ADVERTISEMENT

ಕೇರಳದಿಂದ ಬರುವವರಿಗೆ 3 ದಿನ ವಿನಾಯಿತಿ: ದ.ಕ. ಜಿಲ್ಲಾಡಳಿತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 8:23 IST
Last Updated 23 ಫೆಬ್ರುವರಿ 2021, 8:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪ್ರಜಾವಾಣಿ‌ ವಾರ್ತೆ

ಮಂಗಳೂರು: ಕೇರಳದಿಂದ ಬರುವವರಿಗೆ ಕೋವಿಡ್ ‌ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಿದ್ದ ದಕ್ಷಿಣ‌ ಕನ್ನಡ ಜಿಲ್ಲಾಡಳಿತ‌ ಸ್ವಲ್ಪ‌ ವಿನಾಯಿತಿ ನೀಡಿದೆ. ಮೂರು ದಿನಗಳ ಕಾಲ ವಿನಾಯಿತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಈ ಹಿನ್ನೆಲೆ ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗಡಿನಾಡ ಕನ್ನಡಿಗರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ADVERTISEMENT

ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರು 72 ಗಂಟೆಗಳ ಒಳಗಾಗಿ ಮಾಡಿಸಿರುವ ಕೋವಿಡ್ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯಗೊಳಿಸಿ ಆದೇಶಿಸಲಾಗಿತ್ತು. ಆದರೆ ಧಿಡೀರ್‌ ನಿರ್ಧಾರದಿಂದ ಜನರಿಗೆ ತೊಂದರೆ ಉಂಟಾಗುವ ಹಿನ್ನಲೆಯಲ್ಲಿ ಗಡಿಯಲ್ಲಿ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ತಪಾಸಣೆಗೆ ವಿನಾಯಿತಿ ನೀಡಲಾಗಿದೆ.

ಎಲ್ಲರೂ ಕೋವಿಡ್ ಪರೀಕ್ಷೆ ನಡೆಸಿ ವರದಿ ಪಡೆಯಲು ಅನುಕೂಲವಾಗಲೆಂದು ಮೂರು ದಿನಗಳ ವಿನಾಯಿತಿ ನೀಡಲಾಗಿದೆ. ಮೂರು ದಿನಗಳ ಬಳಿಕ ಮತ್ತೆ ತಪಾಸಣೆ ಆರಂಭಿಸಿದರೆ ಹೋರಾಟ ನಡೆಸಲಾಗುವುದು. ಕೇರಳ ಸಂಪರ್ಕವನ್ನೇ ಬಂದ್ ಮಾಡುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ, ತಲಪಾಡಿ ಗಡಿಯಲ್ಲಿ ಸೋಮವಾರ ತಪಾಸಣೆ ವೇಳೆ ಭಾರೀ ಸಂಖ್ಯೆಯಲ್ಲಿ ಜನರಿದ್ದರು. ಹೀಗಾಗಿ ನಿಯಮದಲ್ಲಿ ಜನರಿಗೆ ಸ್ವಲ್ಪ ವಿನಾಯಿತಿ ಕೊಟ್ಟಿದ್ದೇವೆ. ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ತೊಂದರೆ ಆಗಬಾರದು. ಪ್ರತಿಭಟನಕಾರರಿಗೆ ಮನವರಿಕೆ ಮಾಡಿ ಮೂರು ದಿನ ವಿನಾಯಿತಿ ಕೊಟ್ಟಿದ್ದೇವೆ ಎಂದು ತಿಳಿಸಿದರು‌.

ಮೂರು ದಿನಗಳಲ್ಲಿ ನೆಗೆಟಿವ್ ರಿಪೋರ್ಟ್ ಜೊತೆ ಬನ್ನಿ. ಪ್ರತಿ 14 ದಿನಕ್ಕೊಮ್ಮೆ ನಿತ್ಯ ಪ್ರಯಾಣಿಕರು ವರದಿ ತರಬೇಕು ಎಂದರು.

ಮೂರು ದಿನಗಳ ನಂತರ ವರದಿ ತರದೇ ಇದ್ರೆ ಗಡಿಯಿಂದ ವಾಪಸ್ ಕಳುಹಿಸುತ್ತೇವೆ. ಎಲ್ಲಿಂದ ಬಂದಿದ್ದಾರೋ ಅಲ್ಲಿಗೆ ಹೋಗಿ ವರದಿ ತಗೊಂಡು ಬರಬೇಕು. ಗಂಟಲು ದ್ರವ ಪರೀಕ್ಷೆಗೆ ಕೊಟ್ಟವರು ವರದಿ ಬಾರದೇ ಇದ್ದರೂ ಮೊಬೈಲ್ ಗೆ ಬಂದ ಮೆಸೇಜ್ ತೋರಿಸಬೇಕು. ಆಗ ಅವರು ಪ್ರಯತ್ನ ಮಾಡಿದ್ದಾರೆ ಎಂದು ಹೋಗಲು ಬಿಡುತ್ತೇವೆ ಎಂದು ಹೇಳಿದರು.

ಡಿವೈಎಫ್ ಐ ಪ್ರತಿಭಟನೆ

ಮಂಗಳೂರಿನ ತಲಪಾಡಿ ಗಡಿಯಲ್ಲಿ ಕೇರಳ ರಸ್ತೆ ಬಂದ್ ಮಾಡಿ ಡಿವೈಎಫ್ ಐ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೂರು ದಿನ ವಿನಾಯಿತಿ ನೀಡಿದ್ದರೂ ಒಪ್ಪದ ಕಾರ್ಯಕರ್ತರು, ದ‌.ಕ ಜಿಲ್ಲಾಡಳಿತ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ತಲಪಾಡಿಯಲ್ಲಿ ಕೇರಳ ಗಡಿ ಭಾಗದಲ್ಲಿ ರಸ್ತೆಯಲ್ಲಿ ಕುಳಿತು, ಕರ್ನಾಟಕದ ಕೆಎಸ್ ಆರ್ ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿ, ಮಂಗಳೂರಿನಿಂದ ಕಾಸರಗೋಡಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.