ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಗಳ ಆರೋಪದ ಮೇಲೆ ಬಂಧಿತನಾಗಿರುವ ಕಂಕನಾಡಿ ಬೊಲ್ಲಗುಡ್ಡದ ರೋಷನ್ ಸಲ್ಡಾನ ನಡೆಸಿರುವ ಹಣಕಾಸಿನ ವಹಿವಾಟು ಜಾಡು ಹಿಡಿದು ಸೆನ್ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಈತ, ಮೂರು ವರ್ಷಗಳಲ್ಲಿ ಒಂದು ಬ್ಯಾಂಕ್ ಖಾತೆಯಿಂದ ₹40 ಕೋಟಿಗೂ ಅಧಿಕ ವಹಿವಾಟು ನಡೆಸಿರುವುದು ಪೊಲೀಸರಿಗೆ ಪ್ರಾಥಮಿಕ ಹಂತದಲ್ಲಿ ಪತ್ತೆಯಾಗಿದೆ.
‘ಪೊಲೀಸರು ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದು, ವಿಚಾರಣೆ ನಡೆಸಲು ಆರೋಪಿಯನ್ನು ಕಸ್ಟಡಿಗೆ ಪಡೆಯಲಾಗುವುದು. ಇಂತಹ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದ ತನಿಖೆಯ ನಂತರವೇ ಖಚಿತವಾದ ಮಾಹಿತಿ ಲಭ್ಯವಾಗುತ್ತದೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಆರೋಪಿ ಸಲ್ಡಾನ ₹10 ಕೋಟಿ ವಂಚಿಸಿರುವುದಾಗಿ ಒಬ್ಬ ವ್ಯಕ್ತಿ ದೂರು ನೀಡಿದ್ದರೆ, ಇನ್ನೊಬ್ಬರು ಆತನಿಂದ ₹1 ಕೋಟಿ ವಂಚನೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಎರಡು ದೂರುಗಳನ್ನು ಆಧರಿಸಿ ಆತನನ್ನು ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಚಿತ್ರದುರ್ಗದ ವ್ಯಕ್ತಿಯೊಬ್ಬರು ₹45 ಲಕ್ಷ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ. ರೋಷನ್ ಬಂಧನ ಖಚಿತವಾದ ಮೇಲೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ₹2.5 ಕೋಟಿ ಕಳೆದುಕೊಂಡಿರುವ ಬಗ್ಗೆ ದೂರು ದಾಖಲಿಸಲು ಮುಂದೆ ಬಂದಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ₹15 ಲಕ್ಷ ನಷ್ಟ ಅನುಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವರು ದೂರು ದಾಖಲಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಬಂಧನ ಹೇಗೆ?: ರೋಷನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿದ್ದವು. ಆತನ ಇರುವಿಕೆ ಪತ್ತೆ ಹಚ್ಚುವ ವೇಳೆ, ಆತ ಮನೆಯಲ್ಲೇ ಇದ್ದಾನೆ ಎಂಬ ಮಾಹಿತಿ ಖಚಿತವಾದ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು.
