ನೇತ್ರಾವತಿ ಪಕ್ಕದ ಕಾಡಿನಲ್ಲಿ ಮುಂದುವರಿದ ಶೋಧ ಕಾರ್ಯ
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳ ಮೃತದೇಹ ಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದ ಮೃತದೇಹದ ಅವಶೇಷಗಳು ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಗುರುವಾರ ಪತ್ತೆಯಾಗಿವೆ.
ಈ ಪ್ರಕರಣದ ಸಾಕ್ಷಿ ದೂರುದಾರ ಕಾಡಿನಲ್ಲಿ ತೋರಿಸಿ ಗುರುತು ಮಾಡಲಾಗಿದ್ದ ಆರನೇ ಜಾಗವನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಸಮ್ಮುಖದಲ್ಲಿ ಗುರುವಾರ ಅಗೆಯ ಲಾಯಿತು. ಎಸ್ಐಟಿ ತಂಡದ ಜೊತೆ ಸುಮಾರು 20 ಕಾರ್ಮಿಕರು ಕಾಡಿನ ಒಳಗೆ ಬೆಳಿಗ್ಗೆ 11.30ರ ಸುಮಾರಿಗೆ ತೆರಳಿದ್ದರು. ಸಾಕ್ಷಿ ದೂರುದಾರ ತೋರಿಸಿದ್ದ ಆರನೇ ಜಾಗ ಅಗೆಯಲು ಶುರು ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮೃತದೇಹದ ಕುರುಹು ಕಂಡುಬಂತು. ಅಲ್ಲಿ 2.5 ಅಡಿಯಿಂದ 3 ಅಡಿಗಳಷ್ಟು ಆಳಕ್ಕೆ ಅಗೆಯುವಾಗಲೇ ಮೃತದೇಹದ ಕುರುಹು ಪತ್ತೆಯಾಗಿದೆ.
ತಲೆಬುರುಡೆಯ ಚೂರುಗಳು, ಮೂಳೆಗಳು ಸ್ಥಳದಲ್ಲಿದ್ದವು. ವಿಧಿವಿಜ್ಞಾನ ತಜ್ಞರ ತಂಡವು ಮೃತದೇಹದಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿದೆ. ‘ಅದು ಗಂಡಸಿನ ಮೃತ ದೇಹದ ಅವಶೇಷದಂತಿದೆ’ ಎಂದು ಸ್ಥಳ ದಲ್ಲಿದ್ದ ವಿಧಿ ವಿಜ್ಞಾನ ತಜ್ಞರು ತಿಳಿಸಿದ್ದಾರೆ.
‘ಇನ್ನಷ್ಟು ವಿಸ್ತೃತವಾಗಿ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲು ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ’ ಎಂದು ಎಸ್ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಈ ಪ್ರಕರಣದ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗಗಳಲ್ಲಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ತೋರಿಸಿದ್ದ ಐದು ಕಡೆ ಮಂಗಳವಾರ ಮತ್ತು ಬುಧವಾರ ಭೂಮಿ ಅಗೆಯಲಾಗಿತ್ತು. ಅಲ್ಲಿ ಮೃತದೇಹಗಳನ್ನು ಹೂತು ಹಾಕಿದ್ದ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.
ಕಾಡಿನೊಳಗೆ ಊಟ: ಮೃತದೇಹಗಳ ಶೋಧಕಾರ್ಯಕ್ಕಾಗಿ ಕಾಡಿನೊಳಗೆ ಹೋದ ಅಧಿಕಾರಿಗಳು ಹಾಗೂ ಕಾರ್ಮಿಕರ ತಂಡಕ್ಕೆ ಮಧ್ಯಾಹ್ನದ ಊಟವನ್ನೂ ಕಾಡಿಗೆ ಒಳಗೆ ತಲುಪಿ ಸಲಾಯಿತು. ಅಗೆಯಲು ಯಂತ್ರವನ್ನು ಕಾಡಿನೊಳಗೆ ಒಯ್ಯಲಾಯಿತು.ಮೃತದೇಹದ ಅವಶೇಷ ಪತ್ತೆಯಾದ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ.
ಮೃತದೇಹ ಕುರುಹು ಸಿಕ್ಕಿದ ಜಾಗದ ಮಹಜರು ಮುಗಿಸಿ ಎಸ್ಐಟಿ ತಂಡವು ಕಾಡಿನಿಂದ ಹೊರಗೆ ಬರುವಾಗ ಸಂಜೆ 7.30 ಆಗಿತ್ತು. ಸಾಕ್ಷಿ ದೂರುದಾರ ಈಗಾಗಲೇ ತೋರಿಸಿರುವ ಏಳು ಜಾಗಗಳಲ್ಲಿ ಅಗೆಯುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಶುಕ್ರವಾರವೂ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಮುಂದಿನ ಹಂತದ ತನಿಖೆ- ಸಭೆ: ಕಾಡಿನಲ್ಲಿ ಪತ್ತೆಯಾದ ಮೃತದೇಹ ಯಾರದ್ದು ಎಂಬ ಗುರುತು ಪತ್ತೆಗೆ ವಹಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಹಾಗೂ ಡಿಐಜಿ ಎಂ.ಎನ್. ಅನುಚೇತ್ ಅವರು ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು.
ಮುಚ್ಚಿದ ಬಕೆಟ್ ನಲ್ಲಿ ಅವಶೇಷ ರವಾನೆ: ಪತ್ತೆಯಾದ ಮೃತದೇಹದ ಅವಶೇಷಗಳನ್ನು ಬಿಳಿ ಹಾಗೂ ಕೆಂಬಣ್ಣದ ಬಕೆಟ್ ನಲ್ಲಿ ತುಂಬಿ ಸೀಲ್ ಮಾಡಲಾಗಿದೆ. ವಿಧಿ ವಿಜ್ಞಾನ ತಜ್ಞರು ಅದನ್ನು ಒಯ್ದರು.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ನೆಲ ಅಗೆಯುವಾಗ ಮಂಗಳವಾರ ಸಿಕ್ಕಿದ್ದ ಪಾನ್ ಕಾರ್ಡ್ 2025ರ ಮಾರ್ಚ್‌ನಲ್ಲಿ ಮೃತಪಟ್ಟಿರುವ ಗಂಡಸಿನದು. ಆ ವ್ಯಕ್ತಿ ಜಾಂಡಿಸ್‌ನಿಂದ ಸ್ವಗ್ರಾಮದಲ್ಲಿ ಮೃತಪಟ್ಟಿದ್ದರು ಎಂದು ಎಸ್ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಆ ಸ್ಥಳದಲ್ಲಿ ಮಹಿಳೆಯ ಹೆಸರಿನಲ್ಲಿದ್ದ ರೂಪೇ ಡೆಬಿಟ್ ಕಾರ್ಡ್ ಸಿಕ್ಕಿತ್ತು. ಅದು ಆ ವ್ಯಕ್ತಿಯ ತಾಯಿಯದು. ಅವರು ಆರೋಗ್ಯವಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಮೃತ ವ್ಯಕ್ತಿಯ ತಂದೆ ತಾಯಿಯನ್ನು ಖುದ್ದಾಗಿ ಸಂಪರ್ಕಿಸಿ ಈ ಮಾಹಿತಿಯನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಎಸ್ಐಟಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.