕಣ್ಣು ತಪ್ಪಿಸಿಯೇ ತೆರಳಿದರು. ಕತ್ರಿನಾ ಕೈಫ್ ಜೊತೆಗೆ ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರು.

ಕತ್ರಿನಾ ಕೈಫ್ ಅವರ ಓಡಾಟದ ವಿಡಿಯೊ, ಚಿತ್ರ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಕತ್ರಿನಾ ಅವರೊಂದಿಗಿದ್ದವರು ಆಕ್ಷೇಪಿಸಿ ಮಾಧ್ಯಮದವರೊಂದಿಗೆ ವಾಗ್ವಾದ ನಡೆಸಿದರು.

ವಿಡಿಯೊ ಮಾಡಿದ ಪತ್ರಕರ್ತರೊಬ್ಬರ ಮೊಬೈಲ್‌ ಫೋನನ್ನು ಕತ್ರಿನಾ ಜತೆಗಿದ್ದ ಮಹಿಳೆಯೊಬ್ಬರು ಕಸಿದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.