ದಾಳಿ ವೇಳೆ ಕೊಠಡಿಯೊಂದರ ಟೀಪೊಯ್ ಮೇಲೆ ಮದ್ಯದ ಗ್ಲಾಸ್ ಕಂಡುಬಂದಿದೆ. ಇದರಿಂದ ಆತ ಮನೆಯಲ್ಲೇ ಇದ್ದಿರಬಹುದೆಂಬ ಅನುಮಾನದಲ್ಲಿ ಪೊಲೀಸರು ಹುಡುಕಾಡಿದ್ದಾರೆ. ಯಾವ ಕುರುಹು ಗೊತ್ತಾಗದಂತೆ ಇರುವ ರಹಸ್ಯ ಕೊಠಡಿಯಲ್ಲಿ ಆತ ಅಡಗಿದ್ದ. ಏಕಾಂಗಿಯಾಗಿ ವಾಸಿಸುತ್ತಿದ್ದ ಆತನ ಮನೆಯಲ್ಲಿ ವಿದೇಶಿ ಮಹಿಳೆಯೊಬ್ಬರು ಆ ವೇಳೆ ಇದ್ದರು. ಮಹಿಳೆಯನ್ನು ಸ್ವೀಕಾರ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ ಮಹಿಳೆಯ ಪಾಸ್‌ಪೋರ್ಟ್ ಮತ್ತಿತರ ದಾಖಲೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನೆಲ ಮಹಡಿ ಆತನ ವಾಸ ಸ್ಥಾನ, ಮೊದಲ ಮಹಡಿಯಲ್ಲಿ ಕಚೇರಿ ಇದೆ. ಇಲ್ಲಿ ವೈಭವೋಪೇತ ಕೊಠಡಿಗಳು, ಎರಡು ಬೆಡ್‌ರೂಂ, ರಹಸ್ಯ ಕೊಠಡಿ ಇದೆ. ಮೊದಲ ಮಹಡಿಗೆ ಪ್ರತ್ಯೇಕ ಪ್ರವೇಶ ದ್ವಾರ ಇದೆ. ಬಡ ಕುಟುಂಬದ ಹಿನ್ನೆಲೆಯ ರೋಷನ್ ಐಷಾರಾಮಿ ಜೀವನ ನಡೆಸುತ್ತಿದ್ದ. ಒಂದು ಕೊಠಡಿಯ ವಿನ್ಯಾಸಕ್ಕೆ ಆತ ಕನಿಷ್ಠ ₹50 ಲಕ್ಷ ಖರ್ಚು ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ರೋಷನ್ ತನ್ನ ವಿಸಿಟಿಂಗ್ ಕಾರ್ಡ್‌ನಲ್ಲಿ ಹೈಕೋರ್ಟ್ ವಕೀಲರೊಬ್ಬರ ಹೆಸರನ್ನು ಬಳಕೆ ಮಾಡಿಕೊಂಡು, ಅವರು ತನ್ನ ಕಾನೂನು ಸಲಹೆಗಾರರು ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ಚಿತ್ರದುರ್ಗದ ತಂಡದ ಜತೆ ನಂಟು?
ರೋಷನ್ ಸಲ್ಡಾನ ದೇಶದ ಬೇರೆ ಬೇರೆ ಭಾಗಗಳಲ್ಲಿ ತಂಡಗಳನ್ನು ರಚಿಸಿಕೊಂಡಿದ್ದ. ಸಾಕಷ್ಟು ಪ್ರಭಾವ ಇರುವ ತಾನು ಸಾಲ ಕೊಡಿಸುವುದಾಗಿ ನಂಬಿಸಿ ದೊಡ್ಡ ಉದ್ಯಮಿಗಳಲ್ಲಿ ತನ್ನ ಐಷಾರಾಮಿ ಮನೆಗೆ ಅವರನ್ನು ಕರೆಸಿಕೊಂಡು ಭ್ರಮೆ ಸೃಷ್ಟಿಸುತ್ತಿದ್ದ. ಸಾಲ ಅಗತ್ಯ ಇರುವ ಉದ್ಯಮಿಗಳು ಈತನ ಮಾತಿಗೆ ಮರುಳಾಗುತ್ತಿದ್ದರು. ಈ ಕಾರ್ಯಕ್ಕೆ ಅವನ ತಂಡದವರು ದಲ್ಲಾಳಿಗಳ ಪಾತ್ರ ನಿರ್ವಹಿಸಿ ಕಮಿಷನ್ ಪಡೆಯುತ್ತಿದ್ದರು. ದೊಡ್ಡ ಮೊತ್ತದ ಹಣ ರೋಷನ್‌ಗೆ ಸಿಗುತ್ತಿತ್ತು. ಸ್ವತಂತ್ರವಾಗಿ ಇವುಗಳನ್ನು ನಿರ್ವಹಣೆ ಮಾಡುವ ಮೊದಲು ಆತ ಚಿತ್ರದುರ್ಗದ ಒಂದು ತಂಡದ ಜೊತೆ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